ಕುಶಾಲನಗರ ಜೂ.12: ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿ ಭಾಗದ ಸಿನಿಪ್ರಿಯರಿಗೆ ಶೀಘ್ರದಲ್ಲೇ ಸಿಗಲಿದೆ ಅಂತರರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಮಲ್ಟಿಪ್ಲೆಕ್ಸ್ ಅನುಭವ
ಮೈಸೂರಿನ ಪ್ರಸಿದ್ಧ ‘ಡಿಆರ್ಸಿ ಸಿನಿಮಾಸ್’ (DRC Cinemas) ಸಂಸ್ಥೆಯು ಕುಶಾಲನಗರದ ಪ್ರಮುಖ ಪ್ರವಾಸಿ ಹಾಗೂ ವಾಣಿಜ್ಯ ಕೇಂದ್ರವಾದ ತಾವರೆಕೆರೆ ಸಮೀಪ ತನ್ನ ನೂತನ ಚಿತ್ರಮಂದಿರವನ್ನು ಆರಂಭಿಸಲು ಎಲ್ಲಾ ರೀತಿಯ ಭರದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು , ಪ್ರಸ್ತುತ ಕೆಲವು ತಾಂತ್ರಿಕ ಹಾಗೂ ಕಾನೂನಾತ್ಮಕ ಅಗತ್ಯ ಸರ್ಕಾರಿ ಅನುಮತಿಗಳ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇವುಗಳು ಪೂರ್ಣಗೊಂಡ ತಕ್ಷಣವೇ ಚಿತ್ರಮಂದಿರವು ಅಧಿಕೃತವಾಗಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ DRC ಮ್ಯಾನೇಜಿಂಗ್ ಡೈರೆಕ್ಟರ್ ಹನುಮಂತು ಅವರು ಮಾಹಿತಿ ನೀಡಿದ್ದಾರೆ.

ಕೊಡಗಿನ ಪ್ರವೇಶ ದ್ವಾರದಂತಿರುವ ಕುಶಾಲನಗರದಲ್ಲಿ ಇಂತಹದ್ದೊಂದು ಹೈಟೆಕ್ ಚಿತ್ರಮಂದಿರ ತಲೆಎತ್ತುತ್ತಿರುವುದು ಈ ಭಾಗದ ಪ್ರವಾಸೋದ್ಯಮ ಹಾಗೂ ವಾಣಿಜ್ಯ ಕ್ಷೇತ್ರಕ್ಕೂ ದೊಡ್ಡ ಬಲ ತುಂಬಲಿದೆ ಎಂದು ಅವರು ಈ ಸಂದರ್ಭ ವಿಶ್ವಾಸ ವ್ಯಕ್ತಪಡಿಸಿದರು.
ಈ ಚಿತ್ರಮಂದಿರವನ್ನು ಕೇವಲ ಸಾಂಪ್ರದಾಯಿಕ ಚಿತ್ರಮಂದಿರದಂತೆ ನಿರ್ಮಿಸದೆ, ಮುಂಬೈ ಮೂಲದ ಪ್ರಸಿದ್ಧ ಹಿರಿಯ ಆರ್ಕಿಟೆಕ್ಟ್ಗಳ ಮೂಲಕ ಅತ್ಯಂತ ಭವ್ಯ ಹಾಗೂ ಐಷಾರಾಮಿಯಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ ಅವರು ಬೆಳ್ಳಿಪರದೆಯ ಮೇಲೆ ಕ್ರಿಸ್ಟಲ್ ಕ್ಲಿಯರ್ ದೃಶ್ಯಾವಳಿ ಹಾಗೂ ರೋಮಾಂಚಕ ಧ್ವನಿಯ ಅನುಭೂತಿ ನೀಡಲು ಇತ್ತೀಚಿನ ಅತ್ಯಾಧುನಿಕ ಡಿಜಿಟಲ್ ಪ್ರೊಜೆಕ್ಷನ್ ಮತ್ತು ಹೈ-ಡೆಫಿನಿಷನ್ ಸೌಂಡ್ ಸಿಸ್ಟಮ್ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದರು.

