Google search engine
Home♦️ಇತ್ತೀಚಿನ ಸುದ್ದಿಗಳು.ಬೊಳ್ಳೂರು ಗ್ರಾಮದಲ್ಲಿ ಜೂನ್ 15 ರಿಂದ ಗ್ರಾಮದೇವತೆಗಳ ಪುನರ್‌ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಮಹೋತ್ಸವ

ಬೊಳ್ಳೂರು ಗ್ರಾಮದಲ್ಲಿ ಜೂನ್ 15 ರಿಂದ ಗ್ರಾಮದೇವತೆಗಳ ಪುನರ್‌ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ಧಾರ ಮಹೋತ್ಸವ

 ಗುಡ್ಡೆಹೊಸೂರು ಜೂ.14:  ಸಮೀಪದ ಬೊಳ್ಳೂರು ಗ್ರಾಮದಲ್ಲಿ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಟ್ರಸ್ಟ್ ಹಾಗೂ ಗ್ರಾಮಸ್ಥರ ವತಿಯಿಂದ ಗ್ರಾಮದೇವತೆಗಳಾದ ಶ್ರೀ ಬಸವೇಶ್ವರ ದೇವರ ಪುನರ್‌ಪ್ರತಿಷ್ಠಾಪನೆ, ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಹಾಗೂ ವಾರ್ಷಿಕ ಪೂಜಾ ಮಹೋತ್ಸವವು ಜೂನ್ 15 ರಿಂದ 17 ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. 

ಜೂನ್ 15ರ ಸೋಮವಾರ ಸಾಯಂಕಾಲ 5 ಗಂಟೆಗೆ ವೈದಿಕರ ಸ್ವಾಗತದೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಂಜೆ 6 ಗಂಟೆಯಿಂದ ಶ್ರೀ ಗಣಪತಿ ಪೂಜೆ, ಪುಣ್ಯಾಹವಾಚನ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ ಹಾಗೂ ಕಲಶ ಪ್ರತಿಷ್ಠೆ ನೆರವೇರಲಿದೆ. 

ಜೂನ್ 16ರ ಮಂಗಳವಾರ ಬೆಳಿಗ್ಗೆ 7 ಗಂಟೆಯಿಂದ ಶ್ರೀ ಮಹಾಗಣಪತಿ ಹೋಮ ನಡೆಯಲಿದ್ದು, ಬೆಳಿಗ್ಗೆ 8:12ರ ನಂತರ ಒದಗಿಬರುವ ಶುಭ ಕರ್ಕಾಟಕ ಲಗ್ನದಲ್ಲಿ ಶ್ರೀ ಚೌಡೇಶ್ವರಿ ದೇವಿ ವಿಗ್ರಹ ಪುನಃ ಪ್ರತಿಷ್ಠಾಪನೆ ಹಾಗೂ ಶ್ರೀ ಚಂಡಿಕಾ ಹೋಮ ಜರುಗಲಿದೆ. 

ನಾಳೆ ಸಂಜೆ 6 ಗಂಟೆಯಿಂದ ಬಸವೇಶ್ವರ ಸನ್ನಿಧಿಯಲ್ಲಿ ವಾಸ್ತು ಹೋಮ, ರಾಕ್ಷೋಘ್ನ ಹೋಮ ಹಾಗೂ ಕಲಶ ಪ್ರತಿಷ್ಠೆಗಳು ನಡೆಯಲಿವೆ. ಮಹೋತ್ಸವದ ಕೊನೆಯ ದಿನವಾದ ಜೂನ್ 17ರ ಬುಧವಾರ ಬೆಳಿಗ್ಗೆ 7:40 ರಿಂದ ಮಿಥುನ ಲಗ್ನದಲ್ಲಿ ಶ್ರೀ ಚೌಡೇಶ್ವರಿ ದೇವಿ ಶಿಖರಪ್ರತಿಷ್ಠೆ ಹಾಗೂ ಮಹಾ ಕುಂಭಾಭಿಷೇಕ ನೆರವೇರಲಿದ್ದು, ತದನಂತರ ಬೆಳಿಗ್ಗೆ 8:56ರ ಕರ್ಕಾಟಕ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಪುನಃಪ್ರತಿಷ್ಠೆ, ಮಹಾಕುಂಭಾಭಿಷೇಕ, ರುದ್ರಾಭಿಷೇಕ ಹಾಗೂ ಶ್ರೀ ಗುಳಿಗ ದೈವ ಪ್ರತಿಷ್ಠೆಗಳು ಅತ್ಯಂತ ಶ್ರದ್ಧಾಭಕ್ತಿಯಿಂದ ಜರುಗಲಿವೆ. 

ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ ನಡೆದು, ಸದ್ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಮಂತ್ರಾಕ್ಷತೆ ಕಾರ್ಯಕ್ರಮ ಇರಲಿದೆ.

​ಈ ಮಹೋತ್ಸವದ ದಿವ್ಯ ಸನ್ನಿಧಾನವನ್ನು ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಶ್ರೀ ಶ್ರೀ ಸದಾಶಿವ ಸ್ವಾಮಿಗಳು, ತೊರೆನೂರು ಮಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಮಲ್ಲೇಶ ಸ್ವಾಮಿಗಳು ಹಾಗೂ ದಿಂಡಗಾಡು ಮಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಅಪ್ಪಾಜಿ ಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಹಾಗೂ ಮಾಜಿ ಶಾಸಕರಾದ  ಎಂ.ಪಿ. ಅಪ್ಪಚ್ಚು ರಂಜನ್ ಅವರು ಆಗಮಿಸಲಿದ್ದಾರೆ ಎಂದು ದೇವಸ್ಥಾನ ಟ್ರಸ್ಟ್ ಸಮಿತಿ ಹಾಗೂ  ಬೊಳ್ಳೂರು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗವಹಿಸಿಬೇಕೆಂದು ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!