ಮಡಿಕೇರಿ, ಅ.30: ಕೊಡಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದ ಎಎಲ್ಜಿ ಕ್ರೆಸೆಂಟ್ ಶಾಲೆಯಲ್ಲಿ ಶುಕ್ರವಾರ ‘ಸುರಕ್ಷಿತ ಬಾಲ್ಯ – ಬಾಲ್ಯ ಬಚಾವೋ’ (Surakshit Bachpan – Bachpan Bachao) ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪೋಕ್ಸೋ (POCSO) ಕಾಯ್ದೆಯ ಉದ್ದೇಶ, ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಅಪರಾಧಗಳ ಸ್ವರೂಪ, ಅವುಗಳಿಗೆ ವಿಧಿಸಲಾಗುವ ಕಾನೂನು ಶಿಕ್ಷೆಗಳು ಹಾಗೂ ಮಕ್ಕಳ ಹಕ್ಕುಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು. ಇದಲ್ಲದೆ, ಡಿಜಿಟಲ್ ಯುಗದಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುವ ವಿಧಾನ, ಆನ್ಲೈನ್ ವಂಚನೆ, ಸೈಬರ್ ಅಪರಾಧಗಳು ಹಾಗೂ ಅಪರಿಚಿತರೊಂದಿಗೆ ವ್ಯವಹರಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಮಕ್ಕಳು ಯಾವುದೇ ರೀತಿಯ ದೌರ್ಜನ್ಯ ಅಥವಾ ಶೋಷಣೆಗೆ ಒಳಗಾದ ಸಂದರ್ಭದಲ್ಲಿ ಭಯಪಡದೆ, ಪೋಷಕರು, ಶಿಕ್ಷಕರು ಅಥವಾ ಸಂಬಂಧಪಟ್ಟ ಕಾನೂನು ಅಧಿಕಾರಿಗಳ ಗಮನಕ್ಕೆ ತರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಸುರಕ್ಷತೆ ಮತ್ತು ಹಕ್ಕುಗಳ ಬಗ್ಗೆ ಜಾಗೃತರಾಗಿರಬೇಕು ಎಂಬ ಅನೇಕ ವಿಚಾರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭಂ, ವಕೀಲರಾದ ಪ್ರತಾಪ್ ಮತ್ತು ಕುಮುದಾ, ಪ್ರಾಧಿಕಾರದ ಪ್ಯಾರಾ ಲೀಗಲ್ ಸ್ವಯಂಸೇವಕರಾದ ಜಾಯ್ಸ್ ಮೆನೇಜಸ್ ಮತ್ತು ವಿಜಯ, ಆಡಳಿತಾಧಿಕಾರಿ ಜಯಪ್ಪ ಸೇರಿದಂತೆ ಶಾಲೆಯ ಪ್ರಾಂಶುಪಾಲರಾದ ಜಾಯ್ಸಿ ವಿನಯ ಹಾಗೂ ಉಪ ಪ್ರಾಂಶುಪಾಲರಾದ ಸುಲ್ಹತ್ ಅವರುಗಳು ಪಾಲ್ಗೊಂಡಿದ್ದರು.




ಕಾಮೆಂಟ್ಗಳು (0)