ಮೂಸಾ ಮೊಯಿಲಿಯವರ ಮುದ್ದಿನ ಮಗಳು.. ಎಲಿವೇಟರ್ ಎಂಬ ದುಷ್ಟ ಜಂತು.. ಬರೆದು…
ಹಾಲು ಕುಡಿದ ಹುಡುಗ .. ಈಗ ಹುಟ್ಟಿದೂರಿನಲ್ಲಿಯೇ ಸಾಹಿತ್ಯ ಸಮ್ಮೇಳನಾಧ್ಯಕ್ಷ !
ಸುಂಟಿಕೊಪ್ಪದಲ್ಲಿ ಹಿರಿಯರನ್ನು ಇಸ್ಮಾಯಿಲ್ ರೈಟರ್ ಗೊತ್ತಾ ಅಂಥ ಈಗಲೂ ಕೇಳಿದರೆ ಕಣ್ಮು ಅರಳಿಸಿ ಓಹೋ ಗೊತ್ತು. ಒಳ್ಳೆ ಮನುಷ್ಯರಾಗಿದ್ದರು ಎಂದು ಹೊಗಳುವವರೇ ಕಾಣಸಿಗುತ್ತಾರೆ.
ಇಸ್ಮಾಯಿಲ್ ರೈಟರ್ ಎಂದರೆ ಇಂದಿಗೂ ಫೇಮಸ್ಸು. ಇಂಥ ಇಸ್ಮಾಯಿಲ್ ರೈಟರ್ ಎಂಬ ಒಳ್ಳೆ ವ್ಯಕ್ತಿಯ ಮಗನೇ..ಹಾಲು ಕುಡಿದ ಹುಡುಗ ಅಬ್ದುಲ್ ರಶೀದ್.
ಗದ್ದೆ ಹಳ್ಳದ ಇಸ್ಮಾಯಿಲ್ – ಫಾತಿಮಾ ದಂಪತಿಯ 8 ಮಕ್ಕಳಲ್ಲಿ ಮೊದಲು ಹುಟ್ಟಿದ ಅಬ್ದುಲ್ ರಶೀದ್ ಅತ್ಯಂತ ಗಲಾಟೆಯ ಮಗನಾಗಿ ಅಂದಿಗೂ ಮತ್ತು ಇಂದಿಗೂ.. ಎಂದೆಂದಿಗೂ ಮನೆಯಲ್ಲಿ ಹೆಸರುವಾಸಿ.
ಆ ಸುಂಟಿಕೊಪ್ಪದ ಅಬ್ದುಲ್ ರಶೀದ್..
ಈಗ ಹುಣಸೂರಿನಲ್ಲಿದ್ದಾರೆ. 4 ಎಕ್ರೆ ಜಾಗದಲ್ಲಿ ಮಾವು , ತೆಂಗು ಬೆಳೆಯುತ್ತಾ, ಕೋಳಿಗಳನ್ನೂ ಸಾಕುತ್ತಾ, ಪುಟ್ಟ ಮನೆಯ ಪಕ್ಕದಲ್ಲಿಯೇ ಮತ್ತೊಂದು ಹುಲ್ಲಿನ ಗುಡಿಸಲು ಕಟ್ಟಿಕೊಂಡು ಆ ಗುಡಿಸಲಿನ ಗೋಡೆಗೆ ಮಣ್ಣು ಸವರುತ್ತಾ, ತಂಗಾಳಿ ಸೇವಿಸಿಕೊಂಡು 61 ನೇ ವಯಸ್ಸಿನಲ್ಲಿಯೂ 16 ವಷ೯ದವರಂತೆ ಕಂಗೊಳಿಸುತ್ತಾ.. ಅದೇ ನಿಲಿ೯ಪ್ತತೆ, ಅದೇ ಆಪ್ತತೆ, ಅದೇ ಹಸನ್ಮುಖ, ಅದೇ ಸಂತೋಷದೊಂದಿಗೆ ಬಾನುಲಿಯಲ್ಲಿ ತೇಲಿಬರುವ ….ಅನಿಸುತ್ತಿದೆ ಯಾಕೋ ಇಂದು …ಎಂಬೆಲ್ಲಾ ಹಾಡು ಕೇಳುತ್ತಾ ಜೀವನವನ್ನು ಸಂಭ್ರಮಿಸುತ್ತಿದ್ದಾರೆ.
ಇಂಥ ರಶೀದ್ ಈಗ ಮೇ 29 ಮತ್ತು 30 ರಂದು ಸುಂಟಿಕೊಪ್ಪದಲ್ಲಿ ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17 ನೇ ವಷ೯ದ ಸಮ್ಮೇಳನದ ಅಧ್ಯಕ್ಷರು
. ಸಮ್ಮೇಳನಾಧ್ಯಕ್ಷರನ್ನು ಮಾತನಾಡಿಸಿಕೊಂಡು ಬರೋಣ ಎಂದು ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷನಾಗಿರುವ ನನ್ನನ್ನು ಕುಶಾಲನಗರ ತಾಲೂಕು ಪತ್ರಕತ೯ರ ಸಂಘದ ಅಧ್ಯಕ್ಷರಾಗಿರುವ ಬಿ.ಸಿ. ದಿನೇಶ್, ಪ್ರಧಾನ ಕಾಯ೯ದಶಿ೯ ಎಂ.ಬಿ. ವಿನ್ಸೆಂಟ್, ಖಜಾಂಜಿ ಕೆ.ಎಸ್. . ಅನಿಲ್ ಕುಮಾರ್ ಒತ್ತಾಯಿಸಿದ್ದರು. ಇವರೊಂದಿಗೆ ನಿದೇ೯ಶಕರಾದ ನವೀನ್ ಚಿಣ್ಣಪ್ಪ, ಬಿ.ಎನ್. ರವಿಕುಮಾರ್, ಹಿರಿಯ ಪತ್ರಕತ೯ ಎಸ್. ಜಿ. ಉಮೇಶ್ ಅವರನ್ನೂ ಸೇರಿಸಿಕೊಂಡು ರಶೀದ್ ತಂಪಾಗಿರುವ ಹುಣಸೂರು ಬಳಿಯ ಅವರ ಆದಿವಾಸಿ ಫಾಮ್೯ ಗೆ ತೆರಳಿದೆವು.
