ಜೇನು ಸಾಕಣೆ
ಈ ಪ್ರಕೃತಿ ವಿಸ್ಮಯಗಳ ತಾಣ. ಕೋಟ್ಯಾನು ಕೋಟಿ ಜೀವರಾಶಿಗಳ ಸಮ್ಮಿಲನ. ನಾವು ತಿನ್ನುವ ಪ್ರತಿ ಆಹಾರ ಇನ್ನೊದು ಜೀವಿಯ ಮೇಲೆ ಅವಲಂಬಿತವಾಗಿರುತ್ತದೆ. ಈ ಸುಂದರ ಪರಿಸರದ ಶುದ್ಧ ಆಹಾರದ ಮೂಲದಲ್ಲಿ ಜೇನು ಹುಳುಗಳದ್ದೆ ಸಿಂಹಪಾಲು ಎಂದರೆ ತಪ್ಪಲ್ಲ.
ಹಾಗಿದ್ದರೆ ಜೇನು ಹುಳುಗಳ ಬಗ್ಗೆ ನಮಗೆಷ್ಟು ಗೊತ್ತು?
ಈ ಪ್ರಪಂಚದಲ್ಲಿ ಸುಮಾರು ೨೦,೦೦೦ ಬಗೆಯ ಜೇನು ಇವೆಯೆಂದು ಹೇಳಲಾಗುತ್ತದೆ. ನಮ್ಮ ಆಹಾರ ಬೆಳೆಗಳ ಶೇಕಡ ೭೦ರಷ್ಟು ಪರಾಗ ಸ್ಪರ್ಶ ಕ್ರಿಯೆ ಜೇನು ಹುಳುಗಳಿಂದಲೇ ನಡೆಯುತ್ತವೆ. ಒಂದೊಮ್ಮೆ ಜೇನು ಹುಳುಗಳ ಸಂತತಿ ನಾಶವಾದರೆ ಮಾನವ ಕುಲ ಕೇವಲ ನಾಲ್ಕು ವರ್ಷಗಳಲ್ಲಿ ಅಳಿಸಿ ಹೋಗುತ್ತದೆ ಎಂದು ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೀನ್ ಹೇಳಿದ್ದಾರೆ.

ಕೀಟ ಪ್ರಪಂಚದಲ್ಲಿ ನಿರಂತರ ಸಾಮಾಜಿಕ ಜೀವನ ನಡೆಸುವ ಕೀಟವೆಂದರೆ ಜೇನುನೊಣಗಳು. ಇವುಗಳಲ್ಲಿ ಅನೇಕ ವೈಶಿಷ್ಟ್ಯಗಳನ್ನು ಕಾಣಬಹುದು. ಮನುಷ್ಯ ಅನೇಕ ಪಾಠಗಳನ್ನು ಜೇನು ನೊಣಗಳಿಂದ ಕಲಿಯಬಹುದು. ಉದಾಹರಣೆಗೆ ಸಂಘಜೀವನ, ಮುಂದಾಳತ್ವ, ಕಾರ್ಯಾಲಕ್ಷತೆ, ಹಂಚಿತಿನ್ನುವುದು, ಕಠಿಣ ಪರಿಶ್ರಮ, ಪರಸ್ಪರ ಸಹಾಯ, ಸ್ವಚ್ಛತೆ, ತ್ಯಾಗ, ಕರ್ತವ್ಯನಿಷ್ಠೆ, ಜವಾಬ್ದಾರಿ, ಕೆಲಸ ಹಂಚಿಕೆ, ಕುಟುಂಬ ನಿಯಂತ್ರಣ, ಪರೋಪಕಾರಿ ಮನೋಭಾವ, ಹೀಗೆ ಹತ್ತು ಹಲವು. ಜೇನು ಹುಳುಗಳಿಂದ ಪ್ರಕೃತಿಯಲ್ಲಿ ಪರಾಗಸ್ಪರ್ಶದ ಸೇವೆ ನಿರಂತರವಾಗಿ ನಡೆದು ಸಸ್ಯ ವೈವಿದ್ಯ ಕಾಪಾಡುವುದು, ಸಸ್ಯ ವೈವಿದ್ಯ ಬೆಳೆಸುವುದು ಹಾಗು ಬೀಜೋತ್ಪಾದನೆ ಮಾಡುವುದರಲ್ಲಿ ಸಹಕಾರಿಯಾಗಿದೆ.

