ಸುಂಟಿಕೊಪ್ಪ: ಜೀವಕ್ಕೆ ಅಪಾಯ ತಂದೊಡ್ಡುವ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಟಂಟ್ ಪ್ರದರ್ಶಿಸಿದ ಮೈಸೂರಿನ ಯುವಕನನ್ನು ಸುಂಟಿಕೊಪ್ಪ ಪೊಲೀಸರು ಪತ್ತೆಹಚ್ಚಿ, ದಂಡ ವಿಧಿಸಿದ್ದಾರೆ. ಕುಶಾಲನಗರ-ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯ ಕೊಡಗರಹಳ್ಳಿ ಬಳಿ ಮೈಸೂರಿನ ಕೆ.ಆರ್.ಮೊಹಲ್ಲಾದ ಬಸವೇಶ್ವರ ರಸ್ತೆ ನಿವಾಸಿ ಕೆ.ವರುಣ್ ಎಂಬಾತ ಬೈಕ್‌ನಲ್ಲಿ ಸಾಹಸ ಪ್ರದರ್ಶಿಸಿದ್ದ. ಹಿಂದೆ ಬರುತ್ತಿದ್ದ ವಾಹನದ ಕ್ಯಾಮೆರಾದಲ್ಲಿ ಈ ದೃಶ್ಯ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ವಿಡಿಯೋ ನೋಡಿದ ಸಾರ್ವಜನಿಕರು ಸವಾರನ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ವಿಷಯ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಕ್ರಮಕ್ಕೆ ಸೂಚಿಸಿದರು. ಇದರಂತೆ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ಸಿಬ್ಬಂದಿ ತನಿಖೆ ನಡೆಸಿ, ಬೈಕ್ ಸವಾರನನ್ನು ಪತ್ತೆಹಚ್ಚಿದರು. ಬೈಕ್ ವಿನೀತ್ ಕೆ. ಎಂಬವರ ಹೆಸರಿನಲ್ಲಿ ನೋಂದಣಿಯಾಗಿರುವುದು ತಿಳಿದುಬಂದಿದೆ. ಹೆಲ್ಮೆಟ್ ಧರಿಸದಿರುವುದು, ಲೇನ್ ಶಿಸ್ತು ಉಲ್ಲಂಘನೆ, ಅಪಾಯಕಾರಿ ಚಾಲನೆ ಹಾಗೂ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಗಳಡಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಒಟ್ಟು ₹2,500 ದಂಡ ವಿಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಹೆದ್ದಾರಿಗಳಲ್ಲಿ ಸ್ಟಂಟ್, ವೀಲಿಂಗ್ ಮಾಡುವುದು ತನ್ನ ಜೀವಕ್ಕಷ್ಟೇ ಅಲ್ಲದೆ ಇತರ ವಾಹನ ಸವಾರರ ಪ್ರಾಣಕ್ಕೂ ಅಪಾಯ ತರುತ್ತದೆ. ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ. ✍️ ಕೆ .ಎಸ್. ಅನಿಲ್ ಕುಮಾರ್ ಸುಂಟಿಕೊಪ್ಪ


ಕಾಮೆಂಟ್‌ಗಳು (0)