ಮಾದಾಪುರ ಜೂ.21: ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬೂರು ಗ್ರಾಮದಲ್ಲಿ ನಿವೇಶನ ರಹಿತ ಬಡಕುಟುಂಬದವರು ನಿವೇಶನ ಮಂಜೂರಾತಿಗಾಗಿ ಕಳೆದ ಒಂದೂವರೆ ತಿಂಗಳಿನಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ, ಬರುವ ಜೂನ್ 25 ರಂದು ಸೋಮವಾರಪೇಟೆಯಲ್ಲಿರುವ ಶಾಸಕ ಡಾ. ಮಂತರ್ ಗೌಡ ಅವರ ಖಾಸಗಿ ನಿವಾಸದ ಮುಂದೆ ಉಪವಾಸ ಸತ್ಯಾಗ್ರಹ ಹಾಗೂ ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕುಂಬೂರು ನಿವೇಶನ ಹೋರಾಟ ವೇದಿಕೆಯ ಜಿಲ್ಲಾಧ್ಯಕ್ಷರಾದ ಕೆ. ಮೊಣ್ಣಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಕೊಡಗು ಜಿಲ್ಲಾಧಿಕಾರಿಗಳು, ತಹಸೀಲ್ದಾರರು ಹಾಗೂ ಶಾಸಕರ ಕಚೇರಿಗಳಿಗೆ ವೇದಿಕೆಯ ಪದಾಧಿಕಾರಿಗಳು ಈಗಾಗಲೇ ಭೇಟಿ ನೀಡಿ ಪ್ರತಿಭಟನೆಯ ಹಮ್ಮಿಕೊಳ್ಳುವ ಕುರಿತಾಗಿ ಲಿಖಿತ ಮನವಿ ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.


ಕುಶಾಲನಗರ ಹಾಗೂ ಸೋಮವಾರಪೇಟೆ ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಮಾದಾಪುರ ಗ್ರಾಮ ಪಂಚಾಯಿತಿಯ ಕುಂಬೂರು ಗ್ರಾಮದ ಸರ್ವೆ ನಂ. 22/1-2 ರ ಸರ್ಕಾರಿ ಜಾಗದಲ್ಲಿ ಕಳೆದ ಮೇ 2ನೇ ತಾರೀಖಿನಿಂದಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸೇರಿದಂತೆ ಇನ್ನಿತರ ಎಲ್ಲಾ ವರ್ಗದ ವಸತಿ ರಹಿತ ಬಡ ಕುಟುಂಬಗಳು ನಿವೇಶನಕ್ಕಾಗಿ ಅಹೋರಾತ್ರಿ ಹೋರಾಟ ನಡೆಸುತ್ತಿದ್ದು, ವೃದ್ಧರು, ಮಹಿಳೆಯರು ಹಾಗೂ ಸಣ್ಣ ಸಣ್ಣ ಮಕ್ಕಳೊಂದಿಗೆ ಸುಡುವ ಬಿಸಿಲು, ಮಳೆಯನ್ನು ಲೆಕ್ಕಿಸದೆ ಬಡವರು ಧರಣಿ ಕುಳಿತಿದ್ದರೂ,ಕೊಡಗು ಜಿಲ್ಲಾಡಳಿತವಾಗಲಿ ಅಥವಾ ಸ್ಥಳೀಯ ಶಾಸಕರಾಗಲಿ ಹೋರಾಟದ ಸ್ಥಳಕ್ಕೆ ಕನಿಷ್ಠ ಸೌಜನ್ಯಕ್ಕಾದರು ಖುದ್ದಾಗಿ ಭೇಟಿ ನೀಡಿ ಬಡವರ ಸಮಸ್ಯೆಯನ್ನು ಆಲಿಸದೆ ಕಡೆಗಣಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದು ಪ್ರಕಟಣೆಯಲ್ಲಿ ವೇದಿಕೆಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಜೂನ್ 25ರ ಒಳಗೆ ಶಾಸಕರು ಅಥವಾ ಅಧಿಕಾರಿಗಳು ಧರಣಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಬೇಡಿಕೆಯ ಕುರಿತಾಗಿ ಅಗತ್ಯವಾದ ಸಲಹೆ ಸೂಚನೆ ನೀಡದಿದ್ದರೆ, ಜಿಲ್ಲಾಡಳಿತದ ಈ ಉದಾಸೀನ ಹಾಗೂ ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿ, ಜೂನ್ 25 ರಂದು ಬೆಳಿಗ್ಗೆ 10:30 ಗಂಟೆಗೆ ಮಾದಾಪುರ ಟೌನ್‌ನಿಂದ 150 ಕುಟುಂಬದ ಸುಮಾರು 600 ಜನರು ಕಾಲ್ನಡಿಗೆಯಲ್ಲಿ ಜಾಥಾ ನಡೆಸಿ ಶಾಸಕರ ನಿವಾಸದ ಮುಂದೆ ಅಹೋರಾತ್ರಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ವೇದಿಕೆಯ ಪ್ರಮುಖರಾದ ಕೆ. ಮೊಣ್ಣಪ್ಪ ಈ ಮೂಲಕ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.




