Google search engine
Home♦️ಇತ್ತೀಚಿನ ಸುದ್ದಿಗಳು.ಕೊಡಗು ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿ ವಿತರಣೆ: ಸಮಾಜದ ಋಣ ಮರಳಿ ತೀರಿಸಿ: ನಿವೃತ್ತ...

ಕೊಡಗು ಪತ್ರಿಕಾ ಭವನದಲ್ಲಿ ಪತ್ರಕರ್ತರ ಮಕ್ಕಳಿಗೆ ವಿದ್ಯಾನಿಧಿ ವಿತರಣೆ: ಸಮಾಜದ ಋಣ ಮರಳಿ ತೀರಿಸಿ: ನಿವೃತ್ತ ಶಿಕ್ಷಕ ನಾರಾಯಣಗೌಡರ ಹಿತನುಡಿ

ಮಡಿಕೇರಿ, ಜೂ.13:  ಇಲ್ಲಿನ ಕೊಡಗು ಪತ್ರಿಕಾ ಭವನ ಟ್ರಸ್ಟ್ (ರಿ) ಸಭಾಂಗಣದಲ್ಲಿ ಇಂದು  ಪತ್ರಕರ್ತರ ಮಕ್ಕಳಿಗೆ ‘ವಿದ್ಯಾನಿಧಿ ವಿತರಣಾ ಕಾರ್ಯಕ್ರಮವನ್ನು   ಹಮ್ಮಿಕೊಳ್ಳಲಾಗಿತ್ತು.

 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಲ್ಲಡ್ಕದ ನಿವೃತ್ತ ಶಿಕ್ಷಕರಾದ  ನಾರಾಯಣಗೌಡ ಅವರು, ಶಿಕ್ಷಕರು ನೀಡುವ ಶಿಸ್ತು ಮತ್ತು ಶಿಕ್ಷೆಯು ಮಕ್ಕಳಲ್ಲಿ ಸರಿ-ತಪ್ಪುಗಳನ್ನು ಗುರುತಿಸುವ ನೈತಿಕ ಪ್ರಜ್ಞೆಯನ್ನು ಬಾಲ್ಯದಲ್ಲೇ ಬೆಳೆಸುತ್ತದೆ. 

ಬಾಲ್ಯದಲ್ಲಿ ಶಿಸ್ತು ಕಲಿಯದಿದ್ದರೆ ಮುಂದೊಂದು ದಿನ ಮಕ್ಕಳು ದೊಡ್ಡ ಅಪರಾಧ ಎಸಗುವ ಸಾಧ್ಯತೆ ಇರುತ್ತದೆ, ವ್ಯಾಸಂಗದ ಅವಧಿಯಲ್ಲಿ ಶಿಕ್ಷಕರು ಮಕ್ಕಳಿಗೆ ಶಿಸ್ತಿನ ಕ್ರಮ ಜರುಗಿಸುವಾಗ ಪೋಷಕರು ಸಂಯಮದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದರು. 

ಇಂದು ವಿದ್ಯಾರ್ಥಿಗಳು ಪಡೆಯುತ್ತಿರುವ ಸಹಾಯ ಹಸ್ತವನ್ನು ಭವಿಷ್ಯದಲ್ಲಿ ಸಮಾಜಕ್ಕೆ ಮರಳಿ ಕೊಡುವ ಗುಣ ಬೆಳೆಸಿಕೊಳ್ಳಬೇಕು ಎಂದ ತಿಳಿಸಿದ ಅವರು, ಮಕ್ಕಳು ಇಂತಹ  ಆಸರೆಯ ಏಣಿಯ ಸಹಾಯದಿಂದ ಉನ್ನತ ಸ್ಥಾನಕ್ಕೇರಿ ಸ್ವಾವಲಂಬಿಯಾದಾಗ, ತಮ್ಮಂತೆಯೇ ಕಷ್ಟದಲ್ಲಿರುವ ಮತ್ತೊಬ್ಬ ವಿದ್ಯಾರ್ಥಿಯ ಬೆಳವಣಿಗೆಗೆ ಹಣ, ಜ್ಞಾನ ಅಥವಾ ಸೂಕ್ತ ಮಾರ್ಗದರ್ಶನದ ಮೂಲಕ ನೆರವಾಗಬೇಕು  ಆಗಲೇ  ಕೊಡಗು ಪತ್ರಿಕಾ ಭವನ ಟ್ರಸ್ಟ್ (ರಿ) ನ ಈ  ಉತ್ತಮ ಸಮಾಜಮುಖಿ ಕಾರ್ಯಕ್ರಮಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು.

