♦️ಹಾಸನದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ
ಹಾಸನ, ಜೂ 02: “ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಎಲೆಮರೆಯ ಕಾಯಂತಿರುವ ನೈಜ ಸಾಧಕರನ್ನು ಗುರುತಿಸಿ, ಅವರನ್ನು ಮುಖ್ಯವಾಹಿನಿಗೆ ತರುವ ಉದಾತ್ತ ನಿಟ್ಟಿನಲ್ಲಿ ಜನ್ಮತಾಳಿದೆ” ಎಂದು ವೇದಿಕೆಯ ಹಾಸನ ಜಿಲ್ಲಾ ಘಟಕದ ನೂತನ ಜಿಲ್ಲಾಧ್ಯಕ್ಷರಾದ ವಾಸು ಸಮುದ್ರವಳ್ಳಿ ಅವರು ಅಭಿಪ್ರಾಯಪಟ್ಟರು.
ನಗರದಲ್ಲಿ ಹಮ್ಮಿಕೊಂಡಿದ್ದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಾ
”ಕೇಂದ್ರ ಸಮಿತಿಯ ಟ್ರಸ್ಟಿಗಳ ಹಾಗೂ ಪದಾಧಿಕಾರಿಗಳ ಆಶೀರ್ವಾದದೊಂದಿಗೆ ನನ್ನ ಮೊದಲ ಅವಧಿಯಲ್ಲಿ ಜಿಲ್ಲೆಯಲ್ಲಿ ಗಮನಾರ್ಹ ಕೆಲಸಗಳನ್ನು ಮಾಡಲು ಸಾಧ್ಯವಾಗಿತ್ತು. ಪ್ರಸ್ತುತ ಎರಡನೇ ಅವಧಿಗೂ ನನ್ನನ್ನು ಜಿಲ್ಲಾಧ್ಯಕ್ಷರನ್ನಾಗಿ ಮುಂದುವರಿಸಿರುವುದು ನನ್ನ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸಮಿತಿಯ ಮಾರ್ಗದರ್ಶನ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಅಧ್ಯಕ್ಷರುಗಳ ಸಮರ್ಥ ಸಹಕಾರದೊಂದಿಗೆ, ವೇದಿಕೆಯ ಬೈಲಾ ನಿಯಮಾವಳಿಗಳಿಗೆ ಒಳಪಟ್ಟು ಮತ್ತಷ್ಟು ಸೃಜನಾತ್ಮಕ ಮತ್ತು ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,” ಎಂದು ವಾಸು ಸಮುದ್ರವಳ್ಳಿ ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.
ಸಮಾರಂಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಾಸನ ತಾಲ್ಲೂಕು ಅಧ್ಯಕ್ಷೆ ಕೆ.ಸಿ. ಗೀತಾ, ಬೇಲೂರು ತಾಲ್ಲೂಕು ಅಧ್ಯಕ್ಷ ಮಾರುತಿ ಕೆ.ಬಿ. ದೊಡ್ಡ ಕೋಡಿಹಳ್ಳಿ, ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷೆ ಕಾವ್ಯಶ್ರೀ ಕೃಷ್ಣ, ಹಾಸನ ಕಾರ್ಯದರ್ಶಿ ಸಿ.ಎನ್. ನೀಲಾವತಿ, ಆಲೂರು ಕಾರ್ಯದರ್ಶಿ ಧರ್ಮ ಕೆರಲೂರು ಹಾಗೂ ಆಲೂರು ಮಹಿಳಾ ಕಾರ್ಯದರ್ಶಿ ಎಂ. ಚಂದ್ರಕಲಾ ಆಲೂರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖ ಕವಯಿತ್ರಿಯರಾದ ಲಲಿತ ಎಸ್. ಸಕಲೇಶಪುರ, ಗಿರಿಜಾ ನಿರ್ವಾಣಿ, ಎಚ್.ಬಿ. ಚೂಡಾಮಣಿ, ರಾಣಿ ಸಿ. ಚರಾಶ್ರೀ, ಪದ್ಮಾವತಿ ವೆಂಕಟೇಶ್, ರುಮಾನ ಜಬೀರ್ ಸೇರಿದಂತೆ ಜಿಲ್ಲೆಯ ನೂರಾರು ಸಾಹಿತ್ಯಾಸಕ್ತರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




