Google search engine
Home♦️ಇತ್ತೀಚಿನ ಸುದ್ದಿಗಳು.‘ಎಸ್. ಜಾನಕಿ ಅವರ ಗಾಯನ ಕೇವಲ ಹಾಡಲ್ಲ, ಅದೊಂದು ಭಾವನೆಗಳ ಆಗರ’ ವಿ.ಪಿ ಶಶಿಧರ್

‘ಎಸ್. ಜಾನಕಿ ಅವರ ಗಾಯನ ಕೇವಲ ಹಾಡಲ್ಲ, ಅದೊಂದು ಭಾವನೆಗಳ ಆಗರ’ ವಿ.ಪಿ ಶಶಿಧರ್

ಕುಶಾಲನಗರ ಜು 14: “ಖ್ಯಾತ ಹಿನ್ನೆಲೆ ಗಾಯಕಿ, ದಿವಂಗತ ಎಸ್. ಜಾನಕಿ ಅವರ ಗಾಯನ ಕೇವಲ ಹಾಡಲ್ಲ, ಅದೊಂದು ಭಾವನೆಗಳ ಆಗರ. ಅವರ ಹಾಡುಗಳಲ್ಲಿ ಪ್ರೀತಿ, ಸೌಂದರ್ಯ, ನಗು, ವಿನೋದ, ಕರುಣೆ, ದುಃಖ, ಕೋಪ, ಶೌರ್ಯ, ಧೈರ್ಯ, ಭಯ, ಆಶ್ಚರ್ಯ, ಶಾಂತಿ ಹಾಗೂ ನೆಮ್ಮದಿ ಹೀಗೆ ಮಾನವ ಸಹಜ ಎಲ್ಲಾ ಭಾವನೆಗಳೂ ಅತ್ಯಂತ ಸಹಜವಾಗಿ ಮತ್ತು ತೀವ್ರವಾಗಿ ಅಭಿವ್ಯಕ್ತಗೊಳ್ಳುತ್ತಿದ್ದವು. ಇಂತಹ ಮೇರು ವ್ಯಕ್ತಿತ್ವಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಣಾ ಕಾರ್ಯಕ್ರಮ ಹಮ್ಮಿಕೊಂಡಿರುವುದು ನಾಗರಿಕ ಸಮಾಜದ ಕರ್ತವ್ಯ ಮತ್ತು ಕೃತಜ್ಞತೆಯ ಸಂಕೇತವಾಗಿದೆ. ಅವರ ಜೀವನ, ಸಾಧನೆ ಮತ್ತು ಕಲಾಸೇವೆ ಮುಂದಿನ ಪೀಳಿಗೆಗೆ ಸದಾ ಸ್ಫೂರ್ತಿಯ ಸೆಲೆಯಾಗಿ ಉಳಿಯಲಿ” ಎಂದು ಕುಶಾಲನಗರ ತಾಲೂಕು ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷರಾದ ವಿ. ಪಿ ಶಶಿಧರ್ ಅವರು ಆಶಯ ವ್ಯಕ್ತಪಡಿಸಿದರು. 

ಕನ್ನಡ ಸಿರಿ ಸ್ನೇಹ ಬಳಗ ಕುಶಾಲನಗರ ಇವರ ವತಿಯಿಂದ, ಇತ್ತೀಚೆಗೆ ನಿಧನರಾದ ಗಾನಕೋಗಿಲೆ ಎಸ್‌. ಜಾನಕಿ ಅವರಿಗೆ ನಿನ್ನೆ ಸೋಮವಾರ ಸಂಜೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾವಪೂರ್ಣ ‘ಭಾವ-ನಮನ’ ಕಾರ್ಯಕ್ರಮದಲ್ಲಿ ಅವರು ನುಡಿ ನಮನ ಸಲ್ಲಿಸಿದರು .

​ಇದೇ ಸಂದರ್ಭದಲ್ಲಿ ಮಾತನಾಡಿದ ಕುಶಾಲನಗರ ಫ್ಯಾಕ್ಸ್ ಅಧ್ಯಕ್ಷರಾದ ಸರವಣ ಕುಮಾರ್ ಅವರು ಮಾತನಾಡಿ, ಎಸ್. ಜಾನಕಿ ಅವರ ಸಂಗೀತ ಪಯಣ ಸುಗಮವಾಗಿರಲಿಲ್ಲ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಹಾಡುಗಳ ರೆಕಾರ್ಡಿಂಗ್‌ಗಾಗಿ ಅಂದಿನ ಮದ್ರಾಸ್ ನಗರವನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇತ್ತು. ಇಂತಹ ಸವಾಲುಗಳ ನಡುವೆಯೂ ಕನ್ನಡ ಭಾಷೆಯೊಂದರಲ್ಲೇ ಸುಮಾರು 10 ಸಾವಿರ ಹಾಡುಗಳಿಗೆ ಧ್ವನಿ ನೀಡಿರುವುದು ಜಾನಕಿ ಅವರ ಅಸಾಮಾನ್ಯ ಸಾಧನೆಯಾಗಿದೆ. ನದಿ, ವನ, ದೇಶಭಕ್ತಿ, ಪರಿಸರ ಹಾಗೂ ಕೃಷಿ ಸೇರಿದಂತೆ ವಿವಿಧ ವಿಷಯಗಳ ಕುರಿತ ಅವರ ಹಾಡುಗಳು ಕನ್ನಡಿಗರು ಸೇರಿದಂತೆ ದೇಶಾದ್ಯಂತ ಜನರ ಮನೆ-ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ ಎಂದು ಅವರು ಉವಾಚಿಸಿದರು.

