Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಜ್ಯ

ಅಕ್ರಮ ಸಿಮ್ ಜಾಲ ಪತ್ತೆಗೆ ಮಾರ್ಗಸೂಚಿ ರೂಪಿಸಿ: ಸೈಬರ್ ಕಮಾಂಡ್ ಡಿಜಿಪಿಗೆ ಹೈಕೋರ್ಟ್ ಸೂಚನೆ

by Kodagu Varadi•ಅಕ್ಟೋಬರ್ 26, 2026BREAKING
ಅಕ್ರಮ ಸಿಮ್ ಜಾಲ ಪತ್ತೆಗೆ ಮಾರ್ಗಸೂಚಿ ರೂಪಿಸಿ: ಸೈಬರ್ ಕಮಾಂಡ್ ಡಿಜಿಪಿಗೆ ಹೈಕೋರ್ಟ್ ಸೂಚನೆ

ಬೆಂಗಳೂರು, ಅ. 26: ಗ್ರಾಹಕರ ಆಧಾರ್ ಹಾಗೂ ಗುರುತಿನ ದಾಖಲೆಗಳನ್ನು ಅವರ ಅನುಮತಿಯಿಲ್ಲದೆ ಬಳಸಿ ಸಿಮ್ ಕಾರ್ಡ್‌ಗಳನ್ನು ಅಕ್ರಮವಾಗಿ ಸಕ್ರಿಯಗೊಳಿಸಿ ಮಾರಾಟ ಮಾಡುವ ಜಾಲವನ್ನು ಪತ್ತೆಹಚ್ಚಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಕರ್ನಾಟಕ ಹೈಕೋರ್ಟ್, ಸೈಬರ್ ಕಮಾಂಡ್‌ನ ಡಿಜಿಪಿಗೆ ನಿರ್ದೇಶನ ನೀಡಿದೆ. 75 ಪೂರ್ವಸಕ್ರಿಯ ಸಿಮ್ ಕಾರ್ಡ್‌ಗಳನ್ನು ಹೊಂದಿದ್ದ ಆರೋಪದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಲ್ಲಿಕಾರ್ಜುನ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಈ ನಿರ್ದೇಶನ ನೀಡಿದೆ. ಸಿಮ್ ಕಾರ್ಡ್‌ಗಳು ಕೇವಲ ಸಂವಹನ ಸಾಧನವಲ್ಲ; ಅವು ಡಿಜಿಟಲ್ ಗುರುತು, ಒಟಿಪಿ ಹಾಗೂ ಬ್ಯಾಂಕಿಂಗ್ ವಹಿವಾಟುಗಳಿಗೆ ಅಗತ್ಯವಾದ ಸಾಧನಗಳಾಗಿವೆ. ಅಮಾಯಕರ ಹೆಸರಿನಲ್ಲಿ ಅವರ ಅರಿವಿಲ್ಲದೆ ಸಿಮ್ ಸಕ್ರಿಯಗೊಳಿಸಿದರೆ ಸೈಬರ್ ಅಪರಾಧ, ಗುರುತಿನ ಕಳವು ಮತ್ತು ಹಣಕಾಸು ವಂಚನೆಗೆ ದಾರಿಯಾಗುತ್ತದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಜಿಯೋ, ವೊಡಾಫೋನ್ ಸೇರಿದಂತೆ ಟೆಲಿಕಾಂ ಸಂಸ್ಥೆಗಳು ಸಿಮ್ ವಿತರಣೆ ಮತ್ತು ಸಕ್ರಿಯಗೊಳಿಸುವ ಪ್ರಕ್ರಿಯೆಗಳನ್ನು ಪರಿಶೀಲಿಸಬೇಕು. ವಿತರಕರಿಗೆ ಪೂರೈಸಿದ, ಮಾರಾಟವಾದ, ಹಿಂದಿರುಗಿಸಿದ ಹಾಗೂ ರದ್ದಾದ ಸಿಮ್‌ಗಳ ಲೆಕ್ಕ ಹೊಂದಾಣಿಕೆ ವ್ಯವಸ್ಥೆ ಇರಬೇಕು; ಪ್ರಮೋಟರ್‌ಗಳು ಮತ್ತು ವಿತರಕರ ನೇಮಕಾತಿ, ದಾಸ್ತಾನು ಹಾಗೂ ದಾಖಲೆ ಪರಿಶೀಲನೆಯ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಬೇಕು ಎಂದು ಪೀಠ ಸೂಚಿಸಿದೆ. ಅನಧಿಕೃತ ಸಕ್ರಿಯಗೊಳಿಸುವಿಕೆಯ ಬಗ್ಗೆ ದೂರು ಸಲ್ಲಿಸಲು ಗ್ರಾಹಕರಿಗೆ ಸುಲಭ ವ್ಯವಸ್ಥೆಯನ್ನೂ ಕಲ್ಪಿಸಬೇಕು. ಜಿಯೋ ಪ್ರಮೋಟರ್ ಆಗಿದ್ದ ಮಲ್ಲಿಕಾರ್ಜುನ, ಸಿಮ್ ಖರೀದಿಗೆ ಬರುತ್ತಿದ್ದ ಗ್ರಾಹಕರ ದಾಖಲೆ ಮತ್ತು ಭಾವಚಿತ್ರಗಳನ್ನು ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪವಿದೆ. ಎಚ್‌ಎಎಲ್ ಪೊಲೀಸರು 55 ಜಿಯೋ ಮತ್ತು 20 ವೊಡಾಫೋನ್ ಸಿಮ್‌ಗಳನ್ನು ಜಪ್ತಿ ಮಾಡಿ ಆರೋಪ ಪಟ್ಟಿ ಸಲ್ಲಿಸಿದ್ದರು. ಆದರೆ, ತನಿಖಾ ಮಾರ್ಗಸೂಚಿಗಳು ಕಾನೂನಿನ ಚೌಕಟ್ಟಿನೊಳಗೆ ಇರಬೇಕು; ಸಾರ್ವಜನಿಕರ ವೈಯಕ್ತಿಕ ದತ್ತಾಂಶದ ಮೇಲೆ ಅನಗತ್ಯ ನಿಗಾ ಅಥವಾ ಗೌಪ್ಯತೆಯ ಉಲ್ಲಂಘನೆ ಆಗಬಾರದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!