ಗುಡ್ಡೆಹೊಸೂರು ಜು 07: ಸಹಕಾರ ಕ್ಷೇತ್ರವು ಪ್ರಜಾಪ್ರಭುತ್ವದ ಮಾದರಿಯಲ್ಲಿ ಪ್ರಶ್ನಿಸುವ ಗುಣ ಬೆಳೆಸಿಕೊಂಡಾಗ ಮಾತ್ರ ಮತ್ತಷ್ಟು ಬಲಗೊಳ್ಳಲು ಸಾಧ್ಯ. ಕೊಡಗು ಜಿಲ್ಲೆಯಲ್ಲಿ ಪ್ರಶ್ನೆ ಮಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಇದು ಸಹಕಾರಿ ಕ್ಷೇತ್ರದಲ್ಲಿ ಅತ್ಯಂತ ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂಥರ್ ಗೌಡ ಅವರು ಅಭಿಪ್ರಾಯಪಟ್ಟರು.
ಕುಶಾಲನಗರ ತಾಲ್ಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘ, ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘ ಹಾಗೂ ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ಅಭಿನಂದನಾ ಸಮಾರಂಭ ಹಾಗೂ ಮೂರು ಸಂಘಗಳ ಜಾಗದ ದಾಖಲೆ ಪತ್ರಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಾಸಕರು ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ತಲಾ 5 ಲಕ್ಷ ರೂಪಾಯಿಗಳ ಅನುದಾನವನ್ನು ಘೋಷಿಸಿದರು.
ಮುಂದುವರೆದು ಮಾತನಾಡಿ ಗ್ರಾಮೀಣ ಭಾಗದ ಜನತೆ ಹೈನುಗಾರಿಕೆಗೆ ಪ್ರಥಮ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸದೃಢರಾಗಿ ಉತ್ತಮ ಜೀವನ ಕಂಡುಕೊಳ್ಳಬೇಕು ಎಂದು ಕರೆ ನೀಡಿದ ಅವರು, ಇಲ್ಲಿನ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಾಗೂ ಸಚಿವಾಲಯದಿಂದ ಯಾವುದೇ ರೀತಿಯ ಸಹಕಾರ ಕೊಡಿಸಲು ಸಿದ್ಧವಿರುವುದಾಗಿ ಭರವಸೆ ನೀಡಿದರು.

ಇದೇ ವೇಳೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಬೆಲೆಯ ಆಮಿಷಕ್ಕೆ ಒಳಗಾಗಿ ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡದಂತೆ ಮನವಿ ಮಾಡಿದರು.
ಕುಶಾಲನಗರ ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ವಿ. ಪಿ. ಶಶಿಧರ್ ಅವರು ಮಾತನಾಡಿ, ಸಮಾಜದಲ್ಲಿ ಕೇವಲ ಭೌತಿಕ ಅಭಿವೃದ್ಧಿಯಷ್ಟೇ ಸಾಲದು, ಬದಲಿಗೆ ಎಲ್ಲರನ್ನೂ ಒಗ್ಗೂಡಿಸುವ ಒಂದು ಭಾವನಾತ್ಮಕ ಸಮಾಜ ನಿರ್ಮಾಣವಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು. ನಮ್ಮ ಹಿರಿಯರು ಬೆಳೆಸಿಕೊಂಡು ಬಂದಿರುವ ಸಹಕಾರಿ ಪರಂಪರೆಯನ್ನು ಪ್ರತಿಯೊಬ್ಬರೂ ಉಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದ ಅವರು, ಗ್ರಾಮೀಣ ಭಾಗದ ಜೀವನಾಡಿಯಾಗಿರುವ ಗೋಧೂಳಿ ಸಂಸ್ಕೃತಿ ಹಾಗೂ ರೈತ ಪರಂಪರೆಗಳನ್ನು ಕೇವಲ ನೆನಪುಗಳಾಗಿ ಉಳಿಸದೆ, ಅವುಗಳನ್ನು ಇಂದಿನ ಪೀಳಿಗೆಯೂ ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ರಂಗಸಮುದ್ರ ಸಹಕಾರ ಧವಸ ಭಂಡಾರ ಸಂಘದ ಅಧ್ಯಕ್ಷರಾದ ಎ. ಎಂ. ಲೋಕನಾಥ್ ಅವರು, ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2235ಕ್ಕೂ ಹೆಚ್ಚು ಸದಸ್ಯರು, ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಸುಮಾರು 448 ಸದಸ್ಯರು ಹಾಗೂ ರಂಗಸಮುದ್ರ ಸಹಕಾರ ದವಸ ಭಂಡಾರದಲ್ಲಿ 335ಕ್ಕೂ ಹೆಚ್ಚು ಸದಸ್ಯರು ಸಹಕಾರಿ ತತ್ವದಡಿಯಲ್ಲಿ ಒಂದಾಗಿ ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದು ಸಂಘಗಳ ಬೆಳವಣಿಗೆಯ ವಿವರ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮುರುಳಿ ಮಾದಯ್ಯ ವಹಿಸಿದ್ದರು. ಗುಡ್ಡೆಹೊಸೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ. ಎಂ. ಸಾಗರ್ ಅವರು ಸಂಘಗಳ ಜಾಗದ ದಾಖಲಾತಿಗಳನ್ನು ಸರಿಪಡಿಸಿಕೊಟ್ಟಿದ್ದಕ್ಕಾಗಿ ಸಭೆಯಲ್ಲಿ ಧನ್ಯವಾದ ಸಮರ್ಪಿಸಿದರು.
ಇದೇ ವೇದಿಕೆಯಲ್ಲಿ ಮೂರೂ ಸಹಕಾರ ಸಂಘಗಳ ವತಿಯಿಂದ ಶಾಸಕರಾದ ಡಾ|| ಮಂಥರ್ ಗೌಡ ಹಾಗೂ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ. ಪಿ. ಶಶಿಧರ್ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮೂರೂ ಸಹಕಾರ ಸಂಘಗಳ ಉಪಾಧ್ಯಕ್ಷರುಗಳು, ಸರ್ವ ನಿರ್ದೇಶಕ ಮಂಡಳಿಯ ಸದಸ್ಯರುಗಳು, ನೂರಾರು ಸಹಕಾರಿ ಬಂಧುಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಧವಸ ಭಂಡಾರದ ಕಾರ್ಯದರ್ಶಿ ಶಿವಕುಮಾರ್ ಸರ್ವರನ್ನೂ ಸ್ವಾಗತಿಸಿದರೆ, ಬಿ. ಎಸ್. ಧನಪಾಲ್ ವಂದಿಸಿದರು.