ಒಂದು ಜೇನು ಕುಟುಂಬಕ್ಕೆ ಒಬ್ಬಳೇ ರಾಣಿ (Queen). ನೂರಾರು ಗಂಡು ನೊಣಗಳು (Drone) ಮತ್ತು ಸಾವಿರಾರು ಕೆಲಸಗಾರ್ತಿ ನೊಣಗಳು
(Workers). ಕೆಲಸಗಾರ್ತಿ ನೊಣಗಳು ಹೆಣ್ಣು ನೊಣಗಳು, ಆದರೆ ಅವೆಲ್ಲ ರಾಣಿಯರಲ್ಲ. ಇವು ಕೇವಲ ೬ ರಿಂದ ೮ ವಾರಗಳವರೆಗೆ ಬದುಕುತ್ತವೆ. ಹೆಣ್ಣಾದರೂ ಸಂತಾನ ಉತ್ಪತ್ತಿ ಮಾಡಲಾರವು (ರಾಣಿನೊಣವಿಲ್ಲದ ಸಂದರ್ಭದಲ್ಲಿ ಮೊಟ್ಟೆಯಿಡುವ ಸಾಧ್ಯತೆ ಇದೆ). ತನ್ನ ಜೀವಿತಾವಧಿಯ ಬೇರೆ ಬೇರೆ ವಯಸ್ಸಿನಲ್ಲಿ ಬೇರೆ ಬೇರೆ ಕೆಲಸಗಳನ್ನು ಮಾಡಬಲ್ಲವು.
ರಾಣಿ ಜೇನಿನ ಆರೈಕೆ. ಮೊಟ್ಟೆಗಳ ರಕ್ಷಣೆ, ಜೇನುಗೂಡಿನ/ಎರಿಗಳ ನಿರ್ಮಾಣ, ಸ್ವಚ್ಛತೆ, ಜೇನಿನ ತಯಾರಿ, ಶತ್ರುಗಳಿಂದ ರಕ್ಷಣೆ ಇವುಗಳ ಕೆಲಸ. ಇವುಗಳು ನೃತ್ಯಮಾಡುವ ಮೂಲಕ ತನ್ನ ಸಂಗಡಿಗರಿಗೆ ಮಕರಂದ/ಪರಾಗ ಇರುವಿಕೆಯ ಬಗ್ಗೆ ತಿಳಿಸುತ್ತದೆ. ತನ್ನ ಜೀವಿತಾವಧಿಯಲ್ಲಿ ಒಂದು ಹುಳು ಒಂದು ಟೀ ಚಮಚ ಜೇನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಇವು ದಿನನಿತ್ಯ ಸಾವಿರಾರು ಹೂಗಳನ್ನು ಸ್ಪರ್ಶಿಸುತ್ತದೆ ಮತ್ತು ತನ್ನ ಸುತ್ತಲಿನ ೧ ಕಿಲೋಮೀಟ-ರಿಗಿಂತಲೂ ದೂರ ಸಂಚರಿಸುತ್ತದೆ.
ರಾಣಿ ಜೇನು ೨ ರಿಂದ ೩ ವರ್ಷಗಳು ಬದುಕುತ್ತವೆ.
