ಕುಶಾಲನಗರ ಜೂ. 30 : ಇಲ್ಲಿಗೆ ಸಮೀಪದ ಕಾವೇರಿ ನಿಸರ್ಗಧಾಮದ ವ್ಯಾಪಾರ ಕೇಂದ್ರದಲ್ಲಿ (NTC) ನಡೆದಿದೆ ಎನ್ನಲಾದ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಯತ್ನವನ್ನು ಖಂಡಿಸಿ, ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಇಂದು ಜೂನ್ 30 ಮಂಗಳವಾರದಂದು ಕುಶಾಲನಗರದಲ್ಲಿ ಬೃಹತ್ ಜನಾಂದೋಲನ ಜಾಗೃತಿ ಸಭೆ ಹಾಗೂ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕಾವೇರಿ ನಿಸರ್ಗಧಾಮದ ಬಳಿಯಿಂದ ಆರಂಭವಾದ ಈ ಪ್ರತಿಭಟನಾ ಮೆರವಣಿಗೆಗೆ ವಿವಿಧ ಸಮುದಾಯಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರು ಬೆಂಬಲ ನೀಡಿದರು. ಹಾಗೂ ಸ್ಥಳೀಯ ವರ್ತಕರು ಅರ್ಧ ದಿನ ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿತ್ತು. ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆಯು ಅಂತಿಮವಾಗಿ ಕುಶಾಲನಗರದ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ನಿಲ್ದಾಣದಲ್ಲಿ ಬೃಹತ್ ಸಮಾವೇಶವಾಗಿ ಮಾರ್ಪಟ್ಟಿತು.

ಈ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಮುಖಂಡರು, ಅಪ್ರಾಪ್ತ ಬಾಲಕನ ಮತಾಂತರ ಮತ್ತು ಆತನಿಗೆ ಬಲವಂತವಾಗಿ ಸುನ್ನತ್ ಮಾಡಿಸಿದ್ದಾರೆ ಎನ್ನಲಾದ ಪ್ರಕರಣದ ಹಿಂದೆ ಬಹುದೊಡ್ಡ ಜಾಲವಡಗಿದ್ದು, ಈ ಕೂಡಲೇ ದೋಷಿಗಳ ವಿರುದ್ಧ ಕಠಿಣವಾದ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ತೀವ್ರವಾಗಿ ಒತ್ತಾಯಿಸಿದರು.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಕುಶಾಲನಗರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.




