ಬೆಂಗಳೂರು/ ಮಡಿಕೇರಿ ಜೂ.01: ಭಾರತದ ಸುಪ್ರೀಂ ಕೋರ್ಟ್‌ಗೆ ಐದು ಹೊಸ ನ್ಯಾಯಾಧೀಶರನ್ನು ನೇಮಕ ಮಾಡಲು ಗೌರವಾನ್ವಿತ ರಾಷ್ಟ್ರಪತಿಗಳು ಅನುಮೋದನೆ ನೀಡಿದ್ದಾರೆ ಈ ಕುರಿತಾಗಿ ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಜಗನ್ನಾಥ್ ಶ್ರೀನಿವಾಸನ್ ಅವರು ಇಂದು ಜೂನ್ 1, 2026ರಂದು ಅಧಿಕೃತ ಅಧಿಸೂಚನೆ ಹೊರಡಿಸಿದ್ದಾರೆ.
ಭಾರತದ ಸಂವಿಧಾನದ ವಿಧಿ 124 ರ ಉಪವಿಧಿ (2) ರ ಅಡಿಯಲ್ಲಿ ತಮಗೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ರಾಷ್ಟ್ರಪತಿಗಳು ಈ ನೇಮಕಾತಿ ಆದೇಶವನ್ನು ಹೊರಡಿಸಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಂಡ ವಿವರಗಳು ಈ ಕೆಳಗಿನಂತಿವೆ:
ನ್ಯಾಯಮೂರ್ತಿ ಶೀಲ್ ನಾಗು, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಮೂರ್ತಿ ಶ್ರೀ ಚಂದ್ರಶೇಖರ್: ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು. ನ್ಯಾಯಮೂರ್ತಿ ಸಂಜೀವ್ ಸಚ್‌ದೇವ: ಮಧ್ಯಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು. ನ್ಯಾಯಮೂರ್ತಿ ಅರುಣ್ ಪಲ್ಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು. ಹಾಗೂ ಶ್ರೀಮತಿ ವೆಂಕಿಟ ಸುಬ್ರಮಣಿ ಮೋಹನಾ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು (ಬಾರ್ ಕೌನ್ಸಿಲ್‌ನಿಂದ ನೇರ ನೇಮಕಾತಿ).
ಈ ನೇಮಕಾತಿಯಲ್ಲಿ ನಾಲ್ಕು ಪ್ರಮುಖ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಸುಪ್ರೀಂ ಕೋರ್ಟ್‌ಗೆ ಬಡ್ತಿ ನೀಡಲಾಗಿದ್ದರೆ, ಹಿರಿಯ ವಕೀಲರಾದ ಶ್ರೀಮತಿ ವೆಂಕಿಟ ಸುಬ್ರಮಣಿ ಮೋಹನಾ ಅವರನ್ನು ನೇರವಾಗಿ ವಕೀಲರ ಹುದ್ದೆಯಿಂದ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನಾಗಿ ನೇಮಕ ಮಾಡಿರುವುದು ಗಮನಾರ್ಹವಾಗಿದೆ.
ನೂತನ ನ್ಯಾಯಾಧೀಶರು ಅಧಿಕಾರ ಸ್ವೀಕರಿಸಿದ ದಿನಾಂಕದಿಂದ ಈ ನೇಮಕಾತಿ ಜಾರಿಗೆ ಬರಲಿದ್ದು, ಇದರಿಂದಾಗಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ಕೊರತೆ ಕಡಿಮೆಯಾಗಲಿದ್ದು, ಬಾಕಿ ಇರುವ ಪ್ರಕರಣಗಳ ಶೀಘ್ರ ವಿಲೇವಾರಿಗೆ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ.




