ಬೆಂಗಳೂರು: ಕರ್ನಾಟಕ ನ್ಯಾಯಾಲಯಗಳ ಕಲಾಪಗಳ ನೇರ ಪ್ರಸಾರ ಮತ್ತು ರೆಕಾರ್ಡಿಂಗ್ ನಿಯಮಗಳು, 2021ರ ನಿಯಮ 8 ಮತ್ತು 10ರ ಪ್ರಕಾರ, ಪೀಠವು ನಿರ್ದಿಷ್ಟವಾಗಿ ಆದೇಶಿಸದ ಹೊರತು ರೆಕಾರ್ಡಿಂಗ್ಗಳ ಪ್ರತಿ ಪಡೆಯುವ ಹಕ್ಕು ಅರ್ಜಿದಾರರಿಗೆ ಇಲ್ಲ ಎಂದು ಹೈಕೋರ್ಟ್ನ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಸ್ಪಷ್ಟಪಡಿಸಿದ್ದಾರೆ. ಸಂಗ್ರಹಿಸಿದ ಕಲಾಪ ದಾಖಲೆಗಳ ಪ್ರತಿ ನೀಡಲು ನಿರಾಕರಿಸಿದ್ದ ಹೈಕೋರ್ಟ್ ಆಡಳಿತ ವಿಭಾಗದ ನಿರ್ಧಾರ ಪ್ರಶ್ನಿಸಿ 72 ವರ್ಷದ ಎ. ಸತ್ಯನಾರಾಯಣ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಅರ್ಜಿದಾರರು ನಿಯಮ 8(3)ರ ಅಡಿಯಲ್ಲಿ ರೆಕಾರ್ಡಿಂಗ್ ಪ್ರತಿ ಕೋರಿದ್ದರು. ಆದರೆ ನಿಯಮ 10(1)(ii)ರ ಪ್ರಕಾರ, ಪೀಠ ಬೇರೆ ರೀತಿ ನಿರ್ದೇಶಿಸದ ಹೊರತು ಸಂಗ್ರಹ ದತ್ತಾಂಶವು ಕಲಾಪಗಳ ಅಧಿಕೃತ ದಾಖಲೆಯಾಗುವುದಿಲ್ಲ ಎಂದು ತಿಳಿಸಿ ಆಡಳಿತ ವಿಭಾಗ ಮನವಿ ತಿರಸ್ಕರಿಸಿತ್ತು. ಆಡಳಿತ ವಿಭಾಗದ ನಿರ್ಧಾರವು ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿಗೆ ವಿರುದ್ಧ ಎಂದು ಅರ್ಜಿದಾರರು ವಾದಿಸಿದ್ದರು. ನಿಯಮ 8(3)ರ ಅಧಿಕಾರ ಚಲಾವಣೆಗೆ ಸ್ಪಷ್ಟ ಮಾರ್ಗಸೂಚಿ ಅಥವಾ ಪ್ರಮಾಣಿತ ಕಾರ್ಯವಿಧಾನ ರೂಪಿಸಲು ನಿರ್ದೇಶನ ನೀಡಬೇಕೆಂದೂ ಕೋರಿದ್ದರು. ಪ್ರಕರಣ ಪರಿಶೀಲಿಸಿದ ನ್ಯಾಯಾಲಯ, “ನಿಯಮ 8 ಮತ್ತು 10ರ ಸಂಯೋಜಿತ ಓದಿನಿಂದ, ನ್ಯಾಯಾಲಯ ನಿರ್ದಿಷ್ಟವಾಗಿ ಆದೇಶಿಸದ ಹೊರತು ರೆಕಾರ್ಡಿಂಗ್ಗಳ ಪ್ರತಿ ಕೋರುವ ಯಾವುದೇ ಹಕ್ಕನ್ನು ಈ ನಿಯಮಗಳು ಅರ್ಜಿದಾರರಿಗೆ ಒದಗಿಸುವುದಿಲ್ಲ ಎಂಬುದು ಸ್ಪಷ್ಟ” ಎಂದು ಹೇಳಿದೆ. ಅರ್ಜಿದಾರರಿಗೆ ಜಾರಿಗೊಳಿಸಬಹುದಾದ ಯಾವುದೇ ಹಕ್ಕು ಇಲ್ಲದಿರುವುದರಿಂದ, ಮನವಿ ತಿರಸ್ಕಾರವನ್ನು ಪ್ರಶ್ನಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತೀರ್ಪು ನೀಡಿದೆ.
ಕಲಾಪ ರೆಕಾರ್ಡಿಂಗ್ ಪ್ರತಿ ಕೇಳುವುದು ಹಕ್ಕಲ್ಲ: ನ್ಯಾ. ಪೂಣಚ್ಚ ಸ್ಪಷ್ಟನೆ
by Kodagu Varadi•ಅಕ್ಟೋಬರ್ 22, 2026BREAKING

ಕಾಮೆಂಟ್ಗಳು (0)