ಕುಶಾಲನಗರ, ಅ.27: ಪಕ್ಷದಲ್ಲಿನ ಆಂತರಿಕ ರಾಜಕಾರಣಕ್ಕೆ ಬೇಸತ್ತು ರಾಜಕೀಯ ನಿವೃತ್ತಿ ಘೋಷಿಸಿದ್ದ ಪ್ರಭಲ ರಾಜಕಾರಣಿ ವಿ ಪಿ ಶಶಿಧರ್ ಅವರು ತಮ್ಮ ಎಂದಿನ ಶೈಲಿಯಲ್ಲಿ ಸಾಮಾಜಿಕ ಹೋರಾಟಗಾರರಾಗಿ ಕುಶಾಲನಗರದಲ್ಲಿ ಇಂದು ನಡೆಯುತ್ತಿರುವ ಪ್ರತಿಭಟನೆಯೊಂದರ ನೇತೃತ್ವ ವಹಿಸಿದ್ದಾರೆ. ಮೂರೂವರೆ ದಶಕಗಳ ಕಾಲ ಸಕ್ರಿಯ ರಾಜಕೀಯದಲ್ಲಿ ಗುರುತಿಸಿಕೊಂಡು, ಬಡವರ, ಶೋಷಿತರ ಮತ್ತು ಜನಸಾಮಾನ್ಯರ ಧ್ವನಿಯಾಗಿ ಗುರುತಿಸಿಕೊಂಡಿರುವ ವಿ.ಪಿ. ಶಶಿಧರ್. ಪಕ್ಷದೊಳಗಿನ ಆಂತರಿಕ ಸಂಘರ್ಷದಿಂದ ಮನನೊಂದು ಕೆಲವು ದಿನಗಳ ಹಿಂದೆ ರಾಜಕೀಯ ನಿವೃತ್ತಿ ಘೋಷಿಸಿದ್ದರೂ, ಜನರ ಕಷ್ಟಕ್ಕೆ ಮಿಡಿಯುವ ಅವರ ಗುಣ ಮಾತ್ರ ನಿವೃತ್ತಿಯಾಗಿಲ್ಲ. ಯಾವುದೇ ರಾಜಕೀಯ ಪದವಿ, ಸರ್ಕಾರಿ ಹುದ್ದೆ ಅಥವಾ ಅಧಿಕಾರದ ಬಲವಿಲ್ಲದೆ, ಕೇವಲ ಜನರ ವಿಶ್ವಾಸವನ್ನೇ ಬಂಡವಾಳವಾಗಿಸಿಕೊಂಡು ಹಿಂದಿನಂತೆಯೇ ಸಾಮಾಜಿಕ ಹೋರಾಟಗಾರರಾಗಿ ಅವರು ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ಹುದ್ದೆಗಿಂತ ಜನಸೇವೆಯೇ ದೊಡ್ಡದು ಎಂಬ ಅವರ ನಡೆ ಹಾಗು ಬದ್ಧತೆ ಅಪಾರ ಹಿತೈಷಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ನೇತೃತ್ವದಲ್ಲಿ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೀಗೆಹೊಸೂರು, ಜೇನುಕಲ್ಲು ಬೆಟ್ಟ ಮತ್ತು ಭುವನಗಿರಿ ಗ್ರಾಮಸ್ಥರು ಇಂದು (ಮಂಗಳವಾರ) ಬೆಳಿಗ್ಗೆ 10.30ಕ್ಕೆ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಜೇನುಕಲ್ಲು ಬೆಟ್ಟದ ಸರ್ಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನ ಹಾಗೂ ಕಟ್ಟಡ ನಿರ್ಮಾಣಕ್ಕಾಗಿ ಮೀಸಲಿಟ್ಟಿದ್ದ ಸರ್ಕಾರಿ (ಪೈಸಾರಿ) ಜಾಗವನ್ನು ಅತಿಕ್ರಮಿಸಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇದನ್ನು ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ಕೆಲವರು ಸುಳ್ಳು ದೂರು ನೀಡಿ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದೂ ದೂರಿದ್ದಾರೆ. ಅತಿಕ್ರಮಿತ ಜಾಗವನ್ನು ತೆರವುಗೊಳಿಸಿ, ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಸಂಬಂಧ ತಮ್ಮ ಸಂಕಟವನ್ನು ಹೊತ್ತು ಶಶಿಧರ್ ಅವರನ್ನು ಭೇಟಿ ಮಾಡಿದ್ದ ಗ್ರಾಮಸ್ಥರಿಗೆ, ಈ ಹಿಂದೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಅವರು ಭರವಸೆ ನೀಡಿದ್ದರು. ಅಗತ್ಯವಿದ್ದರೆ ಗ್ರಾಮಸ್ಥರ ಪರವಾಗಿ ಹೋರಾಟಕ್ಕೆ ಇಳಿಯುವುದಾಗಿಯೂ ತಿಳಿಸಿದ್ದರು. ಆ ಮಾತಿಗೆ ತಪ್ಪದೆ, ಈಗ ಹೋರಾಟದ ನೇತೃತ್ವ ವಹಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.


ಕಾಮೆಂಟ್ಗಳು (0)