ಕಾವೇರಿ ನದಿಯ ದಂಡೆಯ ಮೇಲಿರುವ ಕೊಡಗಿನ ಹೆಬ್ಬಾಗಿಲೆಂದೇ ಪ್ರಖ್ಯಾತಿ ಹೊಂದಿರುವ ಪಟ್ಟಣ ಪ್ರದೇಶ ಕುಶಾಲನಗರ, ಇದು ಪ್ರತಿನಿತ್ಯ ನೂರಾರು ಪ್ರವಾಸಿಗರು, ಕೂಲಿ ಕಾರ್ಮಿಕರು, ವ್ಯಾಪಾರಿಗಳು ಬಂದು ಹೋಗುವ ಪಟ್ಟಣ ವಾಗಿದ್ದು ಇದರ ಹೃದಯಭಾಗದಲ್ಲಿ ಸದ್ದಿಲ್ಲದೆ ಸಾವಿರಾರು ಜನರ ಹಸಿವು ನೀಗಿಸುತ್ತಿದೆ ಇಲ್ಲಿನ ಸರ್ಕಾರಿ ಪ್ರಾಯೋಜಿತ ಇಂದಿರಾ ಕ್ಯಾಂಟೀನ್,
ಈ ಕ್ಯಾಂಟೀನ್ ನಲ್ಲಿ “ಶುಚಿ, ರುಚಿ, ಅಗ್ಗದ ಬೆಲೆಯಲ್ಲಿ ಮನೆಯೂಟದ ಮಾದರಿಯಲ್ಲಿ ರುಚಿಕರವಾದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಬಡಿಸಲಾಗುತ್ತಿರುವುದು ನಿಜಕ್ಕೂ ಬಡವರ, ಶ್ರಮಿಕರ ಪಾಲಿಗೆ ವರದಾನವೆ ಸರಿ

ಇಲ್ಲಿ ದಿನವಿಡೀ ಕಷ್ಟಪಟ್ಟು ದುಡಿಯುವ ಕೂಲಿ ಕಾರ್ಮಿಕರು, ಸ್ಥಳೀಯ ಬೀದಿಬದಿ ವರ್ತಕರು ಮತ್ತು ಸಮಾಜದಲ್ಲಿ ಯಾರೂ ಇಲ್ಲದ ನಿರಾಶ್ರಿತರಿಗೂ ದಿನದ ಮೂರೂ ಹೊತ್ತು ಗೌರವಯುತವಾಗಿ, ಪ್ರೀತಿಯಿಂದ ಆಹಾರ ನೀಡುತ್ತಿರುವ ಈ ಕ್ಯಾಂಟೀನ್ ಇವರೆಲ್ಲರಿಗೂ ದೊಡ್ಡ ಆಸರೆಯಾಗಿದೆ ಎಂದರೆ ಅತಿಶಯೋಕ್ತಿಯೇನಿಲ್ಲ.
ಮುಂಜಾನೆಯೇ ಸಾರ್ವಜನಿಕರ ಸೇವೆಗೆ ನಿಲ್ಲುವ ಆಟೋ ಚಾಲಕರು, ಕೆಎಸ್ಸಾರ್ಟಿಸಿ ಸಿಬ್ಬಂದಿಗಳು, ಕಚೇರಿ ವೇಳೆಯಲ್ಲಿ ಧಾವಂತದಲ್ಲಿರುವ ಬ್ಯಾಂಕ್ ಉದ್ಯೋಗಿಗಳು, ದೂರದ ಊರುಗಳಿಂದ ಬರುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳು ಈ ಕ್ಯಾಂಟೀನ್ಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ.

