Google search engine
Home♦️ಇತ್ತೀಚಿನ ಸುದ್ದಿಗಳು. ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.) ವತಿಯಿಂದ ಕೇವಲ ಮೂರೇ ತಿಂಗಳಲ್ಲಿ...

 ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.) ವತಿಯಿಂದ ಕೇವಲ ಮೂರೇ ತಿಂಗಳಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ  ಜೀರ್ಣೋದ್ಧಾರಗೊಂಡ ಬೊಳ್ಳೂರಿನ ಪುಣ್ಯಕ್ಷೇತ್ರ!

🖍️🖍️🖍️ಗುಡ್ಡೆಮನೆ ವಿಶ್ವಕುಮಾರ್. ಪತ್ರಕರ್ತರು ಗುಡ್ಡೆಹೊಸೂರು

​ಗುಡ್ಡೆಹೊಸೂರು ಸಮೀಪದ ಬೊಳ್ಳೂರು ಗ್ರಾಮದಲ್ಲಿ ಸರಿಸುಮಾರು 350 ಕ್ಕು ಅಧಿಕ ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಶ್ರೀ ಚೌಡೇಶ್ವರಿ ದೇವಿ, ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ಗುಳಿಗ ದೈವದ ಪುನಃಪ್ರತಿಷ್ಠಾ ಬ್ರಹ್ಮ ಕುಂಬಾಭಿಷೇಕ ಮಹೋತ್ಸವವು ಇದೆ ಜೂನ್ ತಿಂಗಳ 15ರ ಸೋಮವಾರ ಸಾಯಂಕಾಲದಿಂದ ಜೂನ್ 17ರ ಬುಧವಾರದ ತನಕ ಅತ್ಯಂತ ಸಡಗರ-ಸಂಭ್ರಮ ಹಾಗೂ ಶಾಸ್ತ್ರೋಕ್ತವಾಗಿ ನೆರವೇರಿತು.

 ಗ್ರಾಮಸ್ಥರ ಒಗ್ಗಟ್ಟು ಮತ್ತು ಭಕ್ತರ ಅಚಲ ನಂಬಿಕೆಗೆ ಸಾಕ್ಷಿಯಾಗಿ ನಡೆದ ಈ ಧಾರ್ಮಿಕ ಉತ್ಸವವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೈವಜ್ಞರಾದ ಶ್ರೀ ಮಿತ್ತೂರು ಕೇಶವ ಭಟ್ ಮತ್ತು ವಾಸ್ತು ತಜ್ಞರಾದ ಶ್ರೀ ಮುನಿಯಂಗಳ ಮಹೇಶ್ ಇವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಮಿತ್ತೂರು ನರಸಿಂಹ ಭಟ್ಟರ ಪ್ರಧಾನ ಆಚಾರ್ಯತ್ವದಲ್ಲಿ ಜರುಗಿತು. 

ಕಳೆದ ಮಂಗಳವಾರದಂದು ಮುಂಜಾನೆ ದಿವ್ಯ ಮುಹೂರ್ತವಾದ ಮಿಥುನ ಲಗ್ನದಲ್ಲಿ ಶ್ರೀ ಚೌಡೇಶ್ವರಿ ದೇವರ ಶಿಖರ ಪ್ರತಿಷ್ಠೆ ಹಾಗೂ ಮಹಾ ಕುಂಭಾಭಿಷೇಕ ನೆರವೇರಿದರೆ, ತದನಂತರದ ಶುಭ ಕರ್ಕಾಟಕ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಕ್ಷೇತ್ರಪಾಲಕನಂತಿರುವ ಶ್ರೀ ಗುಳಿಗ ದೇವರ ಪುನರ್‌ಪ್ರತಿಷ್ಠೆ ಮತ್ತು ಮಹಾಪೂಜೆ ಅತ್ಯಂತ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು. 

ಈ ಧಾರ್ಮಿಕ ಮಹೋತ್ಸವದ ಸಭಾ ಕಾರ್ಯಕ್ರಮದಲ್ಲಿ ವಿರಾಜಪೇಟೆ ಅರಮೇರಿ ಮಠದ ಪೂಜ್ಯ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕಿರಿಕೊಡ್ಲಿ ಮಠದ ಪೂಜ್ಯ ಶ್ರೀ ಸದಾಶಿವ ಸ್ವಾಮೀಜಿ ಅವರು ಪಾಲ್ಗೊಂಡು, ಗ್ರಾಮದ ಧರ್ಮದ ಮೇಲಿನ ಶ್ರದ್ಧೆಯನ್ನು ಭಕ್ತಿಯನ್ನು ಶ್ಲಾಘಿಸಿ ಭಕ್ತ ಜನರಿಗೆ ಆಶೀರ್ವಚನ ನೀಡಿದರು.