​ಇದೇ ಸಂದರ್ಭದಲ್ಲಿ ಮೊಬೈಲ್ ಬಳಕೆಯ ಬಗ್ಗೆ ವಿದ್ಯಾರ್ಥಿಗಳನ್ನು ಎಚ್ಚರಿಸಿದ ಅವರು, ಬೆಂಕಿಪೊಟ್ಟಣದಿಂದ ದೀಪ ಬೆಳಗಿಸಿ ಮನೆಗೆ ಬೆಳಕು ತರಬಹುದು ಹಾಗೆ ಅದೇ  ಬೆಂಕಿಪೊಟ್ಟಣದಿಂದ ಇಡೀ ಮನೆಯನ್ನೇ ಸುಟ್ಟು ಭಸ್ಮ ಮಾಡಬಹುದು,  ಅದೇ ರೀತಿ ಮೊಬೈಲ್ ಎಂಬ ಶಕ್ತಿಯುತ ಸಾಧನದ ಸದ್ಬಳಕೆ ಅಥವಾ ದುರ್ಬಳಕೆ ಸಂಪೂರ್ಣವಾಗಿ ನಿಮ್ಮ ಕೈಯಲ್ಲೇ ಇರುತ್ತದೆ ಎಂದು ಮಾರ್ಮಿಕವಾಗಿ ತಿಳಿಹೇಳಿದರು. 

ಮೊಬೈಲ್ ಅನ್ನು ಜ್ಞಾನಾರ್ಜನೆಗೆ, ಹೊಸ ಕೌಶಲ್ಯಗಳನ್ನು ಕಲಿಯಲು ಹಾಗೂ ಪ್ರಗತಿಗೆ ಬಳಸಿದರೆ ಅದು ಜೀವನದಲ್ಲಿ ಪ್ರಗತಿಯ ದೀಪವಾಗುತ್ತದೆ. ಇಂಟರ್ನೆಟ್ ಜಗತ್ತಿನ ಅಪಾರ ಮಾಹಿತಿಯನ್ನು ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಬೇಕೇ ಹೊರತು, ನೆಮ್ಮದಿಯನ್ನೇ ಸುಡುವ ಬೆಂಕಿಯಾಗಿಸಿಕೊಳ್ಳಬಾರದು. ಈ ಆಧುನಿಕ ಸಾಧನವನ್ನು ನಮ್ಮನ್ನು ಬೆಳಗಿಸುವ ಜ್ಞಾನದ ದೀಪವಾಗಿ ಬಳಸಬೇಕೇ ಹೊರತು, ನಮ್ಮನ್ನು ನಾವೇ ನಾಶಪಡಿಸಿಕೊಳ್ಳುವ ಸಾಧನವಾಗಿಸಬಾರದು ಎಂದು ಮಕ್ಕಳಿಗೆ ಎಚ್ಚರಿಸಿದರು. 