ಕ್ಯಾಂಟೀನ್ ಸಿಬ್ಬಂದಿಗಳು ನೀಡುವ ಅಂಕಿ ಅಂಶದ ಪ್ರಕಾರ, ಪ್ರತಿದಿನ ಮುಂಜಾನೆ 7.30 ರಿಂದ 10.00 ಗಂಟೆಯ ಅವಸರದ ವೇಳೆಯಲ್ಲಿ ಸುಮಾರು 270 ರಿಂದ 300 ಮಂದಿ ಇಲ್ಲಿ ಬಿಸಿಬಿಸಿ ತಿಂಡಿ ಸವಿಯುತ್ತಾರೆ. ಇನ್ನು ಮಧ್ಯಾಹ್ನ 12.30 ರಿಂದ 3.00 ರವರೆಗೆ ಹಾಗೂ ಸಂಜೆ 7.00 ರಿಂದ ರಾತ್ರಿ 9.00 ರವರೆಗಿನ ಊಟದ ಅವಧಿಯಲ್ಲಿ ತಲಾ 400ಕ್ಕೂ ಅಧಿಕ ಮಂದಿ ತೃಪ್ತಿಯಿಂದ ಊಟ ಮಾಡುತ್ತಾರೆ.
ಈ ಕ್ಯಾಂಟೀನ್‌ಗೆ ಬರುವ ಗ್ರಾಹಕರ ಪಟ್ಟಿಯನ್ನು ನೋಡಿದರೆ ಇದು ಸಮಾಜದ ಎಲ್ಲಾ ವರ್ಗದ ಜನರನ್ನು ಹೇಗೆ ತಲುಪಿದೆ ಎಂಬುದು ಅರ್ಥವಾಗುತ್ತದೆ.

ಹಾಗೆ ಸಾಮಾನ್ಯವಾಗಿ ಸರಕಾರಿ ಕ್ಯಾಂಟೀನ್‌ಗಳೆಂದರೆ ಸ್ವಚ್ಛತೆ ಇರುವುದಿಲ್ಲ ಎಂಬ ಸಾರ್ವತ್ರಿಕ ದೂರನ್ನು ಇಲ್ಲಿನ ಕ್ಯಾಂಟೀನ್ ಸುಳ್ಳಾಗಿಸಿದೆ. ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಇಲ್ಲಿ ಹೈಟೆಕ್ ಜಲ ಶೋಧಕ (Water Filter) ಅಳವಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಅತ್ಯಂತ ಸುವ್ಯವಸ್ಥಿತವಾದ ಆಧುನಿಕ ಅಡುಗೆ ಕೋಣೆ ಇಲ್ಲಿದ್ದು, ಪ್ರತಿಯೊಂದು ಪಾತ್ರೆಯನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಶುಚಿಯಾಗಿ ತೊಳೆಯಲಾಗುತ್ತದೆ. ಹಾಗೂ ಕ್ಯಾಂಟೀನ್‌ನ ಒಳಾಂಗಣ ಮಾತ್ರವಲ್ಲದೆ, ಸುತ್ತಮುತ್ತಲಿನ ಆವರಣವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಲ್ಲದೆ, ಇಲ್ಲಿಗೆ ಬರುವ ಹಿರಿಯ ನಾಗರಿಕರಿಗೆ ಕಷ್ಟವಾಗಬಾರದು ಎಂದು ವಿಶೇಷವಾಗಿ ಕುಳಿತುಕೊಳ್ಳಲು ಆರಾಮದಾಯಕ ಬೆಂಚುಗಳ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ.