ಬನ್ನಿಕೊಪ್ಪದ ಜಡಗನಕೊಪ್ಪಲು ಗ್ರಾಮಕ್ಕೆ ಸೇರಿದ ಆ ತೋಟದಲ್ಲಿ ಮರಗಳ ಕಳಗೆ ಇದೇ ರಶೀದ್ ಅದೇ ಮುಗಳ್ನಗೆ, ಅದೇ ವಿನಮ್ರತೆ, ಅದೇ ಸೌಮ್ಯತೆ, ಅದೇ ಆಪ್ತತೆಯೊಂದಿಗೆ ಕಂಗೊಳಿಸುತ್ತಾ 61 ನೇ ವಷ೯ದಲ್ಲಿಯೂ 16 ರ ಹುಡುಗನಂತೆ ಲವ್ ಲವಿಕೆಯೊಂದಿಗೆ ನಮ್ಮನ್ನು ಬರಮಾಡಿಕೊಂಡರು.
ಯಜಮಾನರು ಹುಷಾರಾಗಿದ್ದಾರೆ ತಾನೇ.. ಏನೋಪ್ಪಾ, ಇತ್ಲಾಗೆ.. ಸುಮಾರು ಜನ ಯಜಮಾನರನ್ನು ನೋಡಿಕೊಂಡು ಹೋಗಲು ಹಾರ, ಶಾಲು ಹಿಡಿದುಕೊಂಡು ಬರ್ತಾ ಇದ್ದಾರೆ, ಏನ್ ಕಥೆನೋ ಏನೋ ಎಂದು ರಶೀದ್ ತೋಟದ ಈವ೯ರು ಸಿಬ್ಬಂದಿಗಳು ಕುತೂಹಲ, ಅಚ್ಚರಿ, ಆತಂಕದಿಂದ ನೋಡುತ್ತಾ ನಿಂತಿದ್ದರು. ಇವರಿಗೆ ನಾನು ಬರೆಯುತ್ತೇನೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿದ್ದೇನೆ ಎಂದೆಲ್ಲಾ ಗೊತ್ತಿಲ್ಲ. ಅಥ೯ವೂ ಆಗೋದಿಲ್ಲ ಎಂದು ಹೇಳಿ ಬಾಯ್ತುಂಬ ನಕ್ಕರು ರಶೀದ್.
ಸಂವಾದದ ಸಂದಭ೯ ರಶೀದ್ ಹೇಳಿದ್ದಿಷ್ಟು..
– ನೀವು ಹುಟ್ಟಿ ಬೆಳೆದ ಸುಂಟಿಕೊಪ್ಪದಲ್ಲಿ ಮೇ 29,30 ರಂದು ಆಯೋಜಿತ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ 17 ನೇ ಸಮ್ಮೇಳನದಲ್ಲಿ ಅಧ್ಯಕ್ಷರಾಗಿದ್ದೀರಿ.
.ನನ್ನ ತಂದೆ ಇಸ್ಮಾಯಿಲ್ ಸ್ಥಳೀಯ ಸ್ಯಾಂಡಲ್ ಕಾಡು ಎಸ್ಟೇಟ್ ನಲ್ಲಿ ಮೂರು ದಶಕಗಳ ಕಾಲ ರೈಟರ್ ಆಗಿ ಕಾಯ೯ನಿವ೯ಹಿಸಿದ್ದರು. ಆ ತೋಟದ ಮಾಲೀಕರಾಗಿದ್ದ ಎಸ್.ಎಂ. ಸಯ್ಯದ್ ತನ್ನನ್ನು ಓದಲು ಪ್ರೇರೇಪಿಸಿ ಆಥಿ೯ಕ ನೆರವನ್ನು ನೀಡಿದ್ದರು. ಎಷ್ಟು ಬೇಕಾದರೂ ಓದು. ನಾನು ಆಥಿ೯ಕವಾಗಿ ನೆರವಾಗುತ್ತೇನೆ ಎಂದು ಎಸ್.ಎಂ. ಸಯ್ಯದ್,ಎಸ್.ಎಂ. ಯಾಹ್ಯಾ ಸಹೋದರರು ಪ್ರೋತ್ಸಾಹಿಸಿದ್ದರು ಅವರ ಎಸ್ಟೇಟ್ ನಲ್ಲಿ ಕೆಲಸ ಮಾಡುತ್ತಿದ್ದವರ ಮಕ್ಕಳನ್ನೆಲ್ಲಾ ಅವರೇ ಆಥಿ೯ಕ ನೆರವು ನೀಡಿ ಓದಿಸುತ್ತಿದ್ದರು. ಹೀಗಾಗಿ ಸುಂಟಿಕೊಪ್ಪದಲ್ಲಿ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆಯಾಗಲಿಲ್ಲ. ನಂತರ ತಂದೆ ಜತೆ ಕೊಯನಾಡಿಗೆ ತೆರಳಿ ಅಲ್ಲಿಯೂ ಶಿಕ್ಷಣ ಪಡೆದೆ. ಸುಂಟಿಕೊಪ್ಪದಲ್ಲಿಯೇ ತನ್ನ ತಾಯಿ ಫಾತಿಮ ಇಂದಿಗೂ ವಾಸವಾಗಿದ್ದಾರೆ. ಕೊಡಗಿನ ಅನೇಕ ಪ್ರದೇಶಗಳಂತೆ ನಾನು ಆಡಿ ಬೆಳೆದ ಸುಂಟಿಕೊಪ್ಪದ ಬಗ್ಗೆ ಅನೇಕ ಸುಮಧುರ ನೆನಪುಗಳಿವೆ. ಎಲ್ಲಕ್ಕಿಂತ ಮುಖ್ಯವಾಗಿ ತಾನು ಬಾಲ್ಯ ಕಳೆದ ತೋಟ ಹಾಗೂ ತಂದೆಯವರ ಮೈದಾನಿ ( ಅಂತ್ಯಕ್ರಿಯೆ ಮಾಡಿದ ಸ್ಥಳ) ಇರುವ ಗದ್ದೆಹಳ್ಳ ಬಳಿಯ ಸಭಾಂಗಣದಲ್ಲಿಯೇ ಆಯೋಜಿತ ಸಮ್ಮೇಳನದಲ್ಲಿ ಅಧ್ಯಕ್ಷನಾಗಿರುವುದು ಹೆಚ್ಚು ಸಂತೋಷ ತಂದಿದೆ. ನಾನು ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿರುವುದು ತನಗಿಂತ ಹೆಚ್ಚಾಗಿ ಸುಂಟಿಕೊಪ್ಪದ ಜನರಿಗೆ ಸಂಭ್ರಮ ತಂದಿರುವುದು ಖುಷಿ ತಂದಿದೆ
ಕೊಡಗಿನ ಸಾಹಿತ್ಯ ಲೋಕಕ್ಕೆ ಪಂಜೆ ಮಂಗೇಶರಾಯ, ಐ.ಮಾ ಮುತ್ತಣ್ಣ, ಬಿ.ಡಿ. ಗಣಪತಿ, ಕಾಕೆಮಾನಿ, ಡಿ.ಎನ್. ಕೖಷ್ಣಯ್ಯ, ಭಾರತೀಸುತ, ಸಿ.ಪಿ. ಬೆಳ್ಯಪ್ಪ, ಬಾಚರಣಿಯಂಡ ಅಪ್ಪಣ್ಣ, ಕೊಡಗಿನ ಗೌರಮ್ಮ, ಕಾವೇರಿ ನಂಬಿಷನ್ ಮತ್ತಿತರರ ಕೊಡುಗೆ ಮಹತ್ವದ್ದಾಗಿದೆ. ನಾನೀಗ ಹೊಸಕಾಲಘಟ್ಟದ ಲೇಖಕರ ಪ್ರತಿನಿಧಿಯಾಗಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೇನೆ.
ಬರವಣಿಗೆಗೆ ಅಜ್ಜ, ಅಪ್ಪನ ಪ್ರಬಾವ ಹೆಚ್ಚಾಗಿತ್ತಲ್ಲವೇ?
ನನ್ನ ಅಜ್ಜ ಮಲಯಾಳಿ ಮಾತೖಭಾಷೆಯವರಾಗಿದ್ದರೂ ಎಂದಿಗೂ ಮನೆಯಲ್ಲಿ ಮಲಯಾಳಕ್ಕೆ ಆದ್ಯತೆ ನೀಡಿದವರಲ್ಲ ಬದಲಿಗೆ ಅಜ್ಜ, ಅಪ್ಪ ಎಲ್ಲರೂ ಕನ್ನಡಕ್ಕೇ ಮಹತ್ವ ನೀಡಿದವರು. ಹೀಗಾಗಿ ಮಲಯಾಳ ಮಾತೖಭಾಷೆಯಾಗಿದ್ದರೂ ಕನ್ನಡವೇ ನಮ್ಮ ಮನೆಗಳಲ್ಲಿ ಕೇಳಿಬರುತ್ತಿತ್ತು. ಅಪ್ಪ ದಿನವೂ ಕೆಲಸದಿಂದ ಮನೆಗೆ ಮರಳುವಾಗ ಕನ್ನಡದ ಪತ್ರಿಕೆ, , ಪುಸ್ತಕಗಳನ್ನು ತರುತ್ತಿದ್ದರು. ಮನೆಯಲ್ಲಿ ಮಕ್ಕಳು ಗಲಾಟೆ ಮಾಡುತ್ತಿದ್ದರೆ ಹೋಗಿ ಲೈಬ್ರರಿಯಲ್ಲಿ ಓದಿಕೊಂಡು ಬನ್ನಿ ಎಂದು ಕಳುಹಿಸುತ್ತಿದ್ದರು. ಹಿರಿಯರಂತೆ ಶಿಕ್ಷಕರೂ ಅಗಾಧ ಪ್ರಬಾವ ಬೀರಿದರು. ಕೊಯನಾಡು ಶಾಲೆಯಲ್ಲಿದ್ದಾಗ ಅಲ್ಲಿನ ಶಿಕ್ಷಕರಾಗಿದ್ದ ಟಿ.ಕೆ.ಜೆ.ಭಟ್ ಸಾಕಷ್ಟು ಸಾಹಿತ್ಯ ಕತಿಗಳನ್ನು ಓದುವಂತೆ ಪ್ರೇರೇಪಿಸಿದ್ದರು. ಯಕ್ಷಗಾನ, ತಾಳಮದ್ದಲೆ ನೋಡಿ ಸಾಂಸ್ಕೖತಿಕ ಲೋಕದತ್ತ ಆಕಷಿ೯ತನಾದೆ. ಮಾದಾಪುರದ ಶ್ರೀಮತಿ ಡಿ.ಚೆನ್ನಮ್ಮ ಕಾಲೇಜಿನಲ್ಲಿ ಪಿಯು ಕಲಿಯವಾಗ ಶ್ರೀಧರ ಆರಾಧ್ಯ ನನ್ನನ್ನು ಬಹಳಷ್ಟು ಪ್ರೋತ್ಸಾಹಿಸಿದ್ದರು. ಆ ಕಾಲೇಜಿನ ಲೈಬ್ರರಿಯಲ್ಲಿದ್ದ ನೂರಾರು ಪುಸ್ತಕಗಳು ಕೂಡ ನನ್ನ ಬರವಣಿಗೆಗೆ ಪ್ರೇರಣೆಯಾದವು. ಆರಾಧ್ಯರು ಪ್ರತೀ ಶನಿವಾರ ಮಧ್ಯಾಹ್ನ ನಡೆಸಿಕೊಡುತ್ತಿದ್ದ ಸಾಹಿತ್ಯದ ತರಗತಿಗಳನ್ನು ಇಂದಿಗೂ ಮರೆಯಲಾರೆ.
