ಮಡಿಕೇರಿ ಜು.03: ಕೊಡಗು ಜಿಲ್ಲೆಯಾದ್ಯಂತ ಕನ್ನಡ ನಾಡು-ನುಡಿ ಹಾಗೂ ಕನ್ನಡಿಗರ ಸಾರ್ವಭೌಮತ್ವದ ರಕ್ಷಣೆಗಾಗಿ ಮತ್ತು ಸರ್ಕಾರದ ಅಧಿಕೃತ ಕಾಯ್ದೆಯನ್ನು ತಳಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಮನವಿ ಪತ್ರವನ್ನು ಸಲ್ಲಿಕೆ ಮಾಡಿದೆ.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು, ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು, ರೆಸಾರ್ಟ್ಗಳು, ಹೋಂ ಸ್ಟೇಗಳು ಹಾಗೂ ರಸ್ತೆ ಬದಿಯ ಸಾರ್ವಜನಿಕ ಬ್ಯಾನರ್ಗಳ ಮೇಲ್ಭಾಗದಲ್ಲಿ ಸರ್ಕಾರದ ಆದೇಶದ ಪ್ರಕಾರ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ಸಂಘಟನೆ ತೀವ್ರವಾಗಿ ಒತ್ತಾಯಿಸಿದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ತುರ್ತು ಸಭೆಯಲ್ಲಿದ್ದ ಕಾರಣ, ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಅವರಿಗೆ ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಬಿ. ಎ. ಫ್ರಾನ್ಸಿಸ್ ಡಿಸೋಜ ಹಾಗೂ ಪದಾಧಿಕಾರಿಗಳು ಜಂಟಿಯಾಗಿ ಮನವಿ ಪತ್ರ ಹಸ್ತಾಂತರಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಬಿ. ಎ. ಫ್ರಾನ್ಸಿಸ್ ಡಿಸೋಜ, “ಕೊಡಗಿನಲ್ಲಿ ಕೇವಲ ಹೊರರಾಜ್ಯದ ಪ್ರವಾಸಿಗರನ್ನು ಆಕರ್ಷಿಸಲು ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಇನ್ಮುಂದೆ ಸರ್ಕಾರದ ನಿಯಮವನ್ನು ಉಲ್ಲಂಘಿಸಿ, ಶೇಕಡಾ 60 ರಷ್ಟು ಕನ್ನಡವಿರದ ನಾಮಫಲಕವನ್ನು ಅಳವಡಿಸದ ಎಲ್ಲಾ ಅಂಗಡಿ ಮುಂಗಟ್ಟುಗಳು ಹಾಗೂ ಹೋಂ ಸ್ಟೇಗಳ ವ್ಯಾಪಾರ ಪರವಾನಗಿಯನ್ನು ಯಾವುದೇ ಮುನ್ಸೂಚನೆ ನೀಡದೆ ತಕ್ಷಣವೇ ರದ್ದುಗೊಳಿಸಬೇಕು. ಹೊಸದಾಗಿ ಪರವಾನಗಿ ನೀಡುವಾಗ ಹಾಗೂ ಹಳೆಯ ಪರವಾನಗಿಯನ್ನು ನವೀಕರಿಸುವಾಗ ಪಂಚಾಯಿತಿ ಅಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿ ಕನ್ನಡ ನಾಮಫಲಕ ಇರುವುದನ್ನು ನೋಡಿ ಅನುಮೋದನೆ ನೀಡಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮಾತನಾಡಿ, ಕನ್ನಡ ಭಾಷೆಯ ನಿಯಮಗಳಿಗೆ ಕೆಲವು ವ್ಯಾಪಾರಸ್ಥರು ಗೌರವ ನೀಡುತ್ತಿಲ್ಲ, ಆದ್ದರಿಂದ ಜಿಲ್ಲಾ ಪಂಚಾಯಿತಿಯು ತಕ್ಷಣವೇ ಎಲ್ಲಾ ಪಂಚಾಯ್ತಿಗಳಿಗೂ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ಕಠಿಣ ಬೇಡಿಕೆಗಳಿಗೆ ತಕ್ಷಣವೇ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಅಬ್ದುಲ್ ನಬಿ ಅವರು, “ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಶೀಘ್ರದಲ್ಲೇ ಶೇ. 60 ಕನ್ನಡ ಕಡ್ಡಾಯಗೊಳಿಸುವ ಬಗ್ಗೆ ಅಧಿಕೃತ ಸುತ್ತೋಲೆಯನ್ನು ಹೊರಡಿಸಲಾಗುವುದು ಹಾಗೂ ಆ ಪ್ರತಿಯನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಪದಾಧಿಕಾರಿಗಳಿಗೂ ತಲುಪಿಸಲಾಗುವುದು” ಎಂದು ಭರವಸೆ ನೀಡಿದರು.
ಈ ಮನವಿ ಸಲ್ಲಿಕೆ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಪದಾಧಿಕಾರಿಗಳಾದ ಜಯಶ್ರೀ ಮುರುಗೇಶ್, ಶಿವು, ನಾಸಿರ್, ರವಿಕಿರಣ್, ಮಣಿಕಂಠ, ನಂದಿನಿ, ಭವ್ಯ, ರವೀಂದ್ರ, ವಿಲ್ಸನ್, ನಂಜಪ್ಪ, ರಮೇಶ್ ಹಾಗೂ ಬಾಲಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.




