ಮಾದಾಪುರ. ಜೂ.23: ಮಾದಾಪುರ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದ ಸರ್ವೆ ನಂಬರ್ 125/1 ಮತ್ತು 22/1, 2ರ ಸರ್ಕಾರಿ ಜಾಗದಲ್ಲಿ ಕಳೆದ 55 ದಿನಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸುಮಾರು 150ಕ್ಕೂ ಹೆಚ್ಚು ಕುಟುಂಬಗಳು ಮಕ್ಕಳು ಮತ್ತು ವೃದ್ಧರೊಂದಿಗೆ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಧರಣಿನಿರತರ ಅಹವಾಲು ಆಲಿಸಿದ ಶಾಸಕರು, ಸುಂಟಿಕೊಪ್ಪ, ಮಾದಾಪುರ, ಗರಗಂದೂರು ಹಾಗೂ ಕೊಡಗರಹಳ್ಳಿ ಪಂಚಾಯಿತಿಗಳ ಪಿಡಿಒಗಳು ತಕ್ಷಣವೇ ಸ್ಥಳಕ್ಕೆ ಆಗಮಿಸಿ ನಿವೇಶನ ರಹಿತರ ಪಟ್ಟಿಯನ್ನು ಪರಾಮರ್ಶಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರಲ್ಲದೆ, ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಅವರಿಗೆ ಪ್ರತಿಭಟನಾಕಾರರು ಸೂಚಿಸುತ್ತಿರುವ ಜಾಗದ ಸರ್ವೆ ನಡೆಸಿ ವರದಿ ನೀಡುವಂತೆ ಆದೇಶಿಸಿದರು.
ಇದೇ ಸಂದರ್ಭದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಕೆ. ಮೊಣ್ಣಪ್ಪ ಅವರು ಶಾಸಕರಿಗೆ ಬಡವರ ವಸತಿ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ಶೀಘ್ರ ಪರಿಹಾರಕ್ಕೆ ಒತ್ತಾಯಿಸಿದರು. ಶಾಸಕರ ಈ ಸಕಾರಾತ್ಮಕ ಸ್ಪಂದನೆಯ ಹಿನ್ನೆಲೆಯಲ್ಲಿ, ಜೂನ್ 25ರಂದು ಮಾದಾಪುರದಿಂದ ಶಾಸಕರ ಮನೆ ಮುಂದೆ ನಡೆಸಲುದ್ದೇಶಿಸಿದ್ದ ಬೃಹತ್ ಪ್ರತಿಭಟನಾ ಜಾಥಾವನ್ನು ಹೋರಾಟ ಸಮಿತಿಯು ತಾತ್ಕಾಲಿಕವಾಗಿ ಕೈಬಿಟ್ಟಿದೆ.