ಹಾಗೆಯೇ ಯಾವುದೇ ಸಂಸ್ಥೆ ಯಶಸ್ವಿಯಾಗಬೇಕಾದರೆ ಅಲ್ಲಿನ ಸಿಬ್ಬಂದಿಯ ಶ್ರಮ ಮುಖ್ಯ. ಈ ಇಂದಿರಾ ಕ್ಯಾಂಟೀನ್‌ನಲ್ಲಿ ಒಟ್ಟು 5 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅದರಲ್ಲಿ ಪರಿಚಾರಕರಾದ ಮುದುವೊಳಲಿನಿ ಲಕ್ಷ್ಮಿ ಹಾಗೂ ಬಸವರಾಜ ಅವರ ಸೇವೆ ಅನನ್ಯವಾದುದು. ಇಲ್ಲಿನ ಮತ್ತೊಂದು ಸುಂದರ ಸಂಪ್ರದಾಯವೆಂದರೆ, ಪ್ರತಿದಿನ ಊಟದ ವಿತರಣೆ ಆರಂಭವಾಗುವ ಮುನ್ನ ದೇವರಿಗೆ ಪೂಜೆ ಮತ್ತು ನೈವೇದ್ಯವನ್ನು ನೆರವೇರಿಸಲಾಗುತ್ತದೆ. ತದನಂತರ ಬರುವ ಗ್ರಾಹಕರನ್ನು ಅತ್ಯಂತ ಆತ್ಮೀಯತೆಯಿಂದ ಉಪಚರಿಸಿ ಬಡಿಸಲಾಗುತ್ತದೆ. ಈ ಪ್ರೀತಿಯ ವರ್ತನೆಯೇ ಗ್ರಾಹಕರನ್ನು ಇಲ್ಲಿಗೆ ಪದೇ ಪದೇ ಸೆಳೆಯುತ್ತಿದೆ.
ಇನ್ನು ಇಲ್ಲಿನ ಊಟೋಪಚಾರದ ಕುರಿತಾಗಿ ಹೇಳುವುದಾದರೆ , ಗ್ರಾಹಕರಿಗೆ ಬೇಸರವಾಗದಂತೆ ವಾರದ ಏಳೂ ದಿನಗಳೂ ವಿಭಿನ್ನ ಹಾಗೂ ಪೌಷ್ಟಿಕ ಆಹಾರದ ಮೆನುವನ್ನು ಸಿದ್ಧಪಡಿಸಲಾಗಿದೆ.

ಸೋಮವಾರದಂದು ಇಡ್ಲಿ, ಸಾಂಬಾರ್ ಅಥವಾ ಪುಳಿಯೊಗರೆ ತಿಂಡಿ ಇದ್ದರೆ, ಮಧ್ಯಾಹ್ನ ಅನ್ನ-ಮೂಲಂಗಿ ಸಾಂಬಾರ್ ಅಥವಾ ಚಪಾತಿ-ಸಾಗು ಜೊತೆಗೆ ಮೊಸರನ್ನ ಇರುತ್ತದೆ. ರಾತ್ರಿಗೆ ಅನ್ನ-ಹೀರೆಕಾಯಿ ಸಾಂಬಾರ್ ಅಥವಾ ಚಪಾತಿ ಇರುತ್ತದೆ.
ಮಂಗಳವಾರ ಇಡ್ಲಿ ಅಥವಾ ಖಾರಾಬಾತ್ ಜೊತೆಗೆ ಮಧ್ಯಾಹ್ನ ಮತ್ತು ರಾತ್ರಿ ವಿಶೇಷವಾಗಿ ರಾಗಿ ಮುದ್ದೆ, ಸೊಪ್ಪು ಸಾಂಬಾರ್ ಅಥವಾ ಅನ್ನ, ಬದನೆಕಾಯಿ/ಸಿಹಿಕುಂಬಳ ಸಾಂಬಾರ್ ಹಾಗೂ ರಾಗಿ ಅಂಬಲಿ ನೀಡಲಾಗುತ್ತದೆ.
ಬುಧವಾರ ಇಡ್ಲಿ, ಕರಿಬೇವು ಚಟ್ನಿ ಅಥವಾ ಪೊಂಗಲ್ ತಿಂಡಿ ಇದ್ದರೆ, ಊಟಕ್ಕೆ ಅನ್ನ-ಬೀನ್ಸ್ ಸಾಂಬಾರ್, ಮೊಸರನ್ನ ಅಥವಾ ಚಪಾತಿ ಇರುತ್ತದೆ.