ಈ ​ದೇವಾಲಯಕ್ಕೆ ನಾಲ್ಕು ಶತಮಾನಗಳ ಇತಿಹಾಸವಿದ್ದರೂ ಕಾಲಗರ್ಭದಲ್ಲಿ ಜೀರ್ಣಾವಸ್ಥೆಗೆ ತಲುಪಿದ್ದರಿಂದ, ಶ್ರೀ ಚೌಡೇಶ್ವರಿ ಹಾಗೂ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಷ್ಟಮಂಗಳ ಪ್ರಶ್ನೆಯನ್ನು ಇರಿಸುವ ಮೂಲಕ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿತ್ತು. ಪ್ರಸ್ತುತ ಆಡಳಿತ ಕಮಿಟಿ, ಬೊಳ್ಳೂರು ಗ್ರಾಮಸ್ಥರು, ಸುತ್ತಮುತ್ತಲಿನ ಊರಿನ ಸದ್ಭಕ್ತರು ಹಾಗೂ ದಾನಿಗಳ ಶ್ರಮ ಮತ್ತು ಆರ್ಥಿಕ ಸಹಕಾರದಿಂದ ಕೇವಲ 3 ತಿಂಗಳ ಅತ್ಯಲ್ಪ ಅವಧಿಯಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಭವ್ಯವಾದ ನೂತನ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಸಂಪೂರ್ಣಗೊಂಡು ಪ್ರತಿಷ್ಠಾಪನೆಗೊಂಡಿತು. 

ಈ ಐತಿಹಾಸಿಕ ಸಮಾರಂಭದಲ್ಲಿ ಕಾಫಿ ಉದ್ಯಮಿಗಳಾದ ಎಸ್.ಎಲ್.ಎನ್. ವಿಶ್ವನಾಥನ್, ವೆಂಕಿ ವಿಶ್ವನಾಥ್, ಕೊಡಗು ವೀರಶೈವ ಮಹಾಸಭಾದ ಅಧ್ಯಕ್ಷರಾದ ಹೆಚ್.ವಿ. ಶಿವಪ್ಪ, ಕಾರ್ಯದರ್ಶಿ ಶಾಂಭಶಿವಯ್ಯ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ.ಎಸ್. ಮೂರ್ತಿ, ಅರ್ಚಕರುಗಳಾದ ಶಿವಕುಮಾರ್ ಮತ್ತು ಅಣ್ಣು ಪೂಜಾರಿ, ಮುಖಂಡರಾದ ನಟರಾಜು ಹಾಗೂ ಮೋಹನ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

​ದೇವಾಲಯದ ಇತಿಹಾಸವನ್ನು ಅವಲೋಕಿಸಿದರೆ, ಕಳೆದ 75 ವರ್ಷಗಳ ಹಿಂದೆ ಪ್ರಾರಂಭದಲ್ಲಿ ಗುಡ್ಡೆಮನೆ ಮಂದಣ್ಣ, ಕೊಡೇಕಲ್ ರಾಮಣ್ಣ, ಕೊಡಿ ಕೃಷ್ಣಪ್ಪ, ಸೋಮಶೇಖರ್, ನಂಜಪ್ಪ, ಬಿ.ಟಿ. ಸಿದ್ದಪ್ಪ, ಪುಲಿಯಂಡ ಅಯ್ಯಪ್ಪ, ಕೆದಂಬಾಡಿ ಚಿಣ್ಣಪ್ಪ ಹಾಗೂ ಬಿ.ಎಸ್. ಸಿದ್ದಲಿಂಗಪ್ಪ ರವರು ಕಾರ್ಯಾರಂಭ ಮಾಡಿ ದೇವಸ್ಥಾನದ ಅಸ್ತಿತ್ವವನ್ನು ಉಳಿಸಲು ತಳಹದಿ ಹಾಕಿಕೊಟ್ಟಿದ್ದರು. 

ಅನಂತರದ ದಿನಗಳಲ್ಲಿ ಶ್ರೀ ಬಸವೇಶ್ವರ ಹಾಗೂ ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ (ರಿ.)ಅನ್ನು  ಸ್ಥಾಪಿಸಲಾಯಿತು.

ಅದಕ್ಕೂ ಹಿಂದೆ ಗುಡ್ಡೆಮನೆ ಮಂದಣ್ಣನವರು ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ನಿಯಮಿತವಾಗಿ ಪೂಜೆ ಸಲ್ಲಿಸುತ್ತಾ, ವರ್ಷಕ್ಕೊಮ್ಮೆ ವಾರ್ಷಿಕ ಪೂಜೆ ಹಾಗೂ ಅನ್ನದಾನವನ್ನು ಮಾಡುತ್ತಿದ್ದರು. 

