
ಕುಶಾಲನಗರ, ಅ.24: ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾ ಮೌಲ್ಯಮಾಪನ ವಿಭಾಗಕ್ಕೆ ಹೊಸ ಸಾರಥಿ ಬಂದಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಭಾರತಿ ಹಿರೇಮಠ ಅವರನ್ನು ಕುಲಸಚಿವರು (ಮೌಲ್ಯಮಾಪನ) ಹುದ್ದೆಗೆ ನೇಮಿಸಿ ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮ, 2000ರ 18ನೇ ಪ್ರಕರಣದ (1)ನೇ ಉಪ ಪ್ರಕರಣದ ಅಡಿ ಇರುವ ಅಧಿಕಾರ ಬಳಸಿ ಈ ನೇಮಕ ಮಾಡಲಾಗಿದೆ. ಆದೇಶ ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಇವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಪ್ರೊ. ಭಾರತಿ ಅವರು ಮಹಾರಾಜ ಕಾಲೇಜಿನ ಅಂತರಾಷ್ಟ್ರೀಯ ಸಂಬಂಧಗಳ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರೂ ಆಗಿದ್ದಾರೆ. ಇದುವರೆಗೆ ಈ ಹುದ್ದೆ ನಿರ್ವಹಿಸುತ್ತಿದ್ದ ಡಾ. ಎಂ. ಸುರೇಶ್ ಅವರನ್ನು ಮಾತೃ ಸಂಸ್ಥೆಯಾದ ಮೈಸೂರು ವಿಶ್ವವಿದ್ಯಾಲಯದ ಯುವರಾಜ ಕಾಲೇಜಿನ ಅರ್ಥಶಾಸ್ತ್ರ ವಿಭಾಗಕ್ಕೆ ಹಿಂದಿರುಗಿಸಲಾಗಿದೆ. ಕೂಡಲೇ ಅಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಅವರಿಗೆ ಸೂಚಿಸಲಾಗಿದೆ. ಹೊಸ ಕುಲಸಚಿವರ ನೇಮಕಾತಿಗೆ ಸಂಬಂಧಿಸಿದ ಸೇವಾ ಷರತ್ತು ಮತ್ತು ನಿಬಂಧನೆಗಳನ್ನು ಬಳಿಕ ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾಮೆಂಟ್ಗಳು (0)