ಮಡಿಕೇರಿ ಜೂ.02: ಭಾರತೀಯ ಜೂನಿಯರ್ ಟೆನಿಸ್ ನಲ್ಲಿ ಕೊಡಗು ಮೂಲದ 12 ವರ್ಷದ ಬಾಲಕ ಬಿ.ಸಿ. ಥನುಶ್ ಶೇಖರ್ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಆಲ್ ಇಂಡಿಯಾ ಲಾನ್ ಟೆನಿಸ್ ಅಸೋಸಿಯೇಷನ್ (AITA) ಪ್ರಕಟಿಸಿರುವ 12 ವರ್ಷದೊಳಗಿನ ಬಾಲಕರ ರಾಷ್ಟ್ರೀಯ ಶ್ರೇಯಾಂಕ ಪಟ್ಟಿಯಲ್ಲಿ ಥನುಶ್ ದೇಶದಲ್ಲೇ ನಂ. 1 ಸ್ಥಾನ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು.

ಇತ್ತೀಚೆಗೆ ನಡೆದ ‘ಕರ್ನಾಟಕ ಒಲಿಂಪಿಕ್ಸ್ 2025’ರ ಟೆನಿಸ್ ವಿಭಾಗದಲ್ಲೂ ಇವರು ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲೂ ಉತ್ತಮ ಪ್ರದರ್ಶನ ನೀಡಿರುವ ಥನುಶ್ ಶ್ರೀಲಂಕಾ ಮತ್ತು ನೇಪಾಳದಲ್ಲಿ ನಡೆದ ಟೆನಿಸ್ ಪಂದ್ಯಾವಳಿಗಳಲ್ಲಿ ಸತತ ಎರಡು ವರ್ಷ ‘ಟೀಮ್ ಇಂಡಿಯಾ’ವನ್ನು ಪ್ರತಿನಿಧಿಸಿದ್ದಾರೆ. ಹಾಗೂಇಂದೋರ್‌ನಲ್ಲಿ ನಡೆದ ಏಷ್ಯನ್ ಅಂಡರ್-12 ಜೂನಿಯರ್ ಚಾಂಪಿಯನ್ಶಿಪ್‌ನಲ್ಲಿ ಏಷ್ಯಾದ ಪ್ರಮುಖ ಆಟಗಾರರನ್ನು ಸೋಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದು ಇವರ ದೊಡ್ಡ ಸಾಧನೆಯಾಗಿದೆ.

ಇದರೊಂದಿಗೆ, ಇದುವರೆಗೆ 11 ರಾಷ್ಟ್ರೀಯ ಸರಣಿ (National Series) ಪ್ರಶಸ್ತಿಗಳು, 2 ಸೂಪರ್ ಸೀರೀಸ್ ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಚಾಂಪಿಯನ್ಶಿಪ್‌ನಲ್ಲಿ ರನ್ನರ್-ಅಪ್ ಸ್ಥಾನವನ್ನು ಥನುಶ್ ತಮ್ಮದಾಗಿಸಿಕೊಂಡಿದ್ದಾರೆ
ಥನುಶ್ ಮೂಲತಃ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ಸಮೀಪದ ಕಾನ್ ಬೈಲ್ ಗ್ರಾಮದವರಾಗಿದ್ದು, ಬಿ.ಎಸ್. ಚಂದ್ರಶೇಖರ್ ಹಾಗೂ ಬಿ.ಎಸ್. ಚೈತ್ರ ದಂಪತಿಯ ಪುತ್ರರಾಗಿದ್ದಾರೆ. ಇವರ ತಂದೆ ಚಂದ್ರಶೇಖರ್ ಬೆಂಗಳೂರಿನ ‘TAFL’ ಟೆನಿಸ್ ಅಕಾಡೆಮಿಯ ಮುಖ್ಯ ತರಬೇತುದಾರರಾಗಿದ್ದು, ಅವರ ಮಾರ್ಗದರ್ಶನದಲ್ಲೇ ಥನುಶ್ ತರಬೇತಿ ಪಡೆಯುತ್ತಿದ್ದಾರೆ. ತನುಶ್ ಅವರ ಈ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಘ (KSLTA) ಇತ್ತೀಚೆಗೆ ಇವರನ್ನು ವಿಶೇಷವಾಗಿ ಸನ್ಮಾನಿಸಿದೆ.
ಈ ಉದಯೋನ್ಮುಖ ಕೊಡಗು ಮೂಲದ 12ರ ಬಾಲಕ ಥನುಶ್ ಗೆ ಇತ್ತೀಚೆಗೆ ಜರುಗಿದ 17ನೆ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.




