Join WhatsApp Group

ಕೊಡಗು ವರದಿ

KODAGU VARADI • ವಿಶ್ವಾಸಾರ್ಹ ಕನ್ನಡ ಡಿಜಿಟಲ್ ಸುದ್ದಿ ಮಾಧ್ಯಮ
ಮುಖ್ಯಾಂಶಗಳು:
ಮುಖಪುಟ › ರಾಜ್ಯ

ಆಸ್ಪತ್ರೆ ಬಿಲ್‌ನಲ್ಲಿ ಔಷಧ ಖರೀದಿ ದರ ಪ್ರಕಟಣೆ: ಸುತ್ತೋಲೆ ಜಾರಿಗೆ ಒತ್ತಾಯಿಸುವುದಿಲ್ಲ ಎಂದ ಸರ್ಕಾರ

by Kodagu Varadi•ಅಕ್ಟೋಬರ್ 30, 2026BREAKING
ಆಸ್ಪತ್ರೆ ಬಿಲ್‌ನಲ್ಲಿ ಔಷಧ ಖರೀದಿ ದರ ಪ್ರಕಟಣೆ: ಸುತ್ತೋಲೆ ಜಾರಿಗೆ ಒತ್ತಾಯಿಸುವುದಿಲ್ಲ ಎಂದ ಸರ್ಕಾರ