ವಾರದ ದ್ವಿತೀಯಾರ್ಧದಲ್ಲೂ ಈ ವೈವಿಧ್ಯತೆ ಮುಂದುವರಿಯುತ್ತದೆ. ಗುರುವಾರ ಇಡ್ಲಿ ಅಥವಾ ವೆಜ್ ಪಲಾವ್ ಜೊತೆಗೆ ಮಧ್ಯಾಹ್ನ ಮೊಳಕೆಕಾಳು ಸಾಂಬಾರ್ ಹಾಗೂ ವಿಶೇಷ ಸಿಹಿ ಕೀರ್ ನೀಡಲಾಗುತ್ತದೆ.
ಶುಕ್ರವಾರ ಇಡ್ಲಿ ಅಥವಾ ಚಿತ್ರಾನ್ನದ ತಿಂಡಿ ಇದ್ದರೆ, ಊಟಕ್ಕೆ ಹೀರೇಕಾಯಿ ಅಥವಾ ಹಲಸಂಡೆ ಕಾಳು ಸಾಂಬಾರ್ ಜೊತೆ ರಾಗಿ ಅಂಬಲಿ ಅಥವಾ ಚಪಾತಿ ಇರುತ್ತದೆ.
ಶನಿವಾರ ವಾಂಗಿಬಾತ್ ತಿಂಡಿ ಹಾಗೂ ಮಧ್ಯಾಹ್ನ ಸಿಹಿಕುಂಬಳ ಸಾಂಬಾರ್ ಜೊತೆ ಕೀರ್ ಇರುತ್ತದೆ.

ಇನ್ನು ರವಿವಾರದ ರಜಾದಿನದಂದು ಪುದಿನಾ ಚಟ್ನಿ ಇಡ್ಲಿ ಅಥವಾ ಕೇಸರಿಬಾತ್-ಖಾರಾಬಾತ್ ತಿಂಡಿ ಇದ್ದರೆ, ಮಧ್ಯಾಹ್ನ ಮತ್ತು ರಾತ್ರಿ ಮೊಳಕೆಕಾಳು ಅಥವಾ ಹಲಸಂಡೆ ಸಾಂಬಾರ್ ಜೊತೆಗೆ ಮುದ್ದೆ ಅಥವಾ ಅನ್ನದ ಊಟ ಹಾಗೂ ಸಿಹಿ ಕೀರ್ ಇರುತ್ತದೆ.
ಇನ್ನು ಬೆಳಗ್ಗಿನ ತಿಂಡಿಗೆ 5 ರೂಪಾಯಿ , ಮದ್ಯಾಹ್ನ ಹಾಗೂ ರಾತ್ರಿಯ ಊಟಕ್ಕೆ 10 ರೂಪಾಯಿ ದರ ನಿಗದಿಪಡಿಸಲಾಗಿದೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಕೇವಲ ಕಡಿಮೆ ಹಣಕ್ಕೆ , ಊಟ ನೀಡುವುದು ಸುಲಭದ ಮಾತಲ್ಲ. ಸರಕಾರದ ಯೋಜನೆಯನ್ನು ಸಾರ್ವಜನಿಕರಿಗೆ ತಲುಪಿಸುವಲ್ಲಿ ಕುಶಾಲನಗರದ ಇಂದಿರಾ ಕ್ಯಾಂಟೀನ್ ಮಾದರಿಯಾಗಿ ನಿಂತಿದೆ.
ಆಡಳಿತಾರೂಢ ಸರಕಾರಗಳ ಇಂತಹ ಸಮಾಜ ಮುಖಿ ಯೋಜನೆಗಳು ನಿರಂತರವಾಗಿ ಮುಂದುವರಿಯಲಿ, ಶ್ರಮಿಕರ ಮುಖದಲ್ಲಿನ ತೃಪ್ತಿಯ ನಗು ಹೀಗೆಯೇ ಇರಲಿ ಎನ್ನುವುದೇ ಎಲ್ಲರ ಆಶಯವಾಗಿದೆ.




