Google search engine
Home♦️ಇತ್ತೀಚಿನ ಸುದ್ದಿಗಳು.ಕಡಲ ತಡಿಯ ಕಾಯಕ ಯೋಗಿಗೆ ಭಾವಪೂರ್ಣ ನಮನ: 'ಸೇತುವೆ ಮನುಷ್ಯ' ಡಾ. ಗಿರೀಶ್ ಭಾರದ್ವಾಜ್ ಮತ್ತು...

ಕಡಲ ತಡಿಯ ಕಾಯಕ ಯೋಗಿಗೆ ಭಾವಪೂರ್ಣ ನಮನ: ‘ಸೇತುವೆ ಮನುಷ್ಯ’ ಡಾ. ಗಿರೀಶ್ ಭಾರದ್ವಾಜ್ ಮತ್ತು ನಮ್ಮ ನೆನಪುಗಳು

🖍️🖍️​ಗುಡ್ಡೆಮನೆ ವಿಶ್ವಕುಮಾರ್, ಗುಡ್ಡೆಹೊಸೂರು.  ಕುಶಾಲನಗರ 

​ದೇಶಾದ್ಯಂತ ‘ತೂಗು ಸೇತುವೆಗಳ ಸರದಾರ’ ಎಂದೇ ಖ್ಯಾತರಾಗಿದ್ದ, ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರು ಇಂದು ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಕಾವೇರಿ ನಿಸರ್ಗಧಾಮ, ಸುಳ್ಯ, ಶಿವಮೊಗ್ಗ ಸೇರಿದಂತೆ ದೇಶಾದ್ಯಂತ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ‘ಭಾರತದ ಸೇತುವೆ ಮನುಷ್ಯ’ (Bridge Man of India) ಎನಿಸಿಕೊಂಡಿದ್ದ ಈ ಮಹಾ ಚೇತನದೊಂದಿಗೆ ನನಗಿದ್ದ ಒಡನಾಟ ಹಾಗೂ ಕೊಡಗಿನ ಗುಡ್ಡೆ ಹೊಸೂರು ಸೇತುವೆಯ ಹಿಂದಿನ ಹೋರಾಟದ ನೆನಪುಗಳು ಈ ಸಂದರ್ಭದಲ್ಲಿ ನನ್ನ ಕಣ್ಣಮುಂದೆ ಕದಡುತ್ತಿವೆ.

ದಶಕಗಳ ಕನಸು: ಗುಡ್ಡೆ ಹೊಸೂರು ತೂಗು ಸೇತುವೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ‘ಗುಡ್ಡೆ ಹೊಸೂರು ತೆಪ್ಪದ ಕಂಡಿ ತೂಗು ಸೇತುವೆ’ ಇವತ್ತು ಕೇವಲ ಒಂದು ಪ್ರವಾಸಿ ತಾಣವಲ್ಲ; ಅದು ಕೊಡಗು-ಮೈಸೂರು ಜಿಲ್ಲೆಯ ಗಡಿ ಪ್ರದೇಶದ ಹಲವಾರು ಕುಗ್ರಾಮಗಳ ಜನರ ಬದುಕಿನ ಜೀವನಾಡಿ. ಆದರೆ ಈ ಸೇತುವೆ ಅಷ್ಟು ಸುಲಭವಾಗಿ ನಿರ್ಮಾಣವಾಗಲಿಲ್ಲ. ಇದರ ಹಿಂದೆ ದಶಕಗಳ ಕಾಲದ ಹೋರಾಟ ಮತ್ತು ಬೆವರಿನ ಕಥೆಯಿದೆ.

​2011 ಇಸವಿಯ ಆಸುಪಾಸಿನಲ್ಲಿ ಈ ಭಾಗದ ಕೂಲಿ ಕಾರ್ಮಿಕರು, ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಅನುಭವಿಸುತ್ತಿದ್ದ ಕಷ್ಟಗಳನ್ನು ಕಂಡು ನಾವು ಸುಮ್ಮನೆ ಕೂರಲಾಗಲಿಲ್ಲ. ನನ್ನ ಜೊತೆ ಪತ್ರಕರ್ತ ಮಿತ್ರರಾದ ಸುಂಟಿಕೊಪ್ಪದ ವಿನ್ಸೆಂಟ್ ಹಾಗೂ ಇನ್ನುಳಿದ ಅನೇಕ ಗೆಳೆಯರು ಹೆಗಲಿಗೆ ಹೆಗಲು ಕೊಟ್ಟು ನಿಂತರು. ನಾವೆಲ್ಲರೂ ಒಟ್ಟಾಗಿ ಮಡಿಕೇರಿ, ಮಂಗಳೂರು, ಬೆಂಗಳೂರು ಸೇರಿದಂತೆ ಸಂಬಂಧಪಟ್ಟ ಪ್ರತಿಯೊಂದು ಸರ್ಕಾರಿ ಕಚೇರಿಗಳ ಮೆಟ್ಟಿಲುಗಳನ್ನು ಹತ್ತಿ ಇಳಿದಿದ್ದೆವು. ಅಧಿಕಾರಿಗಳ ಉದಾಸೀನತೆ, ಫೈಲುಗಳ ವಿಳಂಬ ನೀತಿಯ ನಡುವೆಯೂ ನಮ್ಮ ಪ್ರಯತ್ನವನ್ನು ನಾವು ಕೈಬಿಡಲಿಲ್ಲ.

