ಮಡಿಕೇರಿ ಜು07: ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ನೂತನ ಅಧ್ಯಕ್ಷರಾಗಿ ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ.ಜಿ. ಪ್ರೇಮ್ ಕುಮಾರ್ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ಮಡಿಕೇರಿಯ ಕೊಡಗು ಪತ್ರಿಕೆ ಭವನದ ಸಭಾಂಗಣದಲ್ಲಿ ಬಳಗದ ಅಧ್ಯಕ್ಷ ಲೋಕನಾಥ ಅಮೆಚೂರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಉಳಿದಂತೆ ಉಪಾಧ್ಯಕ್ಷರಾಗಿ ಎಂ. ಮೊಯ್ದಿನ್ ಹಾಗೂ ಶ್ರೀಮತಿ ರೇವತಿ ರಮೇಶ್, ಗೌರವ ಕಾರ್ಯದರ್ಶಿಯಾಗಿ ಶ್ರೀಮತಿ ಭಾರತಿ ರಮೇಶ್, ಕೋಶಾಧಿಕಾರಿಯಾಗಿ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಮತ್ತು ಸಹಕಾರ್ಯದರ್ಶಿಯಾಗಿ ಕೆ.ವಿ. ಉಮೇಶ್ ಅವರನ್ನು ಆರಿಸಲಾಯಿತು. ಇದೇ ಸಂದರ್ಭದಲ್ಲಿ ಎಂ.ಪಿ. ಕೇಶವ ಕಾಮತ್, ಟಿ.ಪಿ. ರಮೇಶ್, ಅಂಬೇಕಲ್ ನವೀನ್, ಕೆ.ಟಿ. ಬೇಬಿ ಮ್ಯಾಥ್ಯು, ನೆರವಂಡ ಉಮೇಶ್, ಲೋಕನಾಥ್ ಅಮೆಚೂರ್, ಶ್ರೀಮತಿ ಶ್ವೇತಾ ರವೀಂದ್ರ, ಬಿ.ಆರ್. ಜೋಯಪ್ಪ ಹಾಗೂ ಶ್ರೀಮತಿ ಸುನಿತಾ ಪಿ.ಪಿ. ಅವರನ್ನು ನಿರ್ದೇಶಕರುಗಳನ್ನಾಗಿ ಮತ್ತು ಬಿ.ಎ. ಶಂಷುದ್ದೀನ್, ಎಸ್.ಐ. ಮುನೀರ್ ಅಹ್ಮದ್, ಜಯಪ್ಪ ಹಾನಗಲ್ ಅವರನ್ನು ಗೌರವ ಸಲಹೆಗಾರರನ್ನಾಗಿ ನೇಮಿಸಲಾಯಿತು.
ಮಹಾಸಭೆಯ ಪ್ರಮುಖ ನಡಾವಳಿಯಾಗಿ ಗೌರವ ಕಾರ್ಯದರ್ಶಿ ಶ್ರೀಮತಿ ಭಾರತಿ ರಮೇಶ್ ಅವರು ಕಳೆದ ಸಾಲಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಅವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಒಪ್ಪಿಗೆ ಪಡೆದರು. ಕಾರ್ಯಕ್ರಮದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಸದಸ್ಯರುಗಳಾದ ಲಿಯಕತ್ ಆಲಿ, ಮನು ಶೆಣೈ, ಟಿ.ಸಿ. ತಮ್ಮಯ್ಯ ಮತ್ತು ಕೇಶವ ಪರಾಜೆ ಅವರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಲಾಯಿತು. ಮಹಾಸಭೆಯಲ್ಲಿ ಸದಸ್ಯರುಗಳಾದ ಚಂದನ್ ಕಾಮತ್, ಪ್ರೇಮ ರಾಘವಯ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶ್ರೀಮತಿ ರೇವತಿ ರಮೇಶ್ ಅವರು ಸಭೆಯನ್ನು ಸ್ವಾಗತಿಸಿದರೆ, ಶ್ರೀಮತಿ ಭಾರತಿ ರಮೇಶ್ ಕಾರ್ಯಕ್ರಮವನ್ನು ನಿರೂಪಿಸಿದರು.




