ಮಡಿಕೇರಿ ಜು 31: ಬ್ರಹ್ಮಗಿರಿ ಸಹೋದಯ ಕೊಡಗು ಸಂಸ್ಥೆಯ ವತಿಯಿಂದ ನಗರದ ಎಎಲ್‌ಜಿ ಕ್ರೆಸೆಂಟ್ ಶಾಲೆಯಲ್ಲಿ ಇತ್ತೀಚೆಗೆ ಸಿಬಿಎಸ್‌ಸಿ ಅಂತರಶಾಲಾ ಪೋಸ್ಟರ್ ರಚನಾ ಸ್ಪರ್ಧೆಯು ನಡೆಯಿತು.
ಕೊಡಗು ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಕಲಾತ್ಮಕ ಪ್ರತಿಭೆ, ಸೃಜನಶೀಲತೆ ಹಾಗೂ ಕಲ್ಪನಾಶಕ್ತಿಯನ್ನು ಅನಾವರಣಗೊಳಿಸಿದರು. ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯ ಕಿರಿಯ ವಿಭಾಗದಲ್ಲಿ ಎಎಲ್‌ಜಿ ಕ್ರೆಸೆಂಟ್ ಶಾಲೆಯ ಅರ್ಹಾನ್ ಅಹ್ಮದ್ (ಪ್ರಥಮ), ಸುಳ್ಯದ ಕೆವಿಜಿ ಐಪಿಎಸ್ ಶಾಲೆಯ ಲಿಕೇಶ್ ಪಿ. ಜೆ. (ದ್ವಿತೀಯ) ಹಾಗೂ ಅಂಕುರ್ ಪಬ್ಲಿಕ್ ಶಾಲೆಯ ಹೇಶ್ವಿ ಪೊನ್ನಮ್ಮ (ತೃತೀಯ) ಬಹುಮಾನ ಪಡೆದುಕೊಂಡರು.
ಹಿರಿಯರ ವಿಭಾಗದಲ್ಲಿ ಸುಳ್ಯದ ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಪ್ರತೀಕ್ಷಾ (ಪ್ರಥಮ), ಎಎಲ್‌ಜಿ ಕ್ರೆಸೆಂಟ್ ಶಾಲೆಯ ರಿಷಾ ಫಾತಿಮಾ (ದ್ವಿತೀಯ) ಮತ್ತು ಅಂಕುರ್ ಪಬ್ಲಿಕ್ ಶಾಲೆಯ ಲಿಪಿ ಮಾದಪ್ಪ (ತೃತೀಯ) ವಿಜೇತರಾದರು.
ಜನರಲ್ ತಿಮ್ಮಯ್ಯ ಶಾಲೆಯ ಕಲಾ ಶಿಕ್ಷಕರಾದ ಭರತ್ ಹಾಗೂ ಗಾಳಿಬೀಡು ಜವಾಹರ್ ನವೋದಯ ಶಾಲೆಯ ಕಲಾ ಶಿಕ್ಷಕಿ ಶ್ರೀಮತಿ ಸರೋಜ ಘಾಣತೆ ತೀರ್ಪುಗಾರರಾಗಿ ಭಾಗವಹಿಸಿ ಮಕ್ಕಳ ಕಲಾ ಅಭಿವ್ಯಕ್ತಿಯನ್ನು ಶ್ಲಾಘಿಸಿದರು. ತೀರ್ಪು ಪ್ರಕಟಣೆ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜಾಗೃತಿ ಹಾಗೂ ಕಲೆಯ ಮೇಲಿನ ಆಸಕ್ತಿ ಮೂಡಿಸಲು ವೇದಿಕೆಯಾದ ಈ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಬ್ರಹ್ಮಗಿರಿ ಸಹೋದಯ ಕೊಡಗು ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.