ಒಂದು ದಿನಕ್ಕೆ ಸರಾಸರಿ ೧೫೦೦ ಮೊಟ್ಟೆಗಳನ್ನು ಇಡುತ್ತದೆ. ಒಂದು ರಾಣಿ ಜೇನು ತನ್ನ ಜೀವಿತಾವಧಿಯಲ್ಲಿ ಕೇವಲ ಒಂದು ಬಾರಿ ಮಾತ್ರ ಗಂಡು ಜೇನಿನೊಡನೆ ಮಿಲನವಾಗುತ್ತದೆ. ಈ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಗಂಡು ನೊಣಗಳ ಜೊತೆ ಮಿಲನವಾಗಬಹುದು. ಒಂದು ವೇಳೆ ರಾಣಿಜೇನು ಆಕಾಲಿಕ ಮರಣ ಹೊಂದಿದರೆ ಇತರ ನೊಣಗಳು ಈಗಾಗಲೇ ಇರುವ ಬಲಿಷ್ಠ ಲಾರ್ವಕ್ಕೆ ರಾಜಶಾಹಿ ರಸವುಣಿಸಿ ರಾಣಿಕಣವನ್ನಾಗಿ ಹುಟ್ಟುಹಾಕುತ್ತವೆ.
ಗಂಡು ನೊಣಗಳು ಸಂತಾನೋತ್ಪತ್ತಿಗೆ ಮಾತ್ರ ಸಹಕಾರಿ
ಇತರ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಅಲ್ಲದೆ ಇವುಗಳಿಗೆ ಚುಚ್ಚಲು ಮುಳ್ಳು ಸಹ ಇರುವುದಿಲ್ಲ. ಒಂದು ಕುಟುಂಬದಲ್ಲಿ ಇವುಗಳ ಸಂಖ್ಯೆ ಅತೀ ಕಡಿಮೆ ಇರುತ್ತವೆ. ಒಮ್ಮೆ ರಾಣಿಯೊಡನೆ ಮಿಲನವಾದರೆ ಆ ಗಂಡುನೊಣವು ಸಾವನ್ನಪ್ಪುತ್ತದೆ.
ಜೇನು ನೊಣಗಳ ಮುಖ್ಯ ಪ್ರಭೇದಗಳು:
೧. ಹೆಚ್ಚೇನು, ಕಲ್ಲು ಜೇನು, ಮರ ಜೇನು.
೨. ಭಾರತೀಯ ಜೇನು, ತುಡುವೆ ಜೇನು, ಪೊಟರೆ / ಹುತ್ತ ಜೇನು.
೩. ಕೋಲು ಜೇನು, ಕಿರುಜೇನು.
೪. ನುಸುರಿ ಜೇನು. ಮಿಸರಿ ಜೇನು, ರಾಳ ಜೇನು, ಚುಚ್ಚದ ಜೇನು.
ಜೇನು ಕೃಷಿ ಪ್ರಾರಂಭಿಸುವಿಕೆ ಮತ್ತು ನಿರ್ವಹಣೆ:
ಅತಿ ಕಡಿಮೆ ಸ್ಥಳದಲ್ಲಿ, ಕಡಿಮೆ ಬಂಡವಾಳದಲ್ಲಿ, ಕಡಿಮೆ ಸಮಯ ವಿನಿಯೋಗಿಸಿ, ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಹೆಣ್ಣು-ಗಂಡು ಭೇದವಿಲ್ಲದೆ ಸುಲಭವಾಗಿ ಮಾಡಬಹುದಾದ ಕೃಷಿ ಎಂದರೆ ಜೇನು ಸಾಕಣೆ. ಆದರೆ ಪ್ರಾರಂಭಿಸುವ ಮೊದಲು ಸರಿಯಾದ ತಿಳುವಳಿಕೆ ಹೊಂದಿರುವುದು ಮುಖ್ಯ. ಜೇನು ನೊಣಗಳ ನಡವಳಿಕೆ. ಅವಶ್ಯಕ ಆಹಾರ ಸಸ್ಯಗಳು ಮತ್ತು ಕಾಲಾನುಸಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿದಿರಬೇಕು. ಈ ಮಾಹಿತಿಯನ್ನು ಹತ್ತಿರದ ಪರಿಣಿತ ಜೇನು ಕೃಷಿಕರಿಂದ ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಜೇನು ಕುಟುಂಬಗಳನ್ನು ಮಾರಾಟ ಮಾಡುವವರು ತರಬೇತಿಯೊಂದಿಗೆ ಅವುಗಳಿಗೆ ಬೇಕಾದ ಪೂರಕ ಸಸ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಿಕೊಡುತ್ತಾರೆ. ಅಲ್ಲದೆ ಸರ್ಕಾರ, ಕೃಷಿ ವಿಶ್ವವಿದ್ಯಾನಿಲಯಗಳು, ಸಂಶೋಧನಾ ಮತ್ತು ವಿಸ್ತರಣಾ ಸಂಸ್ಥೆಗಳು ನಡೆಸುವ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವ ಪಡೆದುಕೊಳ್ಳಬಹುದು. ಕೊಡಗಿನ ಭಾಗಮಂಡಲದಲ್ಲಿರುವ ಸರ್ಕಾರಿ ಜೇನು ಕೃಷಿ ತರಬೇತಿ ಶಾಲೆಯಲ್ಲಿ ತೋಟ ಗಾರಿಕಾ ಇಲಾಖೆಯ ವತಿಯಿಂದ ಮೂರು ತಿಂಗಳ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.
(ಅಭ್ಯರ್ಥಿಗಳ ಆಯ್ಕೆಯು ನಿಬಂಧನೆಗಳಿಗೆಒಳಪಟ್ಟಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬಹುದು).
ಇದಲ್ಲದೆ ಕೊಡಗಿನ ಕೃಷಿಕರಿಗೆ ವಯಸ್ಸಿನ ನಿರ್ಬಂಧ ಇಲ್ಲದೆ ಎರಡು ದಿನದ ಕಾರ್ಯಾಗಾರವು ಆಗಿಂದಾಗೆ ಆಯೋಜಿಸಲಾಗುತ್ತಿದೆ. ಅದರೊಂದಿಗೆ ಸರ್ಕಾರವು ಶೇಕಡಾ ೭೫ರ ರಿಯಾಯಿತಿ ದರದಲ್ಲಿ ಜೇನು ಕುಟುಂಬ ಸಹಿತ ಜೇನುಪೆಟ್ಟಿಗೆ ಹಾಗೂ ಆಧಾರ ಸ್ತಂಭವನ್ನು ತೋಟಗಾರಿಕಾ ಇಲಾಖೆಯ ಮೂಲಕ ಒದಗಿಸಲಾಗುತ್ತದೆ.
ಸ್ಥಳದ ಆಯ್ಕೆ:
ಜೇನು ಸಾಕಾಣೆಯನ್ನು ಪ್ರಾರಂಭಿಸುವ ಸ್ಥಳವು ಸೂಕ್ತವಾಗಿದ್ದು ಕೋತಿಗಳು, ಕರಡಿಗಳು, ಇರುವೆ, ಕಣಜ ಮುಂತಾದ ಶತ್ರುಗಳಿಂದ ದೂರವಿರಬೇಕು. ಅಲ್ಲದೆ ಆ ಪ್ರದೇಶದಲ್ಲಿ ಹೇರಳವಾಗಿ ಪರಾಗ ಮತ್ತು ಮಕರಂದ ಸಿಗುವ ಪುಷ್ಪಗಳಿಂದ ಕೂಡಿದ ಹೂಬಳ್ಳಿಗಳು, ಗಿಡಮರಗಳಿರಬೇಕು. ಹೆಚ್ಚಿನ ಜನಸಂದಣಿಯಿಂದ ಕೂಡಿದ್ದಲ್ಲಿ ಅವುಗಳ ಚಟುವಟಿಕೆಗಳಿಗೆ ಅಡ್ಡಿಯಾಗಬಹುದು. ಅತಿ ಮುಖ್ಯವಾಗಿ ಶುದ್ಧವಾದ ನೀರು ದೊರಕುವಂತಿರಬೇಕು. ಪಟ್ಟಣದಲ್ಲಿ ವಾಸಿಸುವವರು ಮನೆಯ ಮೇಲ್ಟಾವಣಿಯ ಕೈತೋಟದಲ್ಲಿ (Terrace Garden) ಇಟ್ಟುಕೊಳ್ಳಬಹುದು. ಒಂದೆರಡು ಪೆಟ್ಟಿಗೆಗಳನ್ನು ಜೇನು ಕುಟುಂಬಗಳನ್ನು ಪಡೆಯುವುದು: ಎರಡರಿಂದ ನಾಲ್ಕು ಜೇನು ಕುಟುಂಬಗಳಿಂದ ಜೇನು ಸಾಕಾಣೆ ಪ್ರಾರಂಭಿಸುವುದು ಸೂಕ್ತ. ಖರೀದಿಸುವ
ಕುಟುಂಬಗಳು ಅತಿ ಕಡಿಮೆ ಅಂದರೂ ಮೂರು ಅಥವಾ ನಾಲ ಚೌಕಟ್ಟುಗಳಿಂದ ಕೂಡಿದ ಮರಿಗಳು ಮತ್ತು ಪ್ರೌಢ ಕೆಲಸಗಾರರನ್ನು ಹೊಂದಿರಬೇಕು. ಈ ಕುಟುಂಬಗಳು ಸುಮಾರು ಮೂರರಿಂದ ನಾಲ್ಕು ತಿಂಗಳ ಯುವರಾಣಿ ಹೊಂದಿದ್ದರೆ ಅತಿ ಉತ್ತಮ. ಜೇನು ಸಾಕಾಣೆಯನ್ನು ಭಾರತೀಯ ಮಾನಕ ಬ್ಯುರೋದವರು (ISI) ನಿಗದಿಪಡಿಸಿದ ಪೆಟ್ಟಿಗೆಯಲ್ಲಿ ಸಾಕಣೆ ಮಾಡಿದರೆ ನಿರ್ವಹಣೆ ಸುಲಭ.
ಉತ್ತಮ ಗುಣಮಟ್ಟದ ಜೇನು ಕುಟುಂಬಗಳನ್ನು ಕೆಳಗಿನ ಮೂಲಗಳಿಂದ ಪಡೆಯಬಹುದು:
೧. ತೋಟಗಾರಿಕೆ ಇಲಾಖೆಯ ಜೇನು ಕೃಷಿ ವಿಭಾಗದಲ್ಲಿ ಅಗತ್ಯ ದಾಖಲೆಗಳನ್ನು ಒದಗಿಸುವುದರ ಮೂಲಕ
೨. ಅನುಭವಿ ಜೇನು ಕೃಷಿಕರಿಂದ
೩. ಜೇನು ಕೃಷಿ ಸಂಸ್ಥೆ ಅಥವಾ ಸೊಸೈಟಿಗಳಿಂದ
೪. ಜೇನು ಕುಟುಂಬಗಳು ಸ್ವಾಭಾವಿಕವಾಗಿ ಪಾರಾಗುವ ಮೊದಲು ಪಾಲು ಮಾಡುವ ಮೂಲಕ
೫. ಪಾಲಾದ ಕುಟುಂಬಗಳನ್ನು ಹಿಡಿದು ಪೆಟ್ಟಿಗೆಗೆ ತುಂಬಿಸುವ ಮೂಲಕ
೬. ಮರದ ಪೋಟರೆ, ಹುತ್ತದಂತಹ ಸ್ವಾಭಾವಿಕ ವಾಸಸ್ಥಾನದಿಂದ ಹಿಡಿದು ಪೆಟ್ಟಿಗೆಗೆ ವರ್ಗಾಯಿಸುವ ಮೂಲಕ
೭. ಹಳೆಯ ಜೇನುಪೆಟ್ಟಿಗೆ ಅಥವಾ ಮಣ್ಣಿನ ಮಡಿಕೆಗೆ ಹಳೆಯ ಜೇನು ಮೇಣವನ್ನು ಕುದಿಸಿ ದಾಲ್ಟಿನ್ನಿ ಮರ ಅಥವಾ ಅದೇ ಪ್ರಭೇದದ ಕಾಡು ಜಾತಿಯ ಮರದ ಸೊಪ್ಪಿನಲ್ಲಿ ಸವರಿ ಜೇನು ಕುಟುಂಬವನ್ನು ಆಕರ್ಷಿಸುವ ಮೂಲಕ.
