ಬೆಂಗಳೂರು/ನವದೆಹಲಿ: ಸಬ್ಸಿಡಿ ಮಾಹಿತಿಗಾಗಿ ಒಂದು ಕಚೇರಿ, ಅರ್ಜಿ ಸಲ್ಲಿಸಲು ಇನ್ನೊಂದು ವೆಬ್‌ಸೈಟ್, ಮಧ್ಯೆ ಯಾರದೋ ಶಿಫಾರಸು, ಈ ಜಂಜಾಟಕ್ಕೆ ಇನ್ನು ಅಂತ್ಯ ಹಾಡುವ ಭರವಸೆಯೊಂದಿಗೆ ಕೇಂದ್ರ ಸರ್ಕಾರ ರೈತರಿಗಾಗಿ 'ಅಗ್ರಿ ವೆಲ್ಫೇರ್ ಪೋರ್ಟಲ್' ಆರಂಭಿಸಿದೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ಸೋಮವಾರ ಇದನ್ನು ಉದ್ಘಾಟಿಸಿದರು. ಪಿಎಂ-ಕಿಸಾನ್, ಅಗ್ರಿಸ್ಟಾಕ್, ಫಸಲ್ ಭೀಮಾ ಯೋಜನೆಯಂತಹ ಪ್ರಮುಖ ಕಾರ್ಯಕ್ರಮಗಳ ಮಾಹಿತಿ ಮತ್ತು ಸೇವೆಗಳು ಒಂದೇ ಪೋರ್ಟಲ್ ದೊರೆಯಲಿವೆ. ಅರ್ಹತೆ ಪರಿಶೀಲನೆ, ಅರ್ಜಿ ಸಲ್ಲಿಕೆ ಆನ್‌ಲೈನ್‌ನಲ್ಲೇ ನಡೆಯಲಿದ್ದು, ನೆರವು ನೇರ ನಗದು ವರ್ಗಾವಣೆ (DBT) ಮೂಲಕ ಖಾತೆ ಸೇರಲಿದೆ. ಇದರಿಂದ ಮಧ್ಯವರ್ತಿಗಳ ಪಾತ್ರ ಕುಗ್ಗಲಿದೆ ಎಂಬುದು ಸರ್ಕಾರದ ಲೆಕ್ಕಾಚಾರ. ಜೊತೆಗೆ ಹವಾಮಾನ ಮುನ್ಸೂಚನೆ, ವೈಜ್ಞಾನಿಕ ಕೃಷಿ ಪದ್ಧತಿ, ಬೀಜ-ರಸಗೊಬ್ಬರ ಲಭ್ಯತೆ ಹಾಗೂ ಮಾರುಕಟ್ಟೆ ಬೆಲೆಗಳ ಅಧಿಕೃತ ಮಾಹಿತಿಯೂ ಇಲ್ಲಿರುತ್ತದೆ. ರೈತ ಉತ್ಪಾದಕ ಸಂಸ್ಥೆಗಳು (FPO), ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (PACS), ಕೃಷಿ ವಿಜ್ಞಾನಿಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್‌ಗಳೂ ಇದೇ ವೇದಿಕೆಯಡಿ ಒಗ್ಗೂಡಲಿವೆ ಎಂದು ಸಚಿವರ ತಿಳಿಸಿದರು. ಈ ಪೋರ್ಟಲ್ ಸಾಧಾರಣ ಸ್ಮಾರ್ಟ್‌ಫೋನ್‌ಗಳಲ್ಲೂ, ದುರ್ಬಲ ನೆಟ್‌ವರ್ಕ್ ಇರುವ ಪ್ರದೇಶಗಳಲ್ಲೂ ಸುಗಮವಾಗಿ ಕೆಲಸ ಮಾಡುತ್ತದೆ ಎನ್ನಲಾಗಿದೆ. ಸ್ಕ್ರೀನ್ ರೀಡರ್ ಬೆಂಬಲ ಮತ್ತು ಸರಳ ನ್ಯಾವಿಗೇಶನ್ ಮೂಲಕ ದೃಷ್ಟಿಹೀನರು ಸೇರಿದಂತೆ ವಿಶೇಷಚೇತನರೂ ಇದನ್ನು ಬಳಸಬಹುದು. ಹಾಗೂಕಡಿಮೆ ಓದಿರುವ ರೈತರೂ ಅರ್ಥಮಾಡಿಕೊಳ್ಳುವಂತೆ ಭಾಷೆ ಸರಳವಾಗಿರಬೇಕು ಎಂದೂ ತಿಳಿಸಿದ ಅವರು, ಪೋರ್ಟಲ್ ಬಳಕೆ ಕಲಿಸಲು ದೇಶಾದ್ಯಂತ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿಶೇಷ ತರಬೇತಿ ಅಭಿಯಾನ ನಡೆಯಲಿದೆ ಎಂದು ಅವರು ತಿಳಿಸಿದರು ಕೃಷಿ ಕಾರ್ಯದರ್ಶಿ ಅತೀಶ್ ಚಂದ್ರ, ಹೆಚ್ಚುವರಿ ಕಾರ್ಯದರ್ಶಿ ಪ್ರಮೋದ್ ಮೆಹರ್ದಾ ಹಾಗೂ ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಅಧಿಕಾರಿಗಳು ಉಪಸ್ಥಿತರಿದ್ದರು.


ಕಾಮೆಂಟ್‌ಗಳು (0)