ಇದರೊಂದಿಗೆ ಪ್ರೇಕ್ಷಕರ ಸುರಕ್ಷತೆಗೆ ಅತ್ಯುನ್ನತ ಆದ್ಯತೆ ನೀಡಲಾಗಿದ್ದು, ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಯಮಾವಳಿಗಳನ್ನು (NBC) ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಯಾವುದೇ ತುರ್ತು ಅಥವಾ ಅಪಾಯದ ಸಂದರ್ಭಗಳು ಎದುರಾದರೆ ಸ್ವಯಂಚಾಲಿತವಾಗಿ ತೆರೆದುಕೊಳ್ಳುವ ಆಟೋಮ್ಯಾಟಿಕ್ ಬಾಗಿಲುಗಳು, ಸುಧಾರಿತ ಫೈರ್ ಸೇಫ್ಟಿ ಸಲಕರಣೆಗಳು , ಸ್ಮೋಕ್ ಡಿಟೆಕ್ಟರ್ಗಳು ಹಾಗೂ ಕತ್ತಲೆಯಲ್ಲಿ ಸುರಕ್ಷಿತವಾಗಿ ಓಡಾಡಲು ಆಸನಗಳ ಮೆಟ್ಟಿಲುಗಳಿಗೆ ವಿಶೇಷ ಸ್ಟೆಪ್ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ಪರಿಸರ ಸಂರಕ್ಷಣೆಗಾಗಿ ಇಲ್ಲಿ ಸುಧಾರಿತ ವೈಜ್ಞಾನಿಕ ಮಾದರಿಯ ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯನ್ನು ಕೂಡ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಮನರಂಜನೆಯ ಜೊತೆಗೆ ಈ ಯೋಜನೆ ಸ್ಥಳೀಯ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಗೂ ಮಹತ್ವದ ಕೊಡುಗೆ ನೀಡಲಿದೆ. ಮಲ್ಟಿಪ್ಲೆಕ್ಸ್ನ ವಿವಿಧ ವಿಭಾಗಗಳಾದ ಟಿಕೆಟಿಂಗ್, ಸೆಕ್ಯೂರಿಟಿ, ಹೌಸ್ ಕೀಪಿಂಗ್, ತಾಂತ್ರಿಕ ವಿಭಾಗ ಹಾಗೂ ಆಹಾರ ಮಳಿಗೆಗಳಲ್ಲಿ ಕೆಲಸ ಮಾಡಲು ಸ್ಥಳೀಯ ಯುವಕ-ಯುವತಿಯರಿಗೆ ಮೊದಲ ಆದ್ಯತೆ ನೀಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ಹನುಮಂತು ಅವರು ಇದೇ ಸಂದರ್ಭ ಪ್ರಕಟಿಸಿದರು.
ಇನ್ನು ಚಿತ್ರ ಪ್ರದರ್ಶನದ ವಿಚಾರಕ್ಕೆ ಬಂದರೆ, ಮಲ್ಟಿಪ್ಲೆಕ್ಸ್ ಸಂಸ್ಕೃತಿಯಲ್ಲಿ ಪ್ರಾದೇಶಿಕ ಭಾಷೆಗಳಿಗೆ ಚಿತ್ರಗಳು ಸಿಗುವುದಿಲ್ಲ ಎಂಬ ದೂರನ್ನು ದೂರಾಗಿಸಲು, DRC ಸಿನಿಮಾಸ್ ಇಲ್ಲಿ ನಮ್ಮ ಹೆಮ್ಮೆಯ ಕನ್ನಡ ಚಿತ್ರಗಳಿಗೆ ಪ್ರಥಮ ಆದ್ಯತೆ ಹಾಗೂ ಹೆಚ್ಚಿನ ಶೋಗಳನ್ನು ನೀಡಲು ನಿರ್ಧರಿಸಿಲಾಗಿದೆ ಎಂದರು.
ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ಗಳಲ್ಲಿ ಪ್ರೇಕ್ಷಕರ ಸಂಖ್ಯೆ ಕಮ್ಮಿಯಿದ್ದರೆ ಶೋ ರದ್ದು ಮಾಡಲಾಗುತ್ತದೆ, ಆದರೆ ಇಲ್ಲಿ ಕನಿಷ್ಠ 15 ಪ್ರೇಕ್ಷಕರಿದ್ದರೂ ಸಹ ಸಿನಿಮಾ ಪ್ರದರ್ಶನವನ್ನು ಕಡ್ಡಾಯವಾಗಿ ನಡೆಸಲಾಗುತ್ತದೆ. ವಾರಾಂತ್ಯ ಹಾಗೂ ಹಬ್ಬದ ದಿನಗಳಲ್ಲಿ ಸಾರ್ವಜನಿಕರ ಬೇಡಿಕೆಗೆ ತಕ್ಕಂತೆ ವಿಶೇಷ ಪ್ರದರ್ಶನಗಳನ್ನು ಆಯೋಜಿಸುವ ಯೋಜನೆ ಹೊಂದಲಾಗಿದ್ದು, ಸಮಯ ಮತ್ತು ವಾರಾಂತ್ಯ ದಿನಗಳಿಗೆ ಅನುಗುಣವಾಗಿ ಟಿಕೆಟ್ ದರಗಳಲ್ಲಿ ಸೂಕ್ತ ವ್ಯತ್ಯಾಸಗಳು ಹಾಗೂ ರಿಯಾಯಿತಿಗಳು ಇರಲಿವೆ ಎಂದು ಅವರು ವಿವರಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪಾರ್ಟ್ನರ್ ಆದ ವೈಶಾಲಿ ಹನುಮಂತು, ಕೃಷ್ಣ, ತಾಂತ್ರಿಕ ವಿಭಾಗದ ಮ್ಯಾನೇಜರ್ ಹಾಲೇಶ್, ಹಾಲ್ ವ್ಯವಸ್ಥಾಪಕ ಮೆರ್ವಿನ್ ಹಾಗೂ ಫ್ಲೋರ್ ಮ್ಯಾನೇಜರ್ ರಾಘವೇಂದ್ರ ಅವರು ಉಪಸ್ಥಿತರಿದ್ದರು.