ಬೆಂಗಳೂರು, ಅ.30: ಔಷಧಗಳು, ವೈದ್ಯಕೀಯ ಉಪಕರಣಗಳು ಹಾಗೂ ಬಳಕೆಯ ವಸ್ತುಗಳ ಮೂಲ ದರವನ್ನು ಬಹಿರಂಗವಾಗಿ ಪ್ರಕಟಿಸುವಂತೆ ಆಸ್ಪತ್ರೆಗಳಿಗೆ ಸೂಚಿಸಿ ಹೊರಡಿಸಿರುವ ಸುತ್ತೋಲೆಯನ್ನು ಕಡ್ಡಾಯವಾಗಿ ಜಾರಿಗೊಳಿಸುವಂತೆ ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಪ್ರೈವೇಟ್ ಹಾಸ್ಪಿಟಲ್ಸ್ ಅಂಡ್ ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್, ಡಾ. ಶೋಭಾ ಪ್ರಕಾಶ್ ಹಾಗೂ ಪ್ರಿಸ್ಟೈನ್ ಹಾಸ್ಪಿಟಲ್ಸ್ ಅಂಡ್ ರಿಸರ್ಚ್ ಸೆಂಟರ್ ಪ್ರೈವೇಟ್ ಲಿಮಿಟೆಡ್‌ನ ವೈದ್ಯ ಡಾ. ಹಾಲಗೆರೆ ಮಲ್ಲಿಕಾರ್ಜುನ ಪ್ರಸನ್ನ ಸಲ್ಲಿಸಿದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರ ಏಕಸದಸ್ಯ ಪೀಠ ನಡೆಸಿತು. ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿ.ವಿ. ಭಾನುಪ್ರಕಾಶ್ ಅವರು, ಸುತ್ತೋಲೆಯನ್ನು ಅಕ್ಟೋಬರ್ 1ರಂದು ಹೊರಡಿಸಲಾಗಿದ್ದು, ಅರ್ಜಿದಾರರು ತಡವಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದರು. ಸುತ್ತೋಲೆಯಲ್ಲಿ ಉಲ್ಲೇಖಿಸಿದ ಕಾನೂನು ನಿಬಂಧನೆಗಳಿಗೆ ಅರ್ಜಿದಾರರು ಆಕ್ಷೇಪಿಸಿರುವುದರಿಂದ, ಕಾಲಾವಕಾಶ ನೀಡಿದರೆ ಸರ್ಕಾರ ಅದನ್ನು ಹಿಂಪಡೆದು ಹೊಸ ಸುತ್ತೋಲೆ ಹೊರಡಿಸುವ ಸಾಧ್ಯತೆಯಿದೆ ಎಂದು ತಿಳಿಸಿದರು. ಅರ್ಜಿದಾರರ ವಿರುದ್ಧ ಯಾವುದೇ ಆತುರದ ಕ್ರಮ ಕೈಗೊಳ್ಳುವುದಿಲ್ಲ ಎಂದೂ ಭರವಸೆ ನೀಡಿದರು. ಸರ್ಕಾರದ ಹೇಳಿಕೆಯನ್ನು ದಾಖಲಿಸಿಕೊಂಡ ಪೀಠ, ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು. ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣಾ ಇಲಾಖೆ ಅಕ್ಟೋಬರ್ 1ರಂದು ಹೊರಡಿಸಿದ ಸುತ್ತೋಲೆಯಂತೆ, ನವೆಂಬರ್ 1ರಿಂದ ರೋಗಿಗಳ ಪ್ರತಿ ಬಿಲ್‌ನಲ್ಲಿ ಔಷಧಗಳ ಖರೀದಿ ಬೆಲೆ ನಮೂದಿಸುವುದು ಕಡ್ಡಾಯವಾಗಿತ್ತು. ಇಂಥ ಆದೇಶ ಹೊರಡಿಸಲು ಇಲಾಖೆಗೆ ಶಾಸನಬದ್ಧ ಅಧಿಕಾರವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಸುತ್ತೋಲೆಗೆ ಮೂಲವಾಗಿ ಉಲ್ಲೇಖಿಸಿರುವ ಕೇಂದ್ರದ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಕಾಯಿದೆ-2010ನ್ನು ಸಂವಿಧಾನದ ವಿಧಿ 252(1)ರಡಿ ರಾಜ್ಯ ಅಳವಡಿಸಿಕೊಂಡಿಲ್ಲ; ರಾಜ್ಯದಲ್ಲಿ ಜಾರಿಯಲ್ಲಿರುವ ಕೆಪಿಎಂಇ ಕಾಯಿದೆಯಲ್ಲಿ ಖರೀದಿ ದರ ಪ್ರಕಟಣೆಗೆ ಯಾವುದೇ ನಿಯಮವಿಲ್ಲ ಎಂದು ಅವರು ಹೇಳಿದ್ದಾರೆ. ಔಷಧಗಳ ಮೂಲ ಬೆಲೆ ಜಿಎಸ್‌ಟಿ, ರಿಯಾಯಿತಿ, ಬ್ಯಾಚ್‌ಗಳು ಮತ್ತು ವಿನಾಯಿತಿಗಳ ಆಧಾರದಲ್ಲಿ ಬದಲಾಗುತ್ತದೆ. ಸರಾಸರಿ ಲೆಕ್ಕಾಚಾರಕ್ಕೆ ಸೂಕ್ತ ಮಾನದಂಡವನ್ನು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿಲ್ಲದ ಕಾರಣ ಆಸ್ಪತ್ರೆಗಳ ಆಡಳಿತ ಮತ್ತು ತಂತ್ರಾಂಶ ವ್ಯವಸ್ಥೆಯಲ್ಲಿ ಗೊಂದಲ ಉಂಟಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸರಬರಾಜುದಾರರೊಂದಿಗೆ ಮಾಡಿಕೊಂಡ ಗೌಪ್ಯ ವಾಣಿಜ್ಯ ಒಪ್ಪಂದದ ದರಗಳನ್ನು ಬಿಲ್‌ನಲ್ಲಿ ಪ್ರಕಟಿಸುವುದು ವಿಧಿ 19(1)(ಜಿ) ಅಡಿಯ ವ್ಯಾಪಾರ ಹಕ್ಕಿಗೆ ಧಕ್ಕೆ ಎಂಬುದು ಅವರ ವಾದ. ವಿದ್ಯುತ್, ಸಾರಿಗೆ, ಟೆಲಿಕಾಂ ಮುಂತಾದ ಸಾರ್ವಜನಿಕ ಸೇವೆಗಳಲ್ಲಿ ಪೂರೈಕೆದಾರರ ಖರೀದಿ ವೆಚ್ಚವನ್ನು ಬಿಲ್‌ನಲ್ಲಿ ತೋರಿಸುವ ನಿಯಮವಿಲ್ಲ. ವೈದ್ಯಕೀಯ ವಲಯವನ್ನು ಮಾತ್ರ ಪ್ರತ್ಯೇಕಿಸಿ ಕಠಿಣ ನಿಯಮ ವಿಧಿಸಿರುವುದು ವಿಧಿ 14ರ (ಸಮಾನತೆಯ ಹಕ್ಕು) ಉಲ್ಲಂಘನೆ ಎಂದೂ ಅರ್ಜಿದಾರರು ಹೇಳಿದ್ದಾರೆ. ನವೆಂಬರ್ 1ರಿಂದ ಆದೇಶ ಜಾರಿಗೆ ಬರಲಿರುವುದರಿಂದ, ಅದಕ್ಕೂ ಮುನ್ನ ವಿಚಾರಣೆ ನಡೆಸಿ ಸುತ್ತೋಲೆಯನ್ನು ರದ್ದುಗೊಳಿಸಬೇಕು ಹಾಗೂ ಅಂತಿಮ ತೀರ್ಪು ಬರುವವರೆಗೆ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಅರ್ಜಿದಾರರು ಪೀಠಕ್ಕೆ ಕೋರಿದ್ದಾರೆ.

ಕಾಮೆಂಟ್‌ಗಳು (0)

ನಿಮ್ಮ ಅನಿಸಿಕೆ ತಿಳಿಸಿ (Leave a Comment)

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ. ಮೊದಲಿಗರಾಗಿ ನಿಮ್ಮ ಅಭಿಪ್ರಾಯ ತಿಳಿಸಿ!