ನಿಮ್ಮನ್ನು ಹೆಚ್ಚು ಪ್ರಬಾವಿತರನ್ನಾಗಿಸಿದ ಸಾಹಿತಿಗಳು?
ಕುವೆಂಪು, ದೇವನೂರ ಮಹದೇವ, ತೇಜಸ್ವಿ, ಅನಂತಮೂತಿ೯, ಪಿ.ಲಂಕೇಶ್, ಎಂ.ಕೆ. ಇಂದಿರಾ, ಎಂ.ವ್ಯಾಸ, ಕೆ.ಟಿ. ಗಟ್ಟಿ, ಯಶವಂತ ಚೆತ್ತಾಲ, ಮಲಯಾಳದ ಖ್ಯಾತ ಲೇಖಕ ವೈಕಂ ಮಹಮ್ಮದ್ ಬಷೀರ್ ತನ್ನ ಸಾಹಿತ್ಯದ ಮೇಲೆ ಪ್ರಬಾವ ಬೀರಿದ ಲೇಖಕರಾಗಿದ್ದಾರೆ
ಯುವಪೀಳಿಗೆ ಹೆಚ್ಚು ಸಾಹಿತ್ಯ ಓದುತ್ತಿಲ್ಲ ಎಂಬ ದೂರಿದೆ. ?
ಯುವಪೀಳಿಗೆ ಸಾಹಿತ್ಯ ಪ್ರಕಾರಗಳನ್ನು ಓದುತ್ತಿಲ್ಲ ಎಂಬ ವಾದ ಒಪ್ಪಲಾರೆ ಫೇಸ್ ಬುಕ್, ರೀಲ್ಸ್ , ಪೋಡ್ ಕಾಸ್ಟ್, ಮಂತಾದ ನಾನಾ, ಆಧುನೀಕತೆಯ ನಾಗಾಲೋಟದಲ್ಲಿ ಸಾಹಿತ್ಯ ಓದಲು ಹಲವಾರು ಮಾದ್ಯಮಗಳಿದೆ. ಇದನ್ನು ಬಳಸಿಕೊಂಡವರು ಸಾಹಿತ್ಯವನ್ನು ತಮಗೆ ನಿಲುಕುವ ಮಾಧ್ಯಮಗಳ ಮೂಲಕ ಆಸಕ್ತರು ಓದುತ್ತಿದ್ದಾರೆ. ಸಾಹಿತ್ಯಕ್ಕೆ ಸಂಬಂಧಿಸಿದಂತೆ ಕಾಲಹಾಳಾಗಿದೆ ಎಂದು ಖಂಡಿತಾ ಹೇಳಲಾಗದು. ಜನರು ಓದುವ ಮಾಧ್ಯಮ ಬದಲಾಗಿದೆ ಎಂಬುದು ವಾಸ್ತವ. ಪುಸ್ತಕದ ಬದಲಿಗೆ ಡಿಜಿಟಲ್ ಮಾಧ್ಯಮದ ಮೂಲಕ ಎಲ್ಲಾ ವಿಚಾರಗಳನ್ನೂ ಸಾಹಿತ್ಯ ಸೇರಿಕೊಂಡಂತೆ ಓದುವ ಪ್ರವೖತ್ತಿ ಹೆಚ್ಚಾಗುತ್ತಿದೆ. ಲೇಖಕರಿಗೆ ಹೊಸ ವಿಚಾರಗಳು ಇಂದಿನ ಕಾಲಘಟ್ಟದಲ್ಲಿ ಸಾಕಷ್ಟು ಲಭ್ಯವಿದೆ. ಆದರೆ ಮತ್ತೋವ೯ ಲೇಖಕನ ಶೈಲಿಯನ್ನು ಅನುಕರಿಸಲು ಹೋಗದೆ ತನ್ನದೇ ಶೈಲಿಯಲ್ಲಿ ಬರೆಯುವ ಹವ್ಯಾಸವನ್ನೂ ಪ್ರತೀ ಹೊಸ ಲೇಖಕನೂ ರೂಡಿಸಿಕೊಂಡಾಗ ಆತನ ಸಾಹಿತ್ಯ ಶೈಲಿ ಬಹುಕಾಲ ಬಾಳಿಕೆಯಾಗುತ್ತದೆ
ಮೊದಲು ಬರೆದ ಕಥೆಗಳ ನೆನಪಿದೆಯೇ?
