ನಾಪೋಕ್ಲು: ಪವಿತ್ರ ಕಾವೇರಿ ತೀರ್ಥೋದ್ಭವದ ನಂತರ ತುಲಾ ಮಾಸದ ಹತ್ತನೇ ದಿನದಂದು ಆಚರಿಸಲಾಗುವ ಪ್ರಸಿದ್ಧ 'ಪತ್ತಾಲೋಧಿ' ಆರಾಧನೋತ್ಸವವು ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಮಂಗಳವಾರ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಸಂಪನ್ನಗೊಂಡಿತು. ಪರದಂಡ ಕುಟುಂಬಸ್ಥರ ಮುಖಂಡತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಈ ವಿಶೇಷ ಆರಾಧನೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ , ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ತುಲಾಭಾರ ಸೇವೆಗಳನ್ನು ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಈ ಸಂದರ್ಭ ದೇವರ ನೃತ್ಯ ಬಲಿ , ಅನ್ನಪ್ರಸಾದ ಜರುಗಿತ್ತು .ಅರ್ಚಕ ಜಗದೀಶ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿಕೊಟ್ಟರು . ಕಕ್ಕಬ್ಬೆಯ ಪಾಡಿ ದೇವಾಲಯ ಮಾತ್ರವಲ್ಲದೆ, ಪೇರೂರು ಹಾಗೂ ನೆಲಜಿ ಗ್ರಾಮಗಳ ಶ್ರೀ ಇಗ್ಗುತಪ್ಪ ದೇವಾಲಯಗಳಲ್ಲೂ ಪತ್ತಾಲೋಧಿ ಉತ್ಸವವು ಬಹಳ ಸಂಭ್ರಮದಿಂದ ನೆರವೇರಿತು. ದೇವಾಲಯದ ದೇವತಕ್ಕರು ಭಕ್ತ ಜನ ಸಂಘದ ಅಧ್ಯಕ್ಷ ಅಧ್ಯಕ್ಷರು ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ದೇವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, "ಪತ್ತಾಲೋಧಿ ದಿನವು ಇಗ್ಗುತ್ತಪ್ಪ ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರವಾದ ದಿನವಾಗಿದೆ. ನಾಡಿನ ಎಲ್ಲಾ ಭಕ್ತರಿಗೂ ದೇವ ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಕ್ಷೇಮಾಭಿವೃದ್ಧಿ ಕರುಣಿಸಲಿ" ಎಂದು ಪ್ರಾರ್ಥಿಸಿದರು. ಈ ಸಂದರ್ಭ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ವ್ಯವಸ್ಥಾಪನ ಸಮಿತಿ , ಭಕ್ತ ಜನ ಸಂಘದ ಸಮಿತಿ ಸದಸ್ಯರು ,ಪಾರು ಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು. ವರದಿ✍️- ದುಗ್ಗಳ ಸದಾನಂದ



ಕಾಮೆಂಟ್ಗಳು (0)