ಬೆಂಗಳೂರು: ಮಾತೃತ್ವ ರಜೆ ಮುಗಿದ ನಂತರವೂ ಅನುಮತಿಯಿಲ್ಲದೆ ಬಹುಕಾಲ ಕೆಲಸಕ್ಕೆ ಹಾಜರಾಗದ ಉದ್ಯೋಗಿಯನ್ನು ಸೇವೆಯಿಂದ ಬಿಡುಗಡೆ ಮಾಡಿದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಅಕ್ಟೋಬರ್ 16ರಂದು ಈ ಆದೇಶ ನೀಡಿ, ಮಹಿಳೆಯ ಅರ್ಜಿಯನ್ನು ವಜಾಗೊಳಿಸಿದೆ. ಮಾತೃತ್ವ ರಜೆ ಘನತೆ, ಮಾತೃತ್ವ ಮತ್ತು ಸಮಾನತೆಗೆ ಸಂಬಂಧಿಸಿದ ಸಾಂವಿಧಾನಿಕ ಬದ್ಧತೆಯಾದರೂ, ಅದರ ಕಾನೂನುಬದ್ಧ ಮಿತಿಯನ್ನು ಮೀರಿ ಅನಧಿಕೃತ ಗೈರಿಗೆ ಸಮರ್ಥನೆಯಾಗಿ ಬಳಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಸರ್ಕಾರಿ ಹುದ್ದೆ ಜವಾಬ್ದಾರಿಯುತ ಸ್ಥಾನವಾಗಿದ್ದು, ಕರ್ತವ್ಯನಿಷ್ಠೆ ಮತ್ತು ಶಿಸ್ತು ಅಗತ್ಯ; ಮಗುವಿನ ಜನನದ ಕಾರಣ ಮುಂದಿಟ್ಟು ಉದ್ಯೋಗದ ಹೊಣೆಯಿಂದ ಶಾಶ್ವತವಾಗಿ ದೂರ ಉಳಿಯಲಾಗದು ಎಂದೂ ಪೀಠ ಅಭಿಪ್ರಾಯಪಟ್ಟಿದೆ. ಪ್ರಕರಣದ ಹಿನ್ನೆಲೆ: ಅರ್ಜಿದಾರರು 2019ರ ಜೂನ್ 6ರಂದು ಹೈಕೋರ್ಟ್ನಲ್ಲಿ ಸಾಫ್ಟ್ವೇರ್ ತಂತ್ರಜ್ಞೆಯಾಗಿ ಪ್ರೊಬೇಷನರಿ ಆಧಾರದಲ್ಲಿ ನೇಮಕಗೊಂಡಿದ್ದರು. 2023ರ ಜುಲೈ 1ರಿಂದ ಮಾತೃತ್ವ ರಜೆಯಲ್ಲಿದ್ದ ಅವರು, ಬಳಿಕ ವಿವಿಧ ಕಾರಣ ನೀಡಿ ರಜೆ ವಿಸ್ತರಿಸಿಕೊಂಡು 2024ರ ಆಗಸ್ಟ್ 14ರವರೆಗೆ ಕರ್ತವ್ಯಕ್ಕೆ ಬಂದಿರಲಿಲ್ಲ. ಒಟ್ಟು 13 ತಿಂಗಳ ಮಾತೃತ್ವ ರಜೆ ಮಂಜೂರಾಗಿತ್ತು. 2024ರ ಸೆಪ್ಟೆಂಬರ್ 25ರಂದು ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಕೆಲಸಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಮಗುವಿನ ಆರೈಕೆಗೆ ಬೇರೆ ಯಾರೂ ಇಲ್ಲ ಹಾಗೂ ಆರೋಗ್ಯ ಸಮಸ್ಯೆಗಳಿವೆ ಎಂದು ತಿಳಿಸಿ ಅವರು ಮತ್ತೆ ರಜೆ ವಿಸ್ತರಣೆ ಕೋರಿದ್ದರು. ಪ್ರೊಬೇಷನ್ ಅವಧಿಯಲ್ಲೇ ಇದ್ದು ಕರ್ತವ್ಯಕ್ಕೆ ಮರಳದ ಕಾರಣ ಹುದ್ದೆಗೆ ಸೂಕ್ತರಲ್ಲವೆಂದು ಪರಿಗಣಿಸಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ 2025ರ ಏಪ್ರಿಲ್ 15ರಂದು ಅವರನ್ನು ಬಿಡುಗಡೆಗೊಳಿಸಿದ್ದರು. ಮಾತೃತ್ವ ರಜೆಯ ಅವಧಿಯಲ್ಲೇ ಬಿಡುಗಡೆ ಮಾಡಿರುವುದು ಕಾನೂನುಬಾಹಿರ, ಅನಧಿಕೃತ ಗೈರಿನ ಆರೋಪವಿದ್ದರೆ ಇಲಾಖಾ ವಿಚಾರಣೆ ನಡೆಸಬೇಕಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದರೆ ರಜೆ ನಿರಾಕರಿಸಿಲ್ಲ, ರಜೆ ಮುಗಿದ ನಂತರದ ಗೈರು ಮತ್ತು ನೋಟಿಸ್ ಉಲ್ಲಂಘನೆಯೇ ಬಿಡುಗಡೆಗೆ ಕಾರಣ ಎಂದು ರಿಜಿಸ್ಟ್ರಾರ್ ಜನರಲ್ ಪರ ವಕೀಲರು ಪ್ರತಿವಾದಿಸಿದ್ದರು. ಮಾತೃತ್ವ ರಜೆಯ ಹಕ್ಕು ಮತ್ತು ರಜೆ ಮುಗಿದ ಬಳಿಕ ಕರ್ತವ್ಯಕ್ಕೆ ಮರಳುವ ಹೊಣೆಯನ್ನು ಪ್ರತ್ಯೇಕವಾಗಿ ನೋಡಬೇಕು ಎಂದು ಪೀಠ ಹೇಳಿದೆ.
ಮಾತೃತ್ವ ರಜೆ ನೆಪದಲ್ಲಿ ದೀರ್ಘ ಗೈರು ಸಲ್ಲದು: ಹೈಕೋರ್ಟ್
by Kodagu Varadi•ಅಕ್ಟೋಬರ್ 26, 2026BREAKING

ಕಾಮೆಂಟ್ಗಳು (0)