ಶ್ರಮಕ್ಕೆ ಸಿಕ್ಕ ಪ್ರತಿಫಲ. ನಮ್ಮ ಸತತ ಹೋರಾಟಕ್ಕೆ ಅಂತಿಮವಾಗಿ 2012 ರಲ್ಲಿ ಜಯ ಸಿಕ್ಕಿತು. ಅಂದಿನ ಮುಖ್ಯಮಂತ್ರಿಗಳು ಹಾಗೂ ನನ್ನ ಬಾವನವರಾದ ಡಿ.ವಿ. ಸದಾನಂದಗೌಡರು ಮತ್ತು ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರ ವಿಶೇಷ ಒತ್ತಾಸೆ ಹಾಗೂ ಕಾಳಜಿಯ ಫಲವಾಗಿ ಈ ಸೇತುವೆ ನಿರ್ಮಾಣ ಕಾರ್ಯಕ್ಕೆ ಸರ್ಕಾರದಿಂದ ಅಧಿಕೃತ ಅನುಮೋದನೆ ದೊರೆಯಿತು.

​ಈ ಸೇತುವೆಯ ವಿನ್ಯಾಸ ಮತ್ತು ನಿರ್ಮಾಣದ ಹೊಣೆಯನ್ನು ಹೊತ್ತವರು ನಮ್ಮ ದೀರ್ಘಕಾಲದ ಒಡನಾಡಿಯಾಗಿದ್ದ ಡಾ. ಗಿರೀಶ್ ಭಾರದ್ವಾಜ್. ಅವರು ತಮ್ಮ ಅದ್ಭುತ ಇಂಜಿನಿಯರಿಂಗ್ ಕೌಶಲ್ಯದಿಂದ ಕರ್ನಾಟಕದಲ್ಲೇ ಪ್ರಥಮ ಬಾರಿಗೆ ದ್ವಿಚಕ್ರ ವಾಹನಗಳು ಚಲಿಸಬಹುದಾದ ವಿಶಿಷ್ಟವಾದ ತೂಗು ಸೇತುವೆಯನ್ನು ಇಲ್ಲಿ ನಿರ್ಮಿಸಿಕೊಟ್ಟರು. 

‘ಸುಳ್ಯದ ವಿಶ್ವೇಶ್ವರಯ್ಯ’ನ ಕಾಯಕ ಪಥ

​1989ರಲ್ಲಿ ಸುಳ್ಯ ತಾಲೂಕಿನ ಅರಂಬೂರಿನ ಪಯಸ್ವಿನಿ ನದಿಗೆ ಪರಿಸರ ಸ್ನೇಹಿ ತೂಗುಸೇತುವೆಯನ್ನು ನಿರ್ಮಿಸುವ ಮೂಲಕ ಗಿರೀಶ್ ಭಾರದ್ವಾಜ್ ಅವರ ಈ ವಿಶಿಷ್ಟ ಸೇವೆ ಆರಂಭವಾಯಿತು. ರಸ್ತೆ ಸಂಪರ್ಕವಿಲ್ಲದೆ, ಮಳೆಗಾಲದಲ್ಲಿ ಹಳ್ಳ-ಕೊಳ್ಳಗಳನ್ನು ದಾಟಲಾಗದೆ ಕಷ್ಟಪಡುತ್ತಿದ್ದ ಹಳ್ಳಿಗಳ ಜನರ ಪಾಲಿಗೆ ಇವರು ಸಾಕ್ಷಾತ್ ಭಗವಂತನಂತೆ ಕಾಣುತ್ತಿದ್ದರು. ಅತ್ಯಂತ ಕಡಿಮೆ ವೆಚ್ಚದಲ್ಲಿ, ಪರಿಸರಕ್ಕೆ ಪೂರಕವಾಗಿ ನೂರಾರು ಸೇತುವೆಗಳನ್ನು ಕಟ್ಟಿ ಇಡೀ ದೇಶದ ಗಮನ ಸೆಳೆದ ಇವರಿಗೆ ಸಮಾಜ *“ಸೇತು ಬಂಧು”, “ಸುಳ್ಯದ ವಿಶ್ವೇಶ್ವರಯ್ಯ” ಎಂಬ ಬಿರುದುಗಳನ್ನು ನೀಡಿ ಗೌರವಿಸಿದೆ.

 ಭಾರತ ಸರ್ಕಾರ ಇವರ ನಿಸ್ವಾರ್ಥ ಸೇವೆಗೆ ದೇಶದ ಅತ್ಯುನ್ನತ  ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿತ್ತು.

ತುಂಬಲಾರದ ನಷ್ಟ ನನ್ನ ಆತ್ಮೀಯ ಮಿತ್ರ ಹಾಗೂ ಅದ್ಭುತ ಸಾಧಕರಾದ ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆ ದೇಶಕ್ಕೆ ಮತ್ತು ವೈಯಕ್ತಿಕವಾಗಿಯೂ ತುಂಬಲಾರದ ನಷ್ಟ ತಂದಿದೆ. ಅವರು ನಿರ್ಮಿಸಿದ ಪ್ರತಿಯೊಂದು ಸೇತುವೆಯೂ ಅವರ ಹೆಸರನ್ನು ಕಾಲಕಾಲಕ್ಕೂ ಅಜರಾಮರವಾಗಿಸಿಡಲಿವೆ.

​ಅವರ ಪವಿತ್ರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ, ಹಾಗೆಯೇ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಹಾಗೂ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

error: Content is protected !!