ಮಾರುಕಟ್ಟೆಯಲ್ಲಿ ನೂರಾರು ಮುದ್ರೆಯ (Brand) ಜೇನು ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದರೂ ಶುದ್ಧ ನೈಸರ್ಗಿಕ ಹಾಗೂ ಸ್ವಾಭಾವಿಕ ಜೇನಿಗೆ ಕಿಲೋ ಒಂದಕ್ಕೆ ಒಂದು ಸಾವಿರಕ್ಕಿಂತ ಕಡಿಮೆ ಇಲ್ಲದಂತೆ ಮಾರಾಟ ಮಾಡಬಹುದು. ಅನುಭವ ಇದ್ದರೆ ಜೇನು ಕುಟುಂಬ ಪಾಲು ಮಾಡಿ, ಮಾರಾಟ ಮಾಡಿ ಅಧಿಕ ಲಾಭ ಗಳಿಸಬಹುದು. ಅದಕ್ಕಿಂತಲೂ ಮುಖ್ಯವಾಗಿ ಜೇನು ಹುಳುಗಳೊಂದಿಗಿನ ಒಡನಾಟ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಕೊಡುತ್ತದೆ. ಪ್ರಕೃತಿಗೆ ಒಂದು ಸಣ್ಣ ಸೇವೆ ಸಲ್ಲಿಸಿದ ಖುಷಿ ಕೊಡದೆ ಇರದು!
ಆದಿ ಮಾನವರಿಗೆ ಮೊದಲು ನೈಸರ್ಗಿಕ ಸಿಹಿ ಪದಾರ್ಥ ಉಣಿಸಿದ್ದು ಜೇನು ನೊಣಗಳು ಅಂದರೆ ತಪ್ಪಾಗಲಾರದು. ಜೇನು ನೊಣಗಳು ಸಂಗ್ರಹಿಸುವ ಜೇನುತುಪ್ಪ ಪ್ರಕೃತಿಯ ‘ದ್ರವ ಬಂಗಾರ’ ಎಂದೇ ಪ್ರಸಿದ್ದಿ ಪಡೆದಿರುತ್ತದೆ. ಜೇನುತುಪ್ಪವನ್ನು ಹೊರತುಪಡಿಸಿ ಜೇನು ನೊಣಗಳಿಂದ ದೊರಕುವ ಇತರ ಉತ್ಪನ್ನಗಳೆಂದರೆ ಅಂಟು, ಮೇಣ, ಜೇನಿನ ವಿಷ, ರಾಜಶಾಹಿರಸ ಇತ್ಯಾದಿ.
ಇಂತಹ ವಿಸ್ಮಯಕಾರಿಯಾದ ಶ್ರೇಷ್ಠ ಜೀವಿಯನ್ನು ಸಾಕಿ ಸಲಹಿ ಪ್ರಯೋಜನ ಪಡೆಯುವುದು ಮನುಷ್ಯನಿಗೆ ಬಹಳ ಮುಖ್ಯವಾಗಿದೆ. ಇವುಗಳ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳಬೇಕಿದೆ. ಹಾಗೂ ಇವುಗಳನ್ನು ಹೇಗೆ ವೈಜ್ಞಾನಿಕವಾಗಿ ಸಾಕಾಣೆ ಮಾಡು ಮಾಡುವುದು ಎಂದು ಎಲ್ಲರೂ ಕಲಿಯುವ ಆಗತ್ಯವಿದೆ.