ಮಡಿಕೇರಿಯ ಶಕ್ತಿ ಪತ್ರಿಕೆಯಲ್ಲಿ ಮೇಣದ ಬತ್ತಿ ಎಂಬ ನನ್ನ ಮೊದಲ ಕವಿತೆ ಪ್ರಕಟವಾಗಿತ್ತು. ನಾನಾಗ 9 ನೇ ತರಗತಿಯಲ್ಲಿದ್ದೆ. ಶಕ್ತಿಯಲ್ಲಿಯೇ ನನ್ನ ಮೊದಲ ಕಥೆ ಪ್ರಕಟವಾಯಿತು.. ಆಮೇಲೆ ತುಷಾರ ಪತ್ರಿಕೆಯಲ್ಲಿ ಮೂಸಾ ಮೊಯಿಲಿಯವರ ಮುದ್ದಿನ ಮಗಳು.. ಎಲಿವೇಟರ್ ಎಂಬ ದುಷ್ಯ ಜಂತು ಕಥೆ ಪ್ರಕಟವಾಗಿ ರಾಜ್ಯ ವ್ಯಾಪಿ ಹೆಸರು ಮಾಡಿತ್ತು. ಆಕೆಯ ಹೆಸರೇ ಅನೇಕರ ಗಮನ ಸೆಳೆದಿತ್ತು.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ವಾಷಿ೯ಕ ಕಥಾ ಸ್ಪಧೆ೯ಯಲ್ಲಿ ಸತತ 6 ವಷ೯ಗಳೂ ಪ್ರಥಮ ಬಹುಮಾನ ಪಡೆದ ದಾಖಲೆ ಮಾಡಿದ್ದೆ. ಅದೊಂದು ಸ್ಪಧೆ೯ಯಲ್ಲಿ ನನ್ನ ಉಪನ್ಯಾಸಕರಿಗೆ ಸಮಧಾನಕರ ಬಹುಮಾನ ಬಂದಿದ್ದರೆ ಅವರ ಶಿಷ್ಯನಾದ ನಂಗೆ ಪ್ರಥಮ ಬಹುಮಾನ ಬಂದಿತ್ತು. ಒಂದೇ ವೇದಿಕೆಯಲ್ಲಿ ಗುರು, ಶಿಷ್ಯರು ಪ್ರೈಜ್ ಪಡೆದ ನೆನಪಿದೆ. ! ಸುಧಾ, ಕಸ್ತೂರಿ, ಮಯೂರ ಪತ್ರಿಕೆಗಳು ನನ್ನ ಪ್ರಾರಂಭಿಕ ಕಥೆ, ಕವನಗಳ ಪ್ರಕಟಿಸಿ ಪ್ರೋತ್ಸಾಹ ನೀಡಿದ್ದವು. ಹಿರಿಯರಾದ ಈಶ್ರರಯ್ಯ, ಆಗ ತುಷಾರದ ಸಂಪಾದಕರಾಗಿದ್ದ ಸಂದಭ೯ ನನ್ನ ಕಥೆ ಪ್ರಕಟಿಸಿದ್ದಲ್ಲದೇ ಇಷ್ಟುದ್ದ ಪತ್ರ ಬರೆದು ನನನ್ನು ಅಭಿನಂದಿಸಿ ಪ್ರೋತ್ಸಾಹ ನೀಡಿದ್ದನ್ನು ಮರೆಯಲಾರೆ. ಬಂಡಾಯ ಶೈಲಿಯ ಕಥೆ, ಕವನಗಳನ್ನೇ ಆಗೆಲ್ಲಾ ಹೆಚ್ಚಾಗಿ ಬರೆಯುತ್ತಿದ್ದೆ.
ಹಾಲು ಕುಡಿದ ಹುಡುಗ ಕೖತಿಯ ಮೂಲಕ ನೀವು ಇಂದಿಗೂ ಜನಪ್ರಿಯರು….
22 ನೇ ವಯಸ್ಸಿನಲ್ಲಿಯೇ ತಾನು ಬರೆದ ಹಾಲುಕುಡಿದ ಹುಡುಗ ಎಂಬ ಸಣ್ಣ ಕಥೆ ರಾಜ್ಯಮಟ್ಟದ ಕಥಾ ಸ್ಪಧೆ೯ಯಲ್ಲಿ ಬಹುಮಾನ ಪಡೆದಾಗ ಅನೇಕ ಲೇಖಕರು ಶ್ಲಾಘಿಸಿದ್ದರು. ಇದನ್ನೇ ಪ್ರೋತ್ಸಾಹವಾಗಿಸಿಕೊಂಡು ಈವರೆಗೆ 6 ಕಥಾಸಂಕಲನಗಳು, 2 ಕವನ ಸಂಕಲನ, 6 ಅಂಕಣ ಬರಹಗಳೂ ಸೇರಿದಂತೆ ನಾನಾ ಕೖತಿಗಳನ್ನು ಪ್ರಕಟಿಸಿದ್ದೇನೆ. ಹಾಲು ಕುಡಿದ ಹುಡುಗ ಕಥೆಯ ಹಿರೋ ನಾನೇ ಅಂಥ ಅನೇಕರ ಭಾವನೆ. ಇರಲೂ ಬಹುದು!!!1 ಆದರೆ ಆ ಕಥೆ ಓದಿದ ಇಸ್ಮಾಯಿಲ್ ಅಂದ್ರೆ ನನ್ನಪ್ಪ ಮಗ ಸಂಪೂಣ೯ ಪೋಲಿಬಿದ್ದಿದ್ದಾನೆ. ಹೀಗ ಬಿಟ್ಟರೆ ಹಾಳಾಗಿಬಿಡುತ್ತಾನೆ ಎಂದು ಬೇಸರಗೊಂಡಿದ್ದರು. ಸಿಟ್ಟುಗೊಂಡಿದ್ದರು. ಆದರೆ ಅದೇ ಕಥೆಯ ಮೂಲ ಅವರ ಮಗ ರಾಜ್ಯವ್ಯಾಪಿ ಫೇಮಸ್ ಆಗಿಬಿಟ್ಟ. ಅದೇ ಕಥೆ ಶತಮಾನದ ಸಣ್ಣ ಕಥೆಯಾಗಿಯೂ ಆಯ್ಕೆಯಾಯಿತು. ಎಂಥ ವಿಶೇಷ.. ವಿಚಿತ್ರ ನೋಡಿ..!!
ಬರವಣಿಗೆ ತೖಪ್ತಿ, ಸಂತೋಷ ನೀಡಿದೆಯೇ?
ನನಗೀಗ 61 ವಷ೯. ಐದು ದಶಕಗಳ ಕಾಲ ಸಾಹಿತ್ಯ ಕೖಷಿಯಲ್ಲಿ ತೊಡಗಿಸಿಕೊಂಡಿದ್ದರೂ ಇಂದಿಗೂ ಸಾಹಿತ್ಯ ಲೋಕದ ಬಗ್ಗೆ ಇನ್ನೂ ಕುತೂಹಲ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸಾಹಿತ್ಯ ತೖಪ್ತಿ ಕೊಟ್ಟಿದೆ ಎಂದು ಹೇಳಲಾಗದು. ಇನ್ನೂ ಸಂತೋಷವನ್ನು ಅನುಭವಿಸುವುದು ಸಾಹಿತ್ಯದಲ್ಲಿ ಇದೆ ಎಂದೇ ನನ್ನ ಭಾವನೆ
ಸಾಹಿತ್ಯದ ಜತೆಜತೆಗೇ ಕೖಷಿಯಲ್ಲೂ ಸಾಧನೆ ಮಾಡುತ್ತಿದ್ದೀರಿ. ಹೇಗಿದೆ ಕೖಷಿಕನ ಜೀವನ .
ಹುಣಸೂರು ಬಳಿಯ ಬನ್ನಿಕುಪ್ಪೆಯಲ್ಲಿ 4 ಎಕ್ರೆ ಜಾಗದಲ್ಲಿ ಮಾವು, ಬಾಳೆ, ತೆಂಗಿನ ಕೖಷಿ ಸೇರಿದಂತೆ ವಿವಿಧ ಕೖಷಿ ಮೂಲಕ ಕೖಷಿಕನ ಜೀವನ ಕಂಡುಕೊಂಡಿದ್ದೇನೆ. ಈ ಹೊಸ ವೖತ್ತಿಯಲ್ಲಿಯೇ ಸಂಭ್ರಮ್ರ ಕಂಡುಕೊಂಡಿದ್ದೇನೆ. ಅಗತ್ಯವಿದ್ದಾಗ ಮಾತ್ರ ಸಿಟಿಗೆ ಹೋಗುತ್ತೇನೆ. ಉಳಿದಂತೆ ಈ ತಂಗಾಳಿಯ ಮಧ್ಯೆಯೇ ಜೀವನ.
ಬಿರಿಯಾನಿಗಾಗಿ ಪ್ರಾಥ೯ನೆ ಮಾಡಿದ್ದರ ಬಗ್ಗೆ ಹೇಳಿ..
ಹೆಸರಿನ ಮೂಲಕವಷ್ಟೇ ತನ್ನ ಧಮ೯ ಕಂಡುಹಿಡಿಯಬಹುದಾಗಿದ್ದು, ನಾನು ಯಾವುದೇ ಧಮ೯ದ ಅನುಯಾಯಿಯೂ ಅಲ್ಲ. ಬಾಲ್ಯದಲ್ಲಿ ಇಸ್ಮಾಯಿಲ್ ಅಪ್ಪ, ನಮಾಜ್ ಮಾಡು ಎಂದು ಸೂಚಿಸುತ್ತಿದ್ದಾಗ ತಪ್ಪಿಸಿಕೊಳ್ಳುತ್ತಿದ್ದೆ. ಕೊನೆಗೆ ಬಿರಿಯಾನಿ ಪರಿಮಳ ಬರುತ್ತಿರುವಾಗಲೇ ನಮಾಜ್ ಮಾಡಿದರೆ ಮಾತ್ರ ನಿಂಗೆ ಬಿರಿಯಾನಿ ಅನ್ನುತ್ತಿದ್ದರು. ಹೀಗಾಗಿ ಬಿರಿಯಾನಿ ಆಸೆಗೆ ಪ್ರಾಥ೯ನೆ ಮಾಡಿದ್ದು ಬಿಟ್ಟರೆ ಅನಂತರ ಅಂಥ ಧಾಮಿ೯ಕ ನಂಬಿಕಗಳಿಂದ ದೂರವಾಗಿಬಿಟ್ಟಿದ್ದೇನೆ. ಸುಂಟಿಕೊಪ್ಪದಲ್ಲಿ ರಾಮಮಂದಿರ, ಮುತ್ತಪ್ಪ ದೇವಾಲಯದ ಉತ್ಸವಗಳಿಗೂ ಹೋಗಿದ್ದೇನೆ. ಚಚ್೯ಗೂ ತೆರಳಿದ್ದೇನೆ ಎಲ್ಲಾ ಧಮ೯ವನ್ನೂ ಗೌರವಿಸುತ್ತಾ ಬಂದಿದ್ದೇನೆ ಅಲ್ಪಸಂಖ್ಯಾತ ಸಮುದಾಯದ ಲೇಖಕ ಎಂಬ ಹಣೆಪಟ್ಟಿ ಕಟ್ಟಿಕೊಂಡಿಲ್ಲ. ಈವರೆಗೂ ಸಾಹಿತಿ, ಕಥೆಗಾರ, ಲೇಖಕ ಅಂತೆಲ್ಲಾ ಯಾವುದೇ ಹುದ್ದೆಗೆ ಲಾಭಿ ಮಾಡಿಲ್ಲ. ಬದಲಿಗೆ, ಈ ರೀತಿ ಲಾಭಿ ಮಾಡುವವರ ಕಾಲೆಳೆದು ಗೇಲಿಮಾಡುತ್ತಾ ನಕ್ಕಿದ್ದೇನೆ.!
