ಬೆಂಗಳೂರು: ಕರ್ತವ್ಯ ನಿರತ ಸಂಚಾರಿ ಪೊಲೀಸ್ ಅಧಿಕಾರಿಯ ಮೇಲೆ ಕಾರು ಹರಿಸಿ ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ನಾಗರಭಾವಿಯ ರಾಮಾಂಜಲು ವಿರುದ್ಧದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. "ಕಾರನ್ನು ಬೆದರಿಕೆ ಅಥವಾ ಹಿಂಸೆಯ ಸಾಧನವಾಗಿ ಪರಿವರ್ತಿಸಲು ಅನುಮತಿ ನೀಡಲಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ. ಆರೋಪಗಳನ್ನು ಪರೀಕ್ಷಿಸದೆ ವಿಚಾರಣೆ ರದ್ದುಗೊಳಿಸಿದರೆ ಕಾನೂನಿನ ನಿಯಮವೇ ಅರ್ಥ ಕಳೆದುಕೊಳ್ಳುತ್ತದೆ ಎಂದೂ ಅಭಿಪ್ರಾಯಪಟ್ಟಿದೆ. ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿಯ ಜನರಲ್ ಮ್ಯಾನೇಜರ್ ಆಗಿರುವ ರಾಮಾಂಜಲು, 2021ರ ಅಕ್ಟೋಬರ್ 23ರಂದು ಎಚ್‌ಎಎಲ್ ಠಾಣಾ ವ್ಯಾಪ್ತಿಯಲ್ಲಿ ಹುಂಡೈ ಕ್ರೆಟಾ ಕಾರು ಚಲಾಯಿಸುತ್ತಿದ್ದರು. ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ತಪಾಸಣೆಗೆ ನಿಯೋಜಿತರಾಗಿದ್ದ ಹೆಡ್ ಕಾನ್‌ಸ್ಟೆಬಲ್ ಕಾರು ತಡೆಯಲು ಮುಂದಾದಾಗ, ವಾಹನ ನಿಲ್ಲಿಸದೆ ಮೈಮೇಲೆ ಹರಿಸುವ ರೀತಿಯಲ್ಲಿ ಚಲಾಯಿಸಿದರು ಎಂಬುದು ಆರೋಪ. ಇದರಿಂದ ಹೆಡ್ ಕಾನ್‌ಸ್ಟೆಬಲ್ ಅವರ ತೊಡೆ ಮತ್ತು ಪಾದಗಳಿಗೆ ಗಾಯಗಳಾಗಿದ್ದು, ಮದ್ಯಪಾನ ಪತ್ತೆ ಯಂತ್ರಕ್ಕೂ ಹಾನಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಎಚ್‌ಎಎಲ್ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 353, 307, 279, 427 ಮತ್ತು 506ರ ಅಡಿ ಪ್ರಕರಣ ದಾಖಲಿಸಿದ್ದಾರೆ.



ಕಾಮೆಂಟ್‌ಗಳು (0)