ಕುಶಾಲನಗರ: ಕನ್ನಡ ರಾಜ್ಯೋತ್ಸವ ಬಂತೆಂದರೆ ನಾಡಿನ ಬೀದಿ ಬೀದಿಗಳಲ್ಲಿ ಹಳದಿ-ಕೆಂಪು ಬಾವುಟಗಳು ಹಾರಾಡುವುದು ಸಾಮಾನ್ಯ. ಆದರೆ ಯಾವುದೇ ಸಂಘ-ಸಂಸ್ಥೆಗಳ ಬೆಂಬಲವಿಲ್ಲದೆ, ತನ್ನ ದುಡಿಮೆಯ ಆಟೋವನ್ನೇ ಕನ್ನಡಾಂಬೆಯ ಅಲಂಕಾರದ ವೇದಿಕೆಯಾಗಿಸಿ ಅಭಿಮಾನ ಮೆರೆದಿದ್ದಾರೆ ಕುಶಾಲನಗರದ ಆಟೋ ಚಾಲಕರಾದ ಡಿ. ಎಸ್. ರಮೇಶ್. ಕುಶಾಲನಗರದ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಈ ಆಟೋ ನೋಡುಗರ ಕಣ್ಣು ಸೆಳೆಯುವಂತಿತ್ತು. ಆಟೋದ ಮುಂಭಾಗದ ಗಾಜಿನ ತುಂಬಾ ಹಳದಿ ಮತ್ತು ಕೆಂಪು ಬಣ್ಣದ ದಾರಗಳನ್ನು ಅಂಟಿಸಿ, ಕನ್ನಡದ ಬಾವುಟದ ರೂಪ ನೀಡಲಾಗಿತ್ತು. ಮೇಲ್ಭಾಗದಲ್ಲಿ ಹಳದಿ, ಕೆಳಭಾಗದಲ್ಲಿ ಕೆಂಪು ಬಣ್ಣದ ಈ ಸಿಂಗಾರದ ನಡುವೆ ಚಾಲಕರಿಗೆ ಆಟೋ ಚಲಾಯಿಸುವಾಗ ರಸ್ತೆ ಕಾಣುವಂತೆ ಕರ್ನಾಟಕ ರಾಜ್ಯ ನಕ್ಷೆಯ ಹೋಲುವ ಮಾದರಿ ಜಾಗ ಬಿಟ್ಟಿರುವುದು ವಿಶೇಷವಾಗಿತ್ತು. ಆಟೋದ ಎರಡೂ ಬದಿಗಳಲ್ಲಿ ಎತ್ತರದ ಕನ್ನಡ ಧ್ವಜಗಳನ್ನು ಕಟ್ಟಲಾಗಿದ್ದು, ಗಾಳಿಗೆ ಪಟಪಟಿಸುತ್ತಾ ರಾಜ್ಯೋತ್ಸವದ ಸಂಭ್ರಮವನ್ನು ಸಾರುತ್ತಿದ್ದವು. ಆಟೋದ ಛಾವಣಿಯ ಮೇಲೆ ಅಳವಡಿಸಿರುವ "ಜೈ ಭುವನೇಶ್ವರಿ" ಎಂಬ ಫಲಕ ನಾಡದೇವಿಯ ಬಗೆಗಿನ ಭಕ್ತಿ ಮತ್ತು ಅಭಿಮಾನವನ್ನು ಒಟ್ಟಿಗೆ ಬಿಂಬಿಸಿತ್ತು.ಮುಂಭಾಗದ ಬಂಪರ್ ಮತ್ತು ಹೆಡ್‌ಲೈಟ್ ಬಳಿ ಹಳದಿ-ಕೆಂಪು ದಾರದ ಗೊಂಡೆಗಳನ್ನು ಇಳಿಬಿಟ್ಟು, ಆಟೋದ ಪ್ರತಿ ಭಾಗವನ್ನೂ ಕನ್ನಡಮಯವಾಗಿಸಲಾಗಿತ್ತು. ಆಟೋ ಮಾತ್ರವಲ್ಲ, ಚಾಲಕರ ವೇಷಭೂಷಣದಲ್ಲೂ ಕನ್ನಡದ ಛಾಯೆ ಎದ್ದು ಕಾಣುತ್ತಿತ್ತು. ನೀಲಿ ಬಣ್ಣದ ಕುರ್ತಾ ಧರಿಸಿ, ಹಣೆಗೆ ಕುಂಕುಮವಿಟ್ಟು, ಕುತ್ತಿಗೆಗೆ ಹಳದಿ-ಕೆಂಪು ಶಾಲು ಹಾಕಿಕೊಂಡು ನಗುಮುಖದಿಂದ ತಮ್ಮ ಆಟೋದ ಜೊತೆಗೆ ತಾವೂ ರಾಜ್ಯೋತ್ಸವದ ಭಾಗವಾಗಿ ನಿಂತಿದ್ದ ಅವರು ನಗುಮುಖದಿಂದಲೇ ಫೋಟೋಗೆ ಪೋಸ್ ನೀಡಿದರು. ಆಟೋ ಚಾಲಕರು ದಿನವಿಡೀ ರಸ್ತೆಯಲ್ಲಿ ದುಡಿಯುವವರು. ಬೆಳಗಿನಿಂದ ಸಂಜೆಯವರೆಗೆ ನೂರಾರು ಪ್ರಯಾಣಿಕರನ್ನು ಭೇಟಿಯಾಗುವ ಇವರ ವಾಹನವೇ ಒಂದು ರೀತಿಯಲ್ಲಿ ಚಲಿಸುವ ಪ್ರಚಾರ ಫಲಕ. ಇಂತಹ ವಾಹನದ ಮೂಲಕ ಕನ್ನಡದ ಅಸ್ಮಿತೆಯನ್ನು ಸಾರುವುದು ಸಣ್ಣ ಕೆಲಸವಲ್ಲ. ಇದಕ್ಕಾಗಿ ತಗಲುವ ಸಮಯ, ಶ್ರಮ ಮತ್ತು ಖರ್ಚನ್ನು ಭರಿಸಿ ಅಭಿಮಾನ ತೋರುವುದು ನಿಜವಾದ ಭಾಷಾ ಪ್ರೇಮವೆ ಸರಿ. ಕನ್ನಡ ಭಾಷೆ, ನೆಲ, ಜಲದ ಬಗೆಗಿನ ಪ್ರೀತಿ ಕೇವಲ ವೇದಿಕೆಗಳ ಭಾಷಣಕ್ಕೆ ಸೀಮಿತವಾಗದೆ, ದುಡಿಯುವ ವರ್ಗದ ದೈನಂದಿನ ಬದುಕಿನಲ್ಲೂ ಹಾಸುಹೊಕ್ಕಾಗಿದೆ ಎಂಬುದಕ್ಕೆ ಈ ಚಾಲಕರ ಅಭಿಮಾನ ಸಾಕ್ಷಿಯಾಗಿದೆ. ಕೊಡಗಿನಂತಹ ಬಹುಭಾಷಾ ಸಂಸ್ಕೃತಿಯ ನಾಡಿನಲ್ಲಿ ಕನ್ನಡದ ಬಾವುಟ ಹೆಮ್ಮೆಯಿಂದ ಹಾರಾಡುತ್ತಿರುವುದು ಕನ್ನಡಿಗರಲ್ಲಿ ಸಂತಸ ಮೂಡಿಸಿದೆ. ರಾಜ್ಯೋತ್ಸವ ಕೇವಲ ಒಂದು ದಿನದ ಆಚರಣೆಯಲ್ಲ, ಕನ್ನಡವನ್ನು ಬದುಕಿನಲ್ಲಿ ಬಳಸಿ, ಬೆಳೆಸುವ ನಿರಂತರ ಪ್ರತಿಜ್ಞೆ ಎಂಬ ಸಂದೇಶವನ್ನು ಈ ಆಟೋ ಚಾಲಕರು ತಮ್ಮ ಸಿಂಗಾರದ ಮೂಲಕ ನೀಡಿದ್ದಾರೆ. ಇಂತಹ ಅಭಿಮಾನಿಗಳೇ ಕನ್ನಡದ ನಿಜವಾದ ರಾಯಭಾರಿಗಳು ... ನಿಮಗೂ ಹಾಗೂ ನಿಮ್ಮಂತಹ ಸಾವಿರಾರು ಆಟೋ ಚಾಲಕರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು 🙏


ಕಾಮೆಂಟ್‌ಗಳು (0)