ಇತ್ತೀಚಿನ ವರ್ಷದಲ್ಲಿ ದೇವರ ವಾರ್ಷಿಕೋತ್ಸವದ ಸಂದರ್ಭ ಪ್ರಾಣಿಬಲಿಯ ಕುರಿತು  ಗ್ರಾಮಸ್ತರಲ್ಲೊಬ್ಬರ ಎರಡು ಬಾರಿ ಮಾಡಿದ ತಕರಾರಿನಿಂದಾಗಿ ಶಕ್ತಿ ದೇವತೆಯ ಬಲಿ ಪೂಜೆಯನ್ನು ನಿಲ್ಲಿಸಲಾಗಿತ್ತು, ಆದರೆ ಕಾಲಾಂತರದಲ್ಲಿ ಪುನಃ ದೇವಿಯ  ಮಹಿಮೆಯ  ಫಲವಾಗಿ ತಮ್ಮ ತಪ್ಪಿನ ಅರಿವಾಗಿ ಗ್ರಾಮದೇವತೆಗೆ ಸಾಂಪ್ರದಾಯಿಕ  ಬಲಿ ಪೂಜೆಯನ್ನು ಅತ್ಯಂತ ಶ್ರದ್ಧೆಯಿಂದ ಪುನಾರಂಭಿಸಲಾಯಿತು. 

ಪ್ರತಿ ವರ್ಷ ಯುಗಾದಿ ಹಬ್ಬ ಮುಗಿದ ಮೊದಲ ವಾರದ ನಂತರ ಬರುವ ಸೋಮವಾರದಂದು ಶ್ರೀ ಬಸವೇಶ್ವರ ದೇವರ ಹಾಗೂ ಮಂಗಳವಾರದಂದು ಶ್ರೀ ಚೌಡೇಶ್ವರಿ ತಾಯಿಯ ವಾರ್ಷಿಕ ಪೂಜೆಯನ್ನು ನೆರವೇರಿಸಿಕೊಂಡು ಬರುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಧಾರ್ಮಿಕ ಪ್ರತೀತಿಯಾಗಿದೆ. ​ಈ ವಿಶೇಷ ದಿನಗಳಂದು ಸುತ್ತಮುತ್ತಲಿನ ಊರುಗಳಿಂದ 3 ಸಾವಿರಕ್ಕೂ ಅಧಿಕ ಭಕ್ತಾದಿಗಳು ಆಗಮಿಸಿ, ಭಕ್ತಿಭಾವದಿಂದ ತಮ್ಮ ಹರಕೆಯನ್ನು ಒಪ್ಪಿಸಿ ಪೂಜೆ ಸಲ್ಲಿಸಿದರೆ ಧನ್ಯತೆ ಸಿಗುತ್ತದೆ ಎಂಬ ಗಾಢ ನಂಬಿಕೆ ಇಂದಿಗೂ ಇದೆ. ಈ ಸಂದರ್ಭದಲ್ಲಿ ಬಂದಂತಹ ಎಲ್ಲಾ ಭಕ್ತರಿಗೂ ಮಹಾಪ್ರಸಾದದ (ದಾಸೋಹ) ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು, ಇದು ಆಚರಣೆಯಾಗಿ ರೂಢಿಯಲ್ಲಿದೆ.

ಹಾಗೆಯೇ ಈ ಇಡೀ ಮಹತ್ಕಾರ್ಯದ ಅಭೂತಪೂರ್ವ ಯಶಸ್ಸಿನ ಹಿಂದೆ ಪ್ರಸ್ತುತ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಸಿ. ಮಲ್ಲಿಕಾರ್ಜುನ, ಉಪಾಧ್ಯಕ್ಷರಾದ ಕಳಂಜನ ದಾದಪ್ಪ ಹಾಗೂ ಸದಸ್ಯರಾದ ಗುಡ್ಡೆಮನೆ ವಿಶ್ವಕುಮಾರ್, ಸಂತೋಷ್ ಬಿ.ಎನ್., ಷಣ್ಮುಖ ಬಿ.ಎನ್., ಕೊಡೇಕಲ್ ನಿತ್ಯಾನಂದ, ಕಾಶಿ ಬಿ.ಎನ್., ಮಂಡೇಪಂಡ ಉತ್ತಪ್ಪ, ಸಂಪತ್ ಬಿ.ಎನ್., ಪುಲಿಯಿಂಡ ರಾಮು, ವಿಜಯಕುಮಾರ್, ದಿನು ಚಿಕಂಡಾ, ಪ್ರಕಾಶ್, ಅಭಿಷೇಕ್, ಪ್ರಶಾಂತ್ ಸುವರ್ಣ ಮತ್ತು ಹರ್ಷ ಬಿ.ಆರ್. ಅವರ ಶ್ರಮ ಅಡಗಿದೆ. ಇವರೊಂದಿಗೆ ದಿವಂಗತ ಮಂಡೇಪಂಡ ರಘು ಅವರ ಸ್ಮರಣೆ ಹಾಗೂ ಇಡೀ ಊರಿನ ಸರ್ವ ಗ್ರಾಮಸ್ಥರು ಮತ್ತು ಭಕ್ತಾದಿಗಳು ತಮ್ಮ ತನು, ಮನ, ಧನ ಸಹಾಯದ ಮೂಲಕ ನೀಡಿದ ಸಕ್ರಿಯ ಸಹಕಾರ ಮತ್ತು ಬೆಂಬಲವೇ ಈ ಕಾರ್ಯದ ಯಶಸ್ಸಿಗೆ ನಿಜವಾದ ಪ್ರೇರಣೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!