ಸಾಹಿತ್ಯ ಕೖಷಿಯಲ್ಲಿ ಮಡದಿ, ಮಕ್ಕಳ ಸಹಕಾರ?
ಕೇರಳ ಮೂಲದ ಪತ್ನಿ ಮೋಳಿ ವಗೀ೯ಸ್ ಳನ್ನು ಕಾಲೇಜಿನಲ್ಲಿದ್ದಾಗ ಪ್ರೀತಿಸಿದ್ದೆ ಆಕೆಯನ್ನೇ ಮದುವೆಯಾದೆ. ,ನಾವು ಇಂದಿಗೂ ಸ್ನೇಹಿತರಂತೆ ಗಲಾಟೆ ಮಾಡಿಕೊಂಡು ಜಗಳ ಮಾಡಿಕೊಂಡು ಸಂತೋಷವಾಗಿ ಬದುಕುತ್ತಿದ್ದೇವೆ. ಗಂಡ ಹಂಡತಿ ಎನ್ನುವುದಕ್ಕಿಂತ ಸ್ನೇಹಿತರಾಗಿಯೇ ಖುಷಿಯಿಂದ ಇದ್ದೇವೆ. ಈಗ ಮೋಳಿ ನನ್ನ ಕಥೆಗಳನ್ನು ಮಲಯಾಳಕ್ಕೆ ಅನುವಾದಿಸಿದ್ದು ಸದ್ಯದಲ್ಲಿಯೇ ಪ್ರಕಟವಾಗಲಿದೆ. ಮಗ ಅಖಿಲ್ ಜಮ೯ನಿಯಲ್ಲಿ ಎಂ.ಎಸ್ಸಿ ಮಾಡುತ್ತಿದ್ದರೆ. ಪುತ್ರಿ ಸಿರಿ ದೆಹಲಿಯ ಐಐಟಿಯಲ್ಲಿ ಸಂಶೋಧಕಿಯಾಗಿದ್ದಾಳೆ ನನ್ನ ಬರಹಗಳನ್ನು ಮನೆಮಂದಿ ಇಷ್ಟಪಟ್ಟಿದ್ದಾರೆ.
ಆಕಾಶವಾಣಿಯಲ್ಲಿ ಉದ್ಯೋಗ, ಅದಕ್ಕಿಂತ ಮೊದಲು ಕಾಲೇಜಿನಲ್ಲಿ ಉಪನ್ಯಾಸಕ ಕೂಡ ಆಗಿದ್ದೀರಿ ಅಲ್ವಾ?
ಅಯ್ಯೋ ಕಾಲೇಜಿನಲ್ಲಿ ಉಪನ್ಯಾಸಕನಾಗಿ 2 ತಿಂಗು ಕೆಲಸ ಮಾಡಿದ್ದೇ ದೊಡ್ಡ ಕೆಥೆ. ಮಡಿಕೇರಿಯ ಸೀನಿಯರ್ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಸಿಕ್ಕಿತ್ತು, ಎಂಥ ಗಲಾಟೆ ಹುಡುಗರು ಅಂದ್ರೆ, ಕ್ಸಾಸ್ ರೂಮ್ ಗೆ ಹೋದ್ರೆ ಅಲ್ಲಿ ಊದುಬತ್ತಿಗೆ ಪಟಾಕಿ ಸಿಕ್ಕಿಸಿ ಅದನ್ನು ಹೊಟ್ಟಿಸಿ ಹೆದರಿಸುತ್ತಿದ್ದರು. ಈ ರೀತಿ ಪಟಾಕಿ ಯಾವಾಗ ಸಿಡಿಯುತ್ತೋ ಎಂಬ ಭಯದಲ್ಲಿಯೇ ಕೆಲಸ ಬೇಡವೇ ಬೇಡ ಎಂದು ಕೆಲಸಕ್ಕೆ ರಾಜೀನಾಮೆ ನೀಡಿದೆ. ಆಮೇಲೆ 1984 ರಲ್ಲಿ ಆಕಾಶವಾಣಿಯಲ್ಲಿ ಕೆಲಸ ಸಿಕ್ಕಿತು. ಮಂಗಳೂರು, ಮೈಸೂರು, ಶಿಲ್ಲಾಂಗ್, ಲಕ್ಷ್ಮದ್ವೀಪ, ಮಡಿಕೇರಿ ಕೇಂದ್ರಗಳಲ್ಲಿ ಕೆಲಸ ಮಾಡಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಕಾಯ೯ನಿವ೯ಹಿಸಿದ್ದ 6 ವಷ೯ಗಳಲ್ಲಿ ಕಾವೇರಿ ಎಕ್ಸ್ ಪ್ರೆಸ್, ಹಳ್ಳಿ ರೆಡಿಯೋ, ಗಿರಿಜನ ಸಂಗೀತ ಸಭಾ, ಕಾಡಿನ ಮಕ್ಕಳ ರೆಡಿಯೋ ಹಬ್ಬ ಸೇರಿದಂತೆ ವಿವಿಧ ವಿನೂತನ ಕಾಯ೯ಕ್ರಮಗಳನ್ನು ರೂಪಿಸಿದೆ. 36 ವಷ೯ಗಳ ಬಾನುಲಿ ಜೀವನದಲ್ಲಿ ಮಡಿಕೇರಿ ಎಫ್ ಎಂ ಕೇಂದ್ರದಲ್ಲಿ ಹೊಸ ರೀತಿಯ ಕಾಯ೯ಕ್ರಮಗಳನ್ನು ರೂಪಿಸಿದ್ದು ಬಹಳ ಸಂತೋಷ ನೀಡಿದೆ.