​ವೃತ್ತಿ ತರಬೇತಿ ದಾರರು ಹಾಗೂ ವಾಗ್ಮಿಗಳಾದ  ಬಾಲಚಂದ್ರ ಮಾತನಾಡಿ, “‘ಜೀವ ನದಿ ಕಾವೇರಿ’ಯ ಮೇಲಿನ ಹಾಡನ್ನು ಹಾಡಿದ ನಂತರ ಜಾನಕಿಯವರು ಕೊಡಗಿಗೆ ಭೇಟಿ ನೀಡಿದ್ದನ್ನು ಸ್ಮರಿಸಿದರು. ಚಿಕ್ಕ ಮಕ್ಕಳು ಸೇರಿದಂತೆ ಆಯಾ ನಟಿಯರ ಧ್ವನಿ ಏರಿಳಿತಕ್ಕೆ ತಕ್ಕಂತೆ ಹಾಡುವ ಹಾಡುಗಾರಿಕೆ ಅವರ ವಿಶೇಷತೆಯಾಗಿತ್ತು. ಅವರ ಈ ಅಪೂರ್ವ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಸಂದ ಅಮೂಲ್ಯ ಕೊಡುಗೆಯಾಗಿದೆ ಎಂದರು

ಕನಡಿ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಮಾತನಾಡಿ ಕಲಾವಿದರ ಕಲೆಗೆ ಸಾವಿಲ್ಲ, ಮಹಾರಾಷ್ಟ್ರ ರಾಜ್ಯದ 9ನೇ ತರಗತಿಯ ಪಠ್ಯದಲ್ಲಿ ಡಾ. ರಾಜಕುಮಾರ್ ಅವರ ಪಾಠವಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಮಕ್ಕಳು ಡಾ. ರಾಜ್, ಜಾನಕಿ ಅಮ್ಮನವರಂತಹ ಮೇರು ಕಲಾವಿದರುಗಳ ಜೀವನ ಚರಿತ್ರೆಗಳನ್ನು ಪಠ್ಯ ಪುಸ್ತಕದಲ್ಲಿ ಅಳವಡಿಸಲು ಸರಕಾರ ಮುಂದಾಗಬೇಕು” ಎಂದು ಒತ್ತಾಯಿಸಿದರು.

​ಕಾರ್ಯಕ್ರಮ ನಿರೂಪಿಸುತ್ತಾ ಮಾತನಾಡಿದ ರಂಗಭೂಮಿ ಕಲಾವಿದರು ಹಾಗೂ ಶಿಕ್ಷಕರಾದ ಉ.ರಾ. ನಾಗೇಶ್ ಅವರು, ಎಸ್. ಜಾನಕಿಯವರ ಕನ್ನಡದ 10 ಸಾವಿರಕ್ಕೂ ಅಧಿಕ ಹಾಡುಗಳು ಕೇವಲ ಹಾಡುಗಳಲ್ಲ, ಅವುಗಳು 10 ಸಾವಿರ ಅಧ್ಯಾಯಗಳನ್ನು ಮೀರಿದ್ದಾಗಿವೆ ಎಂದು ಅವಲೋಕಿಸಿದರು. ಅವರ ಪ್ರತಿಯೊಂದು ಹಾಡು ಸಹ ಜನಸಾಮಾನ್ಯರ  ಬದುಕಿನ ಒಂದೊಂದು ಕಥೆಯನ್ನು ಹೇಳುತ್ತದೆ. ಅವರ ಧ್ವನಿ ಕೇವಲ ಸಂಗೀತವಲ್ಲ, ಅದು ಕನ್ನಡ ಸೇರಿದಂತೆ ಹಲವು ಭಾಷೆಗಳ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಒಂದು ಸಾಂಸ್ಕೃತಿಕ ಸಂಪತ್ತಾಗಿದ್ದು, ಮುಂದಿನ ಪೀಳಿಗೆಗೂ ಈ ಹಾಡುಗಳ ಶ್ರೀಮಂತಿಕೆಯನ್ನು ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

​ಭಾವಪೂರ್ಣ ನುಡಿನಮನದ ನಡುವೆ,  ಕೊಡಗಿನ ಖ್ಯಾತ ಗಾಯಕರಾದ  ರವಿ ಹಾಗೂ ಲಕ್ಷ್ಮೀ, ಲತಾ ಅವರು ಎಸ್. ಜಾನಕಿಯವರು ಹಾಡಿದ ಜನಪ್ರಿಯ ಕನ್ನಡ ಗೀತೆಗಳನ್ನು ಹಾಡುವ ಮೂಲಕ ‘ಗೀತಾ ನಮನ’ ಸಲ್ಲಿಸಿದರು. ಈ ಇಂಪಾದ ಗೀತೆಗಳು ನೆರೆದಿದ್ದವರನ್ನು ಕ್ಷಣಕಾಲ ಭಾವುಕರನ್ನಾಗಿಸಿತು.

 ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘ(ರಿ) ಕುಶಾಲನಗರ ತಾಲೂಕು ಘಟಕದ ಪತ್ರಕರ್ತರುಗಳು , ಕೊಡಗು ಜನ ಅಭಿವೃದ್ಧಿ ಸಂಘಟನೆಯ ಪದಾಧಿಕಾರಿಗಳು, ಕರವೇ ವಿವಿಧ ವಿಭಾಗಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಕನ್ನಡ ಸಿರಿ ಬಳಗದ ಸದಸ್ಯರುಗಳು, ವಿವಿಧ ಸಂಘಟನೆಯ ಸದಸ್ಯರುಗಳು, ಕಲಾವಿದರುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಗಾನಕೋಗಿಲೆ ದಿ. ಎಸ್. ಜಾನಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!