ಮಡಿಕೇರಿ, ಅ.31: ನೂರಾರು ವರ್ಷಗಳಿಂದ ಜನ ಬದುಕು ಕಟ್ಟಿಕೊಂಡು ಬಂದ ಊರದು. ಮಡದಿ ಮಕ್ಕಳ ನಗು, ಸ್ನೇಹಿತರೊಂದಿಗೆ ಕಳೆದ ಬಾಲ್ಯದ ಸವಿನೆನಪುಗಳು ಎಲ್ಲವೂ ಅದೇ ಮಣ್ಣಿನಲ್ಲಿದ್ದವು. ಆದರೆ ಧರಣಿ ಮುನಿದ ಆ ಕ್ಷಣ ಮನೆ, ಮಠ, ಸಂಸಾರ ಎಲ್ಲವನ್ನೂ ತನ್ನೊಡಲಿಗೆ ಸೆಳೆದುಕೊಂಡುಬಿಟ್ಟಿತು. ಉಳಿದದ್ದು ಸ್ಮಶಾನ ಮೌನ ಹೊತ್ತ ಬೆಟ್ಟಗುಡ್ಡಗಳ ಸಾಲು ಮಾತ್ರ. ದುರಂತದಲ್ಲಿ ಸತ್ತವರಿಗಿಂತ, ಪ್ರೀತಿಪಾತ್ರರನ್ನು ಕಳೆದುಕೊಂಡು ಬದುಕುಳಿದವರ ನೋವು ದೊಡ್ಡದು ಎಂಬ ಕಟುಸತ್ಯವನ್ನು ಹೇಳುವ ಚಿತ್ರವೇ ‘ಮುತ್ತುನಾಡ್ (Life After Disaster)’. ಉದಿಯಣ ಅನಿಲ್ ಉಲ್ಲಾಸ್ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರದ ಪ್ರೀಮಿಯರ್ ಶೋ ಶುಕ್ರವಾರ ಮಡಿಕೇರಿಯ ಗಾಂಧಿ ಭವನದಲ್ಲಿ ನಡೆಯಿತು. ಇದು ಪ್ರಕೃತಿ ವಿಕೋಪದ ಕುರಿತಾದ ಚಿತ್ರವಾದರೂ, ನಿಜವಾದ ಕಥೆ ವಿಕೋಪದ ನಂತರದ ಬದುಕಿನದು. ಎಲ್ಲವನ್ನೂ ಕಳೆದುಕೊಂಡ ಮೇಲೂ ಉಸಿರಾಡಬೇಕಾದ ಅನಾಥತೆಯೇ ಚಿತ್ರದ ಕೇಂದ್ರಬಿಂದು. ನಾಯಕನ ಪಾತ್ರದಲ್ಲಿ ಅಲ್ಲಾರಂಡ ವಿಠ್ಠಲ್ ನಂಜಪ್ಪ ಅಭಿನಯಿಸಿದ್ದಾರೆ. ಅವರ ಬದುಕೀಗ ಪುನರ್ವಸತಿ ಕೇಂದ್ರದ ನಾಲ್ಕು ಗೋಡೆಗಳ ನಡುವೆ. ಆದರೆ ಮನಸ್ಸು ಅಲ್ಲಿಲ್ಲ. ಮಡದಿಯ ಮುಖ, ಮಕ್ಕಳ ಧ್ವನಿ, ಸ್ನೇಹಿತರ ಜೊತೆಗಿನ ಕ್ಷಣಗಳು ಮಾಸದೆ ಬೆನ್ನುಬಿಡದೆ ಕಾಡುತ್ತವೆ. ಆ ನೆನಪುಗಳೇ ಅವರನ್ನು ಮತ್ತೆ ಮತ್ತೆ ತನ್ನೂರಿಗೆ ಕರೆಯುತ್ತವೆ. ನೆಚ್ಚಿನವರೆಲ್ಲ ನಾಮಾವಶೇಷವಾದ ಆ ನೆಲಕ್ಕೆ ಅವರು