ಮಡಿಕೇರಿ, ಜೂ.6: ನಗರದ ರೈಫಲ್ ರೇಂಜ್ ವ್ಯಾಪ್ತಿಯ ಪೊಲೀಸ್ ವಸತಿ ಗೃಹದ ಬಳಿ ಪ್ರಧಾನ ಮಂತ್ರಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ರಸ್ತೆಯ ಮಧ್ಯೆ ತೋಡಲಾಗಿದ್ದ ಗುಂಡಿಗಳನ್ನು ನಗರಸಭೆ ಅಧ್ಯಕ್ಷೆ ಕಲಾವತಿ ಅವರು ಖುದ್ದು ನಿಂತು ಮುಚ್ಚಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕಾಮಗಾರಿಗಾಗಿ ತೋಡಲಾಗಿದ್ದ ಈ ಗುಂಡಿಗಳಿಂದಾಗಿ ಕಳೆದ ಮೂರು ತಿಂಗಳಿಂದ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು. ಈ ಕುರಿತು ಸ್ಥಳೀಯರು ನಗರಸಭೆ ಅಧ್ಯಕ್ಷರ ಗಮನ ಸೆಳೆದ ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಸಂಬಂಧಪಟ್ಟ ಇಲಾಖೆಯವರನ್ನು ಸ್ಥಳಕ್ಕೆ ಕರೆಸಿ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಿಕೊಟ್ಟರು. ