ಬೆಂಗಳೂರು: ರಾಜ್ಯ ಸರ್ಕಾರದ 33 ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 5,431 ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಸಿ) ಹಾಗೂ ಸಮಾನಾಂತರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಶುಕ್ರವಾರದಿಂದ ಅರ್ಜಿ ಸಲ್ಲಿಕೆಗೆ ಆನ್‌ಲೈನ್ ಲಿಂಕ್ ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸಲು ನವೆಂಬರ್ 25 ಕೊನೆಯ ದಿನವಾಗಿದ್ದು, ನ.26ರೊಳಗೆ ಶುಲ್ಕ ಪಾವತಿಸಬೇಕು. ಈ ದಿನಾಂಕಗಳನ್ನು ಯಾವುದೇ ಕಾರಣಕ್ಕೂ ಮುಂದೂಡುವುದಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಉಳಿಕೆ ಮೂಲ ವೃಂದದಲ್ಲಿ 2,163 ಎಫ್‌ಡಿಸಿ ಹಾಗೂ 2,070 ಎಸ್‌ಡಿಸಿ ಹುದ್ದೆಗಳಿವೆ. ಕಲ್ಯಾಣ ಕರ್ನಾಟಕ ವೃಂದದಲ್ಲಿ 563 ಎಫ್‌ಡಿಸಿ ಹಾಗೂ 635 ಎಸ್‌ಡಿಸಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿ ಪರೀಕ್ಷೆಗಳನ್ನು 2027ರ ಜನವರಿ 8, 9, 10, 16 ಮತ್ತು 17ರಂದು ನಡೆಸಲು ತೀರ್ಮಾನಿಸಲಾಗಿದೆ. ಈ ದಿನಾಂಕಗಳಲ್ಲಿಯೂ ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ, ನಿಖರವಾದ ಮಾಹಿತಿಯನ್ನೇ ನಮೂದಿಸಬೇಕು ಎಂದು ಸೂಚಿಸಲಾಗಿದೆ. ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಒಳಮೀಸಲಾತಿ ಕ್ಲೇಮ್ ಮಾಡಲು ಹೊಸದಾಗಿ ಪಡೆದಿರುವ ಪ್ರಮಾಣ ಪತ್ರದ (ಎಸ್‌ಸಿ-ಎ, ಎಸ್‌ಸಿ-ಬಿ, ಎಸ್‌ಸಿ-ಸಿ) ಆರ್‌ಡಿ ಸಂಖ್ಯೆಯನ್ನೇ ನಮೂದಿಸಬೇಕು ಎಂದು ತಿಳಿಸಲಾಗಿದೆ
ಎಫ್‌ಡಿಸಿ, ಎಸ್‌ಡಿಸಿ ಸೇರಿ 5,431 ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ, ನ.25 ಕೊನೆ ದಿನ
by Kodagu Varadi•ಅಕ್ಟೋಬರ್ 30, 2026BREAKING

ಕಾಮೆಂಟ್‌ಗಳು (0)