ಬೆಂಗಳೂರು/ಮಡಿಕೇರಿ ಜೂ.01: ರಾಜ್ಯದಲ್ಲಿ ಹಾಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ರಾಜ್ಯದ ಅಭಿವೃದ್ಧಿ ಕಾರ್ಯಗಳು ಹಾಗೂ ಪಕ್ಷ ಸಂಘಟನೆ ಚುರುಕುಗೊಳ್ಳಲಿದೆ. ೨೦೨೮ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮುಖ್ಯ ಗುರಿ” ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಸುದ್ದಿ ಸಂಸ್ಥೆಗಳಾದ ಪಿ.ಟಿ.ಐ, ಎ.ಎನ್.ಐ ಹಾಗೂ ಐ.ಎ.ಎನ್.ಎಸ್ ಜೊತೆ ಮಾತನಾಡಿದ ಅವರು, ರಾಜ್ಯ ರಾಜಕಾರಣದ ಪ್ರಸ್ತುತ ವಿದ್ಯಮಾನಗಳು ಹಾಗೂ ಸಚಿವ ಸಂಪುಟ ಪುನಾರಚನೆ ಕುರಿತಾಗಿ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ಅಗತ್ಯ
ಇಂದಿನ ಬದಲಾಗುತ್ತಿರುವ ಪ್ರಸ್ತುತ ಸಮಾಜಕ್ಕೆ ಯುವ ನಾಯಕತ್ವದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಶಾಸಕರು, ಸಚಿವ ಸಂಪುಟದಲ್ಲಿ ಕನಿಷ್ಠ ಐದು ಮಂದಿ ಯುವಕರಿಗೆ ಸ್ಥಾನ ನೀಡುವುದು ಸೂಕ್ತ. ಇದರಿಂದ ಸಚಿವ ಸಂಪುಟದಲ್ಲಿ ಯುವಕರಿಗೆ ಆದ್ಯತೆ ಸಿಕ್ಕರೆ ಆಡಳಿತ ಯಂತ್ರಕ್ಕೆ ನವೀನ ಆಲೋಚನೆಗಳು ಹಾಗೂ ಹೆಚ್ಚುವರಿ ಕಾರ್ಯಚೈತನ್ಯ ಸಿಗಲಿದೆ. ಹಾಗೂ ಸಚಿವ ಸ್ಥಾನ ನೀಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಚಾರವಾಗಿದೆ ಎಂದರು.
*ಕೊಡಗಿಗೆ ಸಿಗಲಿ ಪ್ರಾತಿನಿಧ್ಯ – ೨೦೦೪ರ ನಂತರ ಮಂತ್ರಿ ಸ್ಥಾನವಿಲ್ಲ
ಕೊಡಗು ಜಿಲ್ಲೆಗೆ ಸಚಿವ ಸ್ಥಾನದ ಅಗತ್ಯವನ್ನು ಬಲವಾಗಿ ಒತ್ತಿಹೇಳಿದ ಡಾ. ಮಂತರ್ ಗೌಡ, “ಕೊಡಗಿನಂತಹ ಪ್ರಮುಖ ಪ್ರದೇಶಕ್ಕೆ ಸಚಿವ ಸ್ಥಾನ ನೀಡಬೇಕಾಗಿರುವುದು ಇಂದಿನ ಅನಿವಾರ್ಯತೆಯಾಗಿದೆ. ಜಿಲ್ಲೆಗೆ ಕೊನೆಯದಾಗಿ ೨೦೦೪ನೇ ಇಸವಿಯಲ್ಲಿ ಸಚಿವ ಸ್ಥಾನ ಸಿಕ್ಕಿತ್ತು. ಆ ನಂತರದ ವರ್ಷಗಳಲ್ಲಿ ಕೊಡಗಿಗೆ ಮಂತ್ರಿಮಂಡಲದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ” ಎಂದು ನೆನಪಿಸಿದರು.
ಡಿ.ಕೆ. ಶಿವಕುಮಾರ್ ಹಾದಿಯಲ್ಲೇ ಸಾಗುವ ಆಶಯ
ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಜೀವನವನ್ನು ಉಲ್ಲೇಖಿಸಿದ ಡಾ. ಮಂತರ್ ಗೌಡ, ಡಿ.ಕೆ. ಶಿವಕುಮಾರ್ ಅವರು ತಾವಿನ್ನೂ ಯುವಕರಾಗಿದ್ದಾಗಲೇ ಮಂತ್ರಿ ಸ್ಥಾನ ಪಡೆದು ಯಶಸ್ವಿಯಾಗಿ ಜವಾಬ್ದಾರಿ ನಿಭಾಯಿಸಿದ್ದರು. ನನ್ನ ವಿಚಾರದಲ್ಲೂ ಅದೇ ಇತಿಹಾಸ ಮರುಕಳಿಸಲಿ, ಕಿರಿಯ ವಯಸ್ಸಿನಲ್ಲೇ ಜನಸೇವೆ ಮಾಡಲು ಸಚಿವ ಸ್ಥಾನದ ಅವಕಾಶ ಸಿಗಲಿ ಎಂಬ ಇಚ್ಛೆ ನನಗಿದೆ ಎಂದು ಮಾದ್ಯಮದ ಮುಂದೆ ತಮ್ಮ ಮಹತ್ವಾಕಾಂಕ್ಷೆಯನ್ನು ತಿಳಿಸಿದರು.