ನಿಯಮಿತವಾಗಿ, ಏಕಾಂಗಿಯಾಗಿ ಹೋಗುತ್ತಾರೆ. ಕಳೆದುಕೊಂಡದ್ದನ್ನು ಹುಡುಕುವಂತೆ, ಅಥವಾ ಬಿಟ್ಟುಹೋದವರಿಗೆ ‘ನಾನಿನ್ನೂ ಇಲ್ಲಿದ್ದೇನೆ’ ಎಂದು ಹೇಳುವಂತೆ ಹೋಗಿ ನಿಲ್ಲುತ್ತಾರೆ. ಹಾಗೆ ಐನ್ಮನೆಯ ಭಾವನಾತ್ಮಕ ದೃಶ್ಯಗಳು ಪ್ರೇಕ್ಷಕರ ಕಣ್ಣುಗಳನ್ನು ತೇವಗೊಳಿಸುತ್ತವೆ. ಚಿತ್ರದಲ್ಲಿ ಸಂಭಾಷಣೆ ವಿರಳ, ಅಲ್ಲೊಂದು ಇಲ್ಲೊಂದು ಅಷ್ಟೇ. ಆದರೆ ಇದು ಕೊರತೆಯಲ್ಲ, ಚಿತ್ರದ ಆತ್ಮ. ಕೆಲವು ನೋವುಗಳಿಗೆ ಮಾತು ಸಾಲದು. ಅಂಥ ನೋವನ್ನು ಕಣ್ಣುಗಳ ತೇವ, ಹೆಜ್ಜೆಗಳ ಭಾರ ಮತ್ತು ಮೌನದ ಆಳ ಹೇಳುತ್ತವೆ. ಪ್ರೇಕ್ಷಕನ ಗಂಟಲು ಬಿಗಿಯುವುದು ಮಾತಿನಿಂದಲ್ಲ, ಆ ಮೌನದಿಂದಲೇ. ಕಡ್ಯಮಾಡ ಸುಮನ್ ಬೆಳ್ಯಪ್ಪ, ಮಿಟ್ಟು ರಂಜಿತ್ ಭಾಗಮಂಡಲ, ದುಗ್ಗಾನಂದ ಹೃತ್ವಿಕ್ ಕಾರ್ಯಪ್ಪ, ನಿಖಿಲ್ ತಾರಾಗಣದಲ್ಲಿದ್ದಾರೆ. ಛಾಯಾಗ್ರಹಣ ಅಲ್ಲಾರಂಡ ಮುಕುಲ್ ನಂಜಪ್ಪ, ಸಂಕಲನ ವೈಶಾಖ್ ಪೆರುಮ, ಸಂಗೀತ ಅಲೆಕ್ಸ್ ಹುಣಸೂರು ಅವರದು. ಚಿತ್ರವು ಚಿಕಾಗೋ ಸ್ಕ್ರಿಪ್ಟ್ ಅವಾರ್ಡ್ಸ್ 2026ರಲ್ಲಿ ‘ಅತ್ಯುತ್ತಮ ಮೂಲ ಚಿತ್ರಕಥೆ’ ಪ್ರಶಸ್ತಿ ಪಡೆದಿದ್ದು, ಅಲ್ಮಾಮೌರಾ ಫಿಲ್ಮ್ ಫೆಸ್ಟಿವಲ್ 2026 ಮತ್ತು ಮಾರ್ಫೆ ಫಿಲ್ಮ್ ಫೆಸ್ಟಿವಲ್ 2027ಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಚಿತ್ರವು ಸೀಮಿತ ಚೌಕಟ್ಟಿನಲ್ಲಿ, ಕಲಾತ್ಮಕವಾಗಿ ಮೂಡಿಬಂದಿದೆ. ಟೀಕೆ ಟಿಪ್ಪಣಿಗಳು ಬರುವುದು ಸಹಜ. ಆದರೆ ಇದು ಕೊಡಗಿನವರೇ ಸೇರಿ ಮಾಡಿದ ಚಿತ್ರತಂಡದ ಪ್ರಯತ್ನ. ಚಿತ್ರಕ್ಕೆ ಶುಭ ಹಾರೈಸೋಣ


ಕಾಮೆಂಟ್ಗಳು (0)