ಸ್ಟಾಂಪ್ ಕಲೆಕ್ಷನ್ ಕೂಡ ಮಾಡಿದ ಅನುಭವ?
ಅದು ಎಂದೆಂದೂ ಮರೆಯಲಾಗದ ಬೇಸರದ ಅನುಭವ. ಸಿಕ್ಕಾಪಟ್ಟೆ ಕಷ್ಟಪಟ್ಟು ಅಮೂಲ್ಯವಾದ ಸ್ಟಾಂಪ್ ಗಳನ್ನು ಸಂಗ್ರಹಿಸಿದ್ದೆ. ಜೋಪಾನವಾಗಿ ಇರಿಸಿದ್ದೆ ಕೂಡ. ಅದೊಂದು ದಿನ ನಾನು ಮನೆಯಲ್ಲಿ ಇಲ್ಲದಿರುವಾಗ ಪಕ್ಕದ ಮನೆಯ ಶ್ರೀಮಂತ ಹುಡುಗನೋವ೯ ಬಂದು ಅಮ್ಮನ್ನನ್ನು ಸ್ಟಾಂಪ್ ಗಳನ್ನೆಲ್ಲಾ ಕೊಡಿ ಎಂದು ಕೇಳಿದ. ಶ್ರೀಮಂತರ ಮನೆ ಹುಡುಗ ಎಂದು ಮುಲಾಜಿನಿಂದ ನನ್ನ ಅಮ್ಮ ಎಲ್ಲಾ ಸ್ಟಾಂಪ್ ತೆಗೆದು ಅವನಿಗೆ ಕೊಟ್ಟೇ ಬಿಟ್ಟಳು. ಕೆಲವೇ ದಿನಗಳಲ್ಲಿ ಆ ಸ್ಟಾಂಪ್ ಗಳನ್ನು ಆ ಹುಡುಗ ಎಸೆದೇ ಬಿಟ್ಟಿದ್ದ. ನಾನು ಮನೆಗೆ ಬಂದು ಸ್ಟಾಂಪ್ ಇಲ್ಲದಿರುವುದನ್ನು ಕಂಡು ಅತ್ತೇ ಬಿಟ್ಟಿದ್ದೆ. ಅದೇ ಬೇಸರದಲ್ಲಿ ಬರೆದ ಕವನಕ್ಕೆ ಆಮೇಲೆ ಪ್ರೈಜ್ ಕೂಡ ಬಂತು. ಆಗ ಸಂತೋಷವಾದರೂ, ಬೇಸರವಾದರೂ ಕವನ, ಕಥೆ ಅಂಥ ಬರೆದು ಮನಸ್ಸಿನ ಭಾವನೆ ಹೊರಹಾಕುತ್ತಿದ್ದೆ. ! ಈಗಲೂ ಸ್ಟಾಂಪ್ ನೋಡಿದಾಗಲೆಲ್ಲಾ ಹಳೇ ನೆನಪು ಮರುಕಳಿಸುತ್ತೆ.
ಇಂಥ ಹಲವಾರು ನೆನಪುಗಳೊಂದಿಗೆ ನ್ನ ಚಂದದ ಫಾಮ್೯ನಲ್ಲಿ ಕೈಯಾರೆ ಬಳೆದ ಮಾವು, ಬಾಳೆ, ಅಡಕೆ, ಜತೆಗೆ ಕೋಳಿಗಳು, ಬಾತುಗಳು, ಬೆಕ್ಕುಗಳ ಜತೆ ಹಾಯಾಗಿರುವ, ಹಸಿರ ಬನದಲ್ಲಿ ತಂಪಾಗಿ ಹಾಲಲ್ಲಿ ಮಾಡಿದ ಟೀ ಸೇವಿಸಿಕೊಂಡು ಹೊಟ್ಟೆ ಕಿಚ್ಚಿಗೆ ಕಾರಣವಾಗುವಂತೆ ಜೀವಿಸುತ್ತಿರುವ ಸುಂಟಿಕೊಪ್ಪದ ಹುಡುಗ ರಶೀದ್ ಗೆ ವಿದಾಯ ಹೇಳಿ ಹೊರಟೆವು. ನಾಡಿದ್ದು ಶುಕ್ರವಾರ, ಶನಿವಾರ ಸುಂಟಿಕೊಪ್ಪದಲ್ಲಿ ಕನ್ನಡಮ್ಮನ ಹಬ್ಬ.
ರಶೀದ್ ಅಲ್ಲಿಯೂ ಸಂಭ್ರಮದಿಂದ ಕಾಣಸಿಗುತ್ತಾರೆ. ನೀವೂ ಬನ್ನಿ.. ಭೇಟಿಯಾಗೋಣ. 🙏🙏🙏🙏🙏





