ಹಾಸನ ಜೂ. 22 : ಯೋಗವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರ ಮಾನಸಿಕ ಹಾಗೂ ಶಾರೀರಿಕ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ, ಆದರ್ಶ ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ಆಲೂರು ತಾಲ್ಲೂಕು ಉಪಾಧ್ಯಕ್ಷೆ ಸಿ.ಎಸ್. ಪೂರ್ಣಿಮಾ ಅಭಿಪ್ರಾಯಪಟ್ಟರು.
ಆಲೂರು ತಾಲ್ಲೂಕಿನ ಬೈರಾಪುರ ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

”ಗಿಡವಾದಾಗ ಬಗ್ಗದ್ದು ಮರವಾದಾಗ ಬಗ್ಗೀತೆ” ಎಂಬ ಗಾದೆಯಂತೆ, ವಿದ್ಯಾರ್ಥಿಗಳು ಎಳೆಯ ವಯಸ್ಸಿನಿಂದಲೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪ್ರತಿದಿನ ಸರಳ ವ್ಯಾಯಾಮ, ಲಘು ಯೋಗಾಸನ, ನಿಯಮಿತ ಆಹಾರ ಹಾಗೂ ಏಕಾಗ್ರತೆಯ ಓದು ವಿದ್ಯಾರ್ಥಿಗಳನ್ನು ಸರ್ವತೋಮುಖ ಬೆಳವಣಿಗೆಯತ್ತ ಕೊಂಡೊಯ್ಯುತ್ತದೆ. ಪೋಷಕರು ಸಹ ಮಕ್ಕಳ ಈ ದಿನಚರಿಯ ಕಡೆಗೆ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ವೃದ್ಧರವರೆಗೂ, ಅದರಲ್ಲೂ ವಿಶೇಷವಾಗಿ 35 ರಿಂದ 55 ರ ವಯೋಮಾನದ ಪುರುಷರಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಆರೋಗ್ಯದ ಕಾಳಜಿ ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದೆ ಎಂದ ಅವರು, ಆಲೂರು ತಾಲ್ಲೂಕು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಗುಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳನ್ನು ಹಾಗೂ ಶಿಕ್ಷಕರನ್ನು ಸದಾ ಕ್ರಿಯಾಶೀಲವಾಗಿಟ್ಟಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ ಮಾತನಾಡಿ, ವ್ಯಕ್ತಿಗೆ ಆಸ್ತಿ, ಐಶ್ವರ್ಯಕ್ಕಿಂತ ಆರೋಗ್ಯವೇ ಮಹಾಭಾಗ್ಯ. ಊಟದ ದಿನಚರಿಯ ಜೊತೆಗೆ ಯೋಗ, ವ್ಯಾಯಾಮದ ದಿನಚರಿಯೂ ಪೂರಕವಾಗಿದ್ದಾಗ ಮಾತ್ರ ಸಾಮಾಜಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ. ಪ್ರತಿಯೊಬ್ಬ ನಾಗರಿಕನೂ ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮುದಾಯಿಕ ಆರೋಗ್ಯದ ಕಡೆಯೂ ಗಮನ ಹರಿಸಬೇಕು ಎಂದರು. ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಮಕ್ಕಳಲ್ಲಿ ಮಾನಸಿಕ ಹಾಗೂ ಶಾರೀರಿಕ ಶಿಸ್ತನ್ನು ವೃದ್ಧಿಸುವುದೇ ಸ್ಕೌಟ್ಸ್ ಗೈಡ್ಸ್ ಚಳವಳಿಯ ಪ್ರಮುಖ ಉದ್ದೇಶವಾಗಿದೆ. ಸಂಸ್ಥೆಯ ಹೊರಾಂಗಣ ಚಟುವಟಿಕೆಗಳು ಮಕ್ಕಳನ್ನು ಸರ್ವ ರೀತಿಯಲ್ಲೂ ಸದೃಢಗೊಳಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಬೈರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ ನಾಯಕಿ ಅಶ್ವಿನಿ, ಲೇಡಿ ಸ್ಕೌಟ್ ನಾಯಕಿ ರೇಣುಕಾಮೋಹನ್, ಬೈರಾಪುರದ ಎಸ್.ವಿ. ಆಂಗ್ಲ ಮಾಧ್ಯಮ ಶಾಲೆಯ ಲೇಡಿ ಸ್ಕೌಟ್ ನಾಯಕಿ ರೋಸ್‌ಮೇರಿ, ಆಲೂರಿನ ವಿದ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ನಾಯಕಿ ಜ್ಯೋತಿ, ಗೈಡ್ ನಾಯಕಿ ರೂಹಿ ಸೇರಿದಂತೆ ನೂರಕ್ಕೂ ಅಧಿಕ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.




