ಹಾಸನ ಮೇ 24: ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ(ರಿ.), ಬೆಂಗಳೂರು ಈಗಾಗಲೇ ರಾಜ್ಯ, ಹೊರರಾಜ್ಯ, ಹೊರ ದೇಶಗಳಲ್ಲೂ ತನ್ನ ಘಟಕಗಳ ಮುಖೇನ ಕನ್ನಡ ಸಾಹಿತ್ಯಿಕ ಕೈಂಕರ್ಯಗಳನ್ನು ಮಾಡುತ್ತಾ ಬಂದಿದೆ. ಹಾಸನ ಜಿಲ್ಲಾ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಕಾರ್ಯ ಚಟವಟಿಕೆಗಳನ್ನು ಇನ್ನಷ್ಟು ಬಲಗೊಳಿಸಲು ಸಾಹಿತಿ ಹಾಗೂ ಕೇಂದ್ರ ಸಮಿತಿಯ ಟ್ರಸ್ಟಿ ವಾಸು ಸಮುದ್ರವಳ್ಳಿಯವರನ್ನು ಹಾಸನ ಜಿಲ್ಲಾ ನೂತನ ಅಧ್ಯಕ್ಷರನ್ನಾಗಿ ಎರಡನೇ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೨೦೨೬ ಮೆ ೨೩ ಶನಿವಾರ ಹಾಸನ ನಗರದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಧ್ಯಕ್ಷತೆಯಲ್ಲಿ ಕರೆದ ಟ್ರಸ್ಟಿ ಸಭಯೆಲ್ಲಿ ೨೦೧೮ ರಿಂದ ೨೦೨೩ ರವರೆಗೆ ಮೊದಲ ಅವಧಿಯಲ್ಲಿ ಹಾಸನ ಜಿಲ್ಲಾಧ್ಯಕ್ಷರಾಗಿ ಯಶಸ್ವೀಯಾಗಿ ಸಂಘಟಿಸಿ ಉತ್ತಮ ಕಾರ್ಯಕ್ರಮಗಳ ಮುಖೇನ ವೇದಿಕೆಯನ್ನು ಗುಣಾತ್ಮಕವಾಗಿ ಕಟ್ಟಿಬೆಳೆಸಿದ್ದ ವಾಸು ಸಮುದ್ರವಳ್ಳಿಯವರನ್ನು ಎರಡನೇ ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಟ್ರಸ್ಟಿಗಳಾದ ನಾಗರಾಜ್ ದೊಡ್ಡಮನಿ, ಎಚ್.ಎಸ್. ಬಸವರಾಜ್, ವಾಸು ಸಮುದ್ರವಳ್ಳಿ ಉಪಸ್ಥಿತರಿದ್ದರು. ದೇಸು ಆಲೂರು ಹಾಗೂ ಡಾ. ಪಿ. ದಿವಾಕರ ನಾರಾಯಣ ದೂರವಾಣಿ ಮೂಲಕ ಆಯ್ಕೆಗೆ ಸಮ್ಮತಿ ಸೂಚಿಸಿದರು. ವೇದಿಕೆಯ ಬೈಲಾ ನಿಯಮದಡಿ ಹಾಸನ ಜಿಲ್ಲೆ ಹಾಗೂ ಎಲ್ಲಾ ತಾಲ್ಲೂಕುಗಳಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ತೀರ್ಮಾನಿಸಲಾಯಿತು.




