ಕುಶಾಲನಗರ ಜು.13. ಸುಮಾರು ₹7.5 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡು ಕಳೆದ ವರ್ಷ 2025ರ ಜೂನ್ 11ರಂದು ವೈಭವದಿಂದ ಲೋಕಾರ್ಪಣೆಗೊಂಡಿದ್ದ ಕುಶಾಲನಗರ ಪುರಸಭೆ ಕಚೇರಿ ಮತ್ತು ವಾಣಿಜ್ಯ ಸಂಕೀರ್ಣದ ಆವರಣವು, ಕೇವಲ ಒಂದು ವರ್ಷದೊಳಗೇ ಸಾರ್ವಜನಿಕರ ಪಾಲಿಗೆ ಅಪಾಯಕಾರಿ ತಾಣವಾಗಿ ಮಾರ್ಪಟ್ಟಿದೆ.

ಕಚೇರಿಯ ಮುಖ್ಯ ದ್ವಾರ ಹಾಗೂ ಅಧಿಕಾರಿಗಳ ಬೈಕ್ ನಿಲುಗಡೆ ಹಾದಿಯಲ್ಲೇ ಇರುವ ಮಳೆನೀರು ಚರಂಡಿಯ ಕಬ್ಬಿಣದ ಗ್ರೀಲ್‌ಗಳು ಕಳಪೆ ಗುಣಮಟ್ಟದ ಕಾರಣ ತುಕ್ಕು ಹಿಡಿದು ಸಂಪೂರ್ಣ ಮುರಿದುಬಿದ್ದಿವೆ.
ಇಂಟರ್‌ಲಾಕ್ ನೆಲಹಾಸಿನ ಮಧ್ಯೆ ತೆರೆದುಕೊಂಡಿರುವ ಈ ಗುಂಡಿಯನ್ನು ದಾಟಿಯೇ ಸಾರ್ವಜನಿಕರು ಸಂಚರಿಸಬೇಕಾದ ಅನಿವಾರ್ಯತೆ ಇದ್ದು, ವೃದ್ಧರು, ಮಹಿಳೆಯರು ಮತ್ತು ಮಕ್ಕಳು ಗುಂಡಿಗೆ ಬೀಳುವ ಭೀತಿ ಎದುರಾಗಿದೆ. ಜೊತೆಗೆ ಆವರಣಕ್ಕೆ ಬರುವ ದನ-ಕರುಗಳಿಗೂ ಪ್ರಾಣಾಪಾಯ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳು, ಕೋಟ್ಯಂತರ ರೂಪಾಯಿ ತೆರಿಗೆದಾರರ ಹಣ ವ್ಯಯಿಸಿ ನಿರ್ಮಿಸಿದ ಕಟ್ಟಡ ಒಂದೇ ವರ್ಷದಲ್ಲಿ ಹೀಗೆ ಹಾಳಾಗಿರುವುದು ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರಕ್ಕೆ ನೇರ ಸಾಕ್ಷಿ ಎಂದು ಆರೋಪಿಸಿದ್ದಾರೆ.
ತಮ್ಮದೇ ಕಚೇರಿ ಆವರಣದ, ತಾವೇ ನಿತ್ಯ ವಾಹನ ನಿಲ್ಲಿಸುವ ಜಾಗದ ಸಮಸ್ಯೆಯನ್ನೇ ಸರಿಪಡಿಸಲಾಗದ ಅಧಿಕಾರಿಗಳು ಊರಿನ ಇತರೆ ಸಮಸ್ಯೆಗಳನ್ನು ಹೇಗೆ ಬಗೆಹರಿಸಬಲ್ಲರು ಎಂದು ಪ್ರಶ್ನಿಸಿದ್ದಾರೆ.
ಈ ಸ್ಥಳದಲ್ಲಿ ಸಾರ್ವಜನಿಕರಿಗಾಗಲಿ, ಪ್ರಾಣಿಗಳಿಗಾಗಲಿ ಯಾವುದೇ ಅನಾಹುತ ಸಂಭವಿಸಿದರೆ ಪುರಸಭೆಯ ಮುಖ್ಯ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿಯೇ ನೇರ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿರುವ ಸಂಘಟನೆ, ತಕ್ಷಣವೇ ಗಟ್ಟಿಮುಟ್ಟಾದ ಕಬ್ಬಿಣದ ಸರಳುಗಳನ್ನು ಅಳವಡಿಸಿ ಸಾರ್ವಜನಿಕ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರ್ ಗೌಡ, ಗೌರವಾಧ್ಯಕ್ಷ ಚಂದ್ರು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಯಶ್ರೀ ಮುರುಗೇಶ್, ಕುಶಾಲನಗರ ತಾಲೂಕು ಸಂಚಾಲಕ ವಿ.ಪಿ. ಚಂದ್ರಣ್ಣ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷೆ ಭವ್ಯ, ಜಿಲ್ಲಾ ಸಂಚಾಲಕ ಸತೀಶ್ ಹಾಗೂ ಪದಾಧಿಕಾರಿಗಳಾದ ವಿಲ್ಸನ್, ನಂಜಪ್ಪ ಮತ್ತು ರಮೇಶ್ ಮತ್ತಿತರರು ಉಪಸ್ಥಿತರಿದ್ದರು.