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಜಿ. ಉಮೇಶ್  ಪ್ರಾಸ್ತಾವಿಕ ನುಡಿಗಳನ್ನು ಆಡುತ್ತಾ, ​ಕೊಡಗು ಪತ್ರಿಕಾ ಭವನ ಟ್ರಸ್ಟ್ ನಿರಂತರವಾಗಿ ಸದ್ದುಗದ್ದಲವಿಲ್ಲದೆ ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ, ಕೋವಿಡ್ ಹಾಗೂ ಪ್ರಾಕೃತಿಕ ವಿಕೋಪಗಳ ಕಠಿಣ ಸಂದರ್ಭದಲ್ಲಿ ಜಿಲ್ಲಾ ವ್ಯಾಪ್ತಿಯ ಪತ್ರಕರ್ತರಿಗೆ ಆಹಾರದ ಕಿಟ್‌ಗಳನ್ನು ವಿತರಿಸಿ ನೆರವಾಗಿದೆ ಹಾಗೂ ಟ್ರಸ್ಟ್, 2024 ರಿಂದ ಪತ್ರಕರ್ತರ ಮಕ್ಕಳಿಗಾಗಿ ‘ವಿದ್ಯಾನಿಧಿ’ ಯೋಜನೆಯನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಾ  ಬಂದಿದೆ ,  ಯೋಜನೆಯ ಆರಂಭಿಕ ವರ್ಷವಾದ 2024 ರಲ್ಲಿ 1.60 ಲಕ್ಷ ರೂ., 2025 ರಲ್ಲಿ 28 ವಿದ್ಯಾರ್ಥಿಗಳಿಗೆ 2.19 ಲಕ್ಷ ರೂ. ಹಾಗೂ ಪ್ರಸ್ತುತ ವರ್ಷದಲ್ಲಿ ದಾಖಲೆಯ 50 ವಿದ್ಯಾರ್ಥಿಗಳಿಗೆ ಒಟ್ಟು 2.26 ಲಕ್ಷ ರೂ. ವಿದ್ಯಾನಿಧಿಯನ್ನು ವಿತರಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲೂ ಟ್ರಸ್ಟ್ ನೀಡುವ ಇಂತಹ ಎಲ್ಲಾ ಸೌಲಭ್ಯಗಳನ್ನು ಪತ್ರಕರ್ತರು ಹಾಗೂ ಅವರ ಮಕ್ಕಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಅವರು ಇದೇ ಸಂದರ್ಭ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಗಳಾದ  ಎಂ.ಪಿ ಕೇಶವ ಕಾಮತ್ ಹಾಗೂ ಟ್ರಸ್ಟಿ ಗಳಾದ ಟಿ.ಪಿ ರಮೇಶ್ ಅವರು ವಿದ್ಯಾನಿಧಿ ಪಡೆದ ಮಕ್ಕಳ ಮುಂದಿನ ಉನ್ನತ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ವಿದ್ಯಾನಿಧಿ ಪಡೆದ ಮಕ್ಕಳ ಪೋಷಕರಾದ ಜಿ.ವಿ.ರವಿ ಕುಮಾ‌ರ್, ಅನುಷಾ, ರಂಜಿತ್ ಕವಲಪಾರ, ಕುಡೆಕಲ್‌ ಸಂತೋಷ್ ಹಾಗೂ ಎಸ್.ಎ. ಮುರಳೀಧರ್ ಅವರು ಮಾತನಾಡಿ, ಟ್ರಸ್ಟ್ ಮಕ್ಕಳ ಶಿಕ್ಷಣಕ್ಕೆ ನಿರಂತರವಾಗಿ ನೆರವಾಗುತ್ತಿರುವುದಕ್ಕೆ ಹೆಮ್ಮೆಯಿಂದ ತಮ್ಮ  ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಟ್ರಸ್ಟ್ ನೀಡುತ್ತಿರುವ ಈ ಸಹಾಯ ಹಸ್ತವು ಕೇವಲ ಆರ್ಥಿಕ ನೆರವಾಗದೆ, ಮಕ್ಕಳಲ್ಲಿ ತಾವು ಕೂಡ ಭವಿಷ್ಯದಲ್ಲಿ ಬೆಳೆದು ಸಮಾಜಕ್ಕೆ ಏನನ್ನಾದರೂ ಕೊಡುಗೆಯಾಗಿ ನೀಡಬೇಕು ಎನ್ನುವ ಉದಾತ್ತ ಚಿಂತನೆಯನ್ನು ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು  ಪೋಷಕರು ತಮ್ಮ ಇಂಗಿತ ವ್ಯಕ್ತಪಡಿಸಿರು.

ಕಾರ್ಯಕ್ರಮದ ಆರಂಭದಲ್ಲಿ ಪತ್ರಕರ್ತ ನವೀನ್ ಚಿಣ್ಣಪ್ಪ ಅವರು ಪ್ರಾರ್ಥಿಸಿದರೆ, ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಕೋಶಾಧಿಕಾರಿ ಕೆ.ತಿಮ್ಮಪ್ಪ ಅವರು ಆಗಮಿಸಿದ್ದ ಎಲ್ಲರನ್ನೂ ಸ್ವಾಗತಿಸಿದರು. ಟ್ರಸ್ಟಿ ಮಧೋಷ್ ಪೂವಯ್ಯ ಅವರು ಉದ್ಘಾಟಕರನ್ನು ಸಭೆಗೆ ಪರಿಚಯಿಸಿದರು.  ಅನಿಲ್ ಎಚ್.ಟಿ ಅವರು ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರೆ, ಕೊನೆಯಲ್ಲಿ ಟ್ರಸ್ಟಿ ವಿ.ಪಿ.ಸುರೇಶ್ ಅವರು ವಂದನಾರ್ಪಣೆ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!