Google search engine
Home♦️ಇತ್ತೀಚಿನ ಸುದ್ದಿಗಳು.ಪೊನ್ನಪ್ಪ ಸಂತೆ ಗ್ರಾಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ: ದುಶ್ಚಟ ಮುಕ್ತ ಸಮಾಜಕ್ಕೆ ಕರೆ

ಪೊನ್ನಪ್ಪ ಸಂತೆ ಗ್ರಾಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ: ದುಶ್ಚಟ ಮುಕ್ತ ಸಮಾಜಕ್ಕೆ ಕರೆ

ವಿರಾಜಪೇಟೆ ಮೇ 31: ತಾಲೂಕಿನ ಮಾಯಮುಡಿ ವಲಯದ ಪೊನ್ನಪ್ಪ ಸಂತೆ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವಿರಾಜಪೇಟೆ ವತಿಯಿಂದ  ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರಲ್ಲಿ ತಂಬಾಕು ಸೇವನೆಯಿಂದ ಆಗುವ ಭೀಕರ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

​ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಒಕ್ಕೂಟದ ಅಧ್ಯಕ್ಷರಾದ  ಗೀತಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. “ದುಶ್ಚಟ ಮುಕ್ತ ಸಮಾಜದ ನಿರ್ಮಾಣವೇ ನಮ್ಮ ಯೋಜನೆಯ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಂಸ್ಥೆಯು ಗ್ರಾಮೀಣ ಭಾಗದಲ್ಲಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ” ಎಂದು ಅವರು ತಿಳಿಸಿದರು.

​ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಶ್ವೇತಾ ಅವರು ತಂಬಾಕಿನಿಂದ ಆರೋಗ್ಯದ ಮೇಲಾಗುವ ಹಾನಿಗಳ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡಿದರು. “ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದಲ್ಲಿ ತಂಬಾಕು ಸೇವನೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ತಂಬಾಕು ಸೇವನೆಯು ಶ್ವಾಸಕೋಶದ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹದಗೆಡಿಸುತ್ತದೆ. ಇದು ನೇರವಾಗಿ ಕ್ಯಾನ್ಸರ್, ಉಸಿರಾಟದ ತೊಂದರೆ ಹಾಗೂ ಇತರೆ ಮಾರಕ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ” ಎಂದು ಅವರು ಎಚ್ಚರಿಸಿದರು.

​ಸರ್ಕಾರಿ ಪ್ರೌಢಶಾಲೆಯ ನಿವೃತ್ತ ಶಿಕ್ಷಕಿ ಸುಬ್ಬಮ್ಮ ಟಿ. ಆರ್. ಅವರು ಮಾತನಾಡಿ, “ಇಂದಿನ ಯುವ ಪೀಳಿಗೆಯು ಇಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ತಮ್ಮ ಅಮೂಲ್ಯವಾದ ಜೀವನ ಹಾಗೂ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಂಬಾಕು ಮುಂತಾದ ವ್ಯಸನಗಳಿಂದಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕೆಡುತ್ತಿದ್ದು, ದಿನನಿತ್ಯದ ಘಟನೆಗಳೇ ಇದಕ್ಕೆ ಸಾಕ್ಷಿ” ಎಂದು ಉದಾಹರಣೆ ಸಮೇತ ವಿವರಿಸಿದರು.

​ಕೃಷಿ ಮೇಲ್ವಿಚಾರಕರಾದ ವಸಂತ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ತಂಬಾಕು ಮುಕ್ತ ಸಮಾಜದ ಸಂಕಲ್ಪ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!