ಬೆಂಗಳೂರು, ಅ.28: ರಾಜ್ಯದ ಟ್ಯುಟೋರಿಯಲ್ ಸಂಸ್ಥೆಗಳು ಮತ್ತು ಕೋಚಿಂಗ್ ಕೇಂದ್ರಗಳನ್ನು ನಿಯಂತ್ರಿಸಲು ಸರ್ಕಾರ "ಕರ್ನಾಟಕ ಟ್ಯುಟೋರಿಯಲ್ ಸಂಸ್ಥೆಗಳು ಅಥವಾ ಕೋಚಿಂಗ್ ಕೇಂದ್ರಗಳ (ನೋಂದಣಿ ಮತ್ತು ನಿಯಂತ್ರಣ) ನಿಯಮಗಳು, 2026" ಕರಡನ್ನು ಇಂದು ಪ್ರಕಟಿಸಿದೆ. ಸಾರ್ವಜನಿಕರು 15 ದಿನಗಳೊಳಗೆ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಗೆ ಆಕ್ಷೇಪಣೆ ಅಥವಾ ಸಲಹೆ ಸಲ್ಲಿಸಬಹುದಾಗಿದೆ. . ಕರಡಿನ ಪ್ರಕಾರ, ನೋಂದಣಿ ಇಲ್ಲದೆ ಕೋಚಿಂಗ್ ಕೇಂದ್ರ ನಡೆಸುವಂತಿಲ್ಲ. ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹಾಗೂ ನೋಂದಣಿ ಶುಲ್ಕ ₹15,000 ಹಾಗೂ ಪ್ರತಿ ಕೋರ್ಸ್ಗೆ ₹5,000 ಆಗಿದ್ದು ನೋಂದಣಿ ಮೂರು ವರ್ಷ ಮಾನ್ಯವಾಗಿರುತ್ತದೆ. ಜಿಲ್ಲಾಧಿಕಾರಿ ನೋಂದಣಿ ಪ್ರಾಧಿಕಾರವಾಗಿರುತ್ತಾರೆ. ಈಗಾಗಲೇ ನಡೆಯುತ್ತಿರುವ ಕೇಂದ್ರಗಳು 90 ದಿನಗಳೊಳಗೆ ಅರ್ಜಿ ಸಲ್ಲಿಸಬೇಕು; ತಡವಾದರೆ ದಿನಕ್ಕೆ ₹100 ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಹಾಗೂ ಆರು ತಿಂಗಳ ನಂತರ ಸೀಲ್ ಮಾಡುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ. ವಿದ್ಯಾರ್ಥಿಗಳ ಹಿತರಕ್ಷಣೆ ದೃಷ್ಟಿಯಿಂದ ಕೋಚಿಂಗ್ ಕೇಂದ್ರಗಳಿಗೆ 15 ವರ್ಷದೊಳಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ, ಜೊತೆಗೆ ದಿನಕ್ಕೆ ಗರಿಷ್ಠ ಐದು ಗಂಟೆ ಬೋಧನೆ, ರ್ಯಾಂಕ್ ಖಾತರಿ ಹಾಗೂ ದಾರಿತಪ್ಪಿಸುವ ಜಾಹೀರಾತಿಗೆ ನಿಷೇಧ ವಿಧಿಸಲಾಗಿದೆ. ವಿದ್ಯಾರ್ಥಿಗಳಿಂದ ಶುಲ್ಕವನ್ನು ಕನಿಷ್ಠ ನಾಲ್ಕು ಕಂತುಗಳಲ್ಲಿ ಪಡೆಯಬೇಕು, ಮಧ್ಯದಲ್ಲಿ ಕೋರ್ಸ್ ಬಿಟ್ಟರೆ 10 ದಿನಗಳಲ್ಲಿ ಪ್ರಮಾಣಾನುಗುಣ ಮರುಪಾವತಿ ಮಾಡಬೇಕು. ಆಪ್ತಸಮಾಲೋಚಕರ ಸೇವೆ, ಅಗ್ನಿ ಮತ್ತು ಕಟ್ಟಡ ಸುರಕ್ಷತೆ ಪ್ರಮಾಣಪತ್ರ, ಸಿಸಿಟಿವಿ ಕಡ್ಡಾಯವಾಗಿರುತ್ತದೆ , ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ಶಿಕ್ಷಕರು ಕೋಚಿಂಗ್ ಕೇಂದ್ರಗಳಲ್ಲಿ ಕೆಲಸ ಮಾಡುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಮೇಲ್ಮನವಿ ಪ್ರಾಧಿಕಾರ ಗರಿಷ್ಠ ₹5 ಲಕ್ಷ ದಂಡ ವಿಧಿಸಬಹುದು ಅಥವಾ ನೋಂದಣಿ ರದ್ದುಪಡಿಸಬಹುದು. ಅಂತಿಮ ಅಧಿಸೂಚನೆಯ ದಿನದಿಂದ ನಿಯಮ ಜಾರಿಗೆ ಬರಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ
ಕೋಚಿಂಗ್ ಕೇಂದ್ರಗಳಿಗೆ ನೋಂದಣಿ ಕಡ್ಡಾಯ: ಕರಡು ನಿಯಮ ಪ್ರಕಟ
by Kodagu Varadi•ಅಕ್ಟೋಬರ್ 28, 2026BREAKING

ಕಾಮೆಂಟ್ಗಳು (0)