Google search engine
Home♦️ಇತ್ತೀಚಿನ ಸುದ್ದಿಗಳು.ಆಗಸ್ಟ್  15ರಂದು  ಯುಕೊ ವತಿಯಿಂದ “ನೆಪ್ಪುರ ನಳತ್ ಮಾಂಜತ ಮೊಟ್ಟ್ “ ಕಾರ್ಯಕ್ರಮ. ಮೂರ್ನಾಡು...

ಆಗಸ್ಟ್  15ರಂದು  ಯುಕೊ ವತಿಯಿಂದ “ನೆಪ್ಪುರ ನಳತ್ ಮಾಂಜತ ಮೊಟ್ಟ್ “ ಕಾರ್ಯಕ್ರಮ. ಮೂರ್ನಾಡು ಕೊಡವ ಸಮಾಜದಲ್ಲಿ  ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ.

ಮೂರ್ನಾಡು. ಜು.30: ಭಾರತ ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಅಂಗವಾಗಿ ಇದೇ ಆಗಸ್ಟ್  15ರಂದು  ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ) ಹಾಗು  ಕೊಡವ ಸಮಾಜ, ಮೂರ್ನಾಡು ಸಹಯೋಗದಲ್ಲಿ ಎರಡನೇ ವರ್ಷದ ” ನೆಪ್ಪುರ ನಳತ್ ಮಾಂಜತ ಮೊಟ್ಟ್ – ‘the ever lasting footprints in the shadow of memories’ ಎಂಬ ಕೊಡಗಿನ ನೈಜ ಸ್ವಾತಂತ್ರ್ಯ ಹೋರಾಟಗಾರರ ಕುರಿತ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲು  ನಿರ್ಧರಿಸಲಾಗಿದೆ ಎಂದು ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. 

ಇತ್ತೀಚೆಗೆ ಮೂರ್ನಾಡು ಕೊಡವ ಸಮಾಜ  ಅಧ್ಯಕ್ಷ ತೇಲಪಂಡ ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ, ಮೂರ್ನಾಡು ಕೊಡವ ಸಮಾಜದಲ್ಲಿ ನಡೆದ  ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಈ ದೇಶದ ಸ್ವಾತಂತ್ರ್ಯಕ್ಕಾಗಿ  ಈ ನಾಡಿನ ಹಿರಿಯರು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ, ಭಾರತ ಸ್ವಾತಂತ್ರ್ಯದ ಇತಿಹಾಸದಲ್ಲಿ ಕೊಡಗು ತನ್ನದೇ ಅಧ್ಯಾಯವನ್ನು ಹೊಂದಿದೆ. ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ಹೋರಾಟಗಾರರನ್ನು ಕೊಡಗು ಈ ದೇಶಕ್ಕೆ ನೀಡಿದೆ. ಆದರೆ ಅವರಿಗೆ ಸರ್ಕಾರದಿಂದಾಗಲೀ, ಸಾರ್ವಜನಿಕರಿಂದಾಗಲಿ ಸೂಕ್ತವಾದ ಗೌರವ ನೀಡಲಾಗುತ್ತಿಲ್ಲ. ಸರ್ಕಾರದಿಂದ ರಾಷ್ಟ್ರ ಹಾಗು ರಾಜ್ಯ ಮಟ್ಟದಲ್ಲಿ ಕೆಲವೇ ಕೆಲವು ಹೋರಾಟಗಾರರನ್ನು ಗುರ್ತಿಸಿ ಗೌರವ ನೀಡಲಾಗುತ್ತಿದೆ. ಆದರೆ ಇಲ್ಲಿನ ನೈಜ ಹೋರಾಟಗಾರರಿಗೆ ಸ್ಥಳೀಯವಾಗಿ  ಸಾರ್ವಜನಿಕರು ಹಾಗು ಸರ್ಕಾರದಿಂದ ಗೌರವ ನೀಡಿ ಸ್ಮರಿಸುವ ಕೆಲಸವಾಗಬೇಕು ಈ ನಿಟ್ಟಿನಲ್ಲಿ ಕಳೆದ ವರ್ಷ  ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯದಿನಾಚರಣೆಯಂದೇ ಕೊಡಗಿನ ಸ್ವಾತಂತ್ರ್ಯ ಹೋರಾಟಗಾರರನ್ನು ಅರ್ಥಪೂರ್ಣವಾಗಿ ಸ್ಮರಿಸಿಕೊಳ್ಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೀಗ ಎರಡನೇ ವರ್ಷದ ಕಾರ್ಯಕ್ರಮವನ್ನು ಮೂರ್ನಾಡು ಕೊಡವಸಮಾಜದಲ್ಲಿ ಅರ್ಧಪೂರ್ಣವಾಗಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಮುಂದುವರಿದು ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಿಂದ ಜಿಲ್ಲಾಡಳಿತದವು ಸ್ಥಳೀಯ ನೈಜ ಸ್ವಾತಂತ್ರ್ಯ ಹೋರಾಟಗಾರರನ್ನು, ಸತ್ಯಾಗ್ರಹಿಗಳನ್ನು ಗುರ್ತಿಸಿ ಗೌರವಿಸಿ ಸ್ಮರಿಸಬೇಕು, ಇಲ್ಲವಾದಲ್ಲಿ ಈ ಮಣ್ಣಿನ ನೈಜ ಇತಿಹಾಸಗಳು ಅಳಿಸಿಹೋಗಲಿದೆ, ಇದು ಸಮಾಜದ ಅತ್ಯಂತ ಕೆಟ್ಟದಾದ ಪರಿಸ್ಥಿತಿಗೆ ಕಾರಣವಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ, ಕೊಡಗಿನ ನೈಜ ಹೋರಾಟಗಾರರನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು. 

ಕಾರ್ಯಕ್ರಮದಲ್ಲಿ, ವಿಚಾರ ವಿನಿಮಯ, ದೇಶಭಕ್ತಿ ಗೀತೆಗಳು ಹಾಗು ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನೆನಪಿನ ನೆರಳಲ್ಲಿ ಹುದುಗಿರುವ ಆ ಸ್ವಾತಂತ್ರ್ಯದ ಹೆಜ್ಜೆಗುರುತುಗಳನ್ನು ಸರ್ಕಾರಕ್ಕೆ‌ ನೆನಪಿಸುವುದರೊಂದಿಗೆ ಆ ಹಿರಿಯರ ತ್ಯಾಗ ಬಲಿದಾನಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಪುಟ್ಟ ಪ್ರಯತ್ನ ಇದಾಗಿದೆ. ಹಾಗೆಯೇ ಆ ಹಿರಿಯರ ನೆನಪುಗಳು ಹಾಗು ಅವರ ತ್ಯಾಗ‌ ಬಲಿದಾನಗಳನ್ನು ಮೆಲುಕು ಹಾಕುವ  ಛಾಯಾಚಿತ್ರ ಪ್ರದರ್ಶನವನ್ನು ಏರ್ಪಸಲಾಗಿದ್ದು ಇದು ಕಾರ್ಯಕ್ರಮದ ಮತ್ತೊಂದು ಆಕರ್ಷಣೆ ಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷರಾದ ತೇಲಪಂಡ ಸುಬ್ಬಯ್ಯ ಮಾತನಾಡಿ, ಕೊಡವರ ಅಸ್ಥಿತ್ವ ಉಳಿಯಬೇಕಾದರೆ, ನಮ್ಮ ಇತಿಹಾಸಗಳು ಅಳಿಸಿಹೋಗದಂತೆ ಕಾಪಾಡಿಕೊಳ್ಳ ಬೇಕಿದೆ. ಈ ನಿಟ್ಟಿನಲ್ಲಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಾಗವಹಿಸಿದ ನಮ್ಮ ಹಿರಿಯರ ತ್ಯಾಗ ಬಲಿದಾನಗಳನ್ನು ಸ್ಮರಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಯುಕೊ ಸಂಘಟನೆ ಸಹಯೋಗದಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ಈ ಕಾರ್ಯಕ್ರಮವನ್ನು ನಮ್ಮ ಸಮಾಜದಲ್ಲಿ ಆಯೋಜಿಸಲು  ಕೇಳಿಕೊಳ್ಳಲಾಗಿತ್ತು. 

ಆಗಸ್ಟ್ 15ರಂದು, ಅಪರಾಹ್ನ  01:00 ಗಂಟೆಗೆ ಛಾಯಾಚಿತ್ರ ಪ್ರದರ್ಶನದ ಉದ್ಘಾಟನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು.  ಈ ಕಾರ್ಯಕ್ರಮಕ್ಕೆ

ವಿರಾಜಪೇಟೆ ಹಾಗು ಮಡಿಕೇರಿ ಕ್ಷೇತ್ರದ ಶಾಸಕರು, ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರು ಸೇರಿದಂತೆ ಹಲವಾರು ಗಣ್ಯರು  ಬಾಗವಹಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು. 

  ಸಭೆಯಲ್ಲಿ ಮೂರ್ನಾಡು ಕೊಡವ ಸಮಾಜದ ಉಪಾಧ್ಯಕ್ಷ ಕೋಟೆರ ರಾಜ, ಕಾರ್ಯದರ್ಶಿ ಚಂಗಂಡ ಸೂರಜ್ ತಮ್ಮಯ್ಯ, ಖಜಾಂಚಿ ಅಮ್ಮಾಟಂಡ ದೇವಯ್ಯ, ತಿರುಟೆರ ಮುದ್ದಯ್ಯ, ಚೇನಂಡ ಮಾದಪ್ಪ, ಪುದಿಯೊಕ್ಕಡ ವಿಪನ್ ಸೋಮಯ್ಯ, ಅಮ್ಮಾಟಂಡ ಕಾವೇರಪ್ಪ, ಚೌಕೀರ ಅಪ್ಪಣ್ಣ, ಪಳಂಗಂಡ ಹರೀಶ್, ಮುಂಡಂಡ ಜಮುನಾ ಪೆಮ್ಮಯ್ಯ, ಪಾಂಡಂಡ ಸ್ವಾತಿ ಗಣಪತಿ, ಕುಂಜಿಲಂಡ ಗ್ರೇಸಿ ಪೂಣಚ್ಚ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪಳಂಗಂಡ ರೇಖ, ಉಪಾಧ್ಯಕ್ಷೆ ಪೆಮ್ಮಂಡ ಗೀತಾ ಪವಿತ್ರ, ಅಮ್ಮಾಟಂಡ ವಿಂದ್ಯಾ ದೇವಯ್ಯ, ಯುಕೊ ಸದಸ್ಯರಾದ ಪುದಿಯೊಕ್ಕಡ ದಿನೇಶ್ ಹಾಗು ಕೊಡವ ಸಾಹಿತ್ಯ ಅಖಾಡೆಮಿ ಸದಸ್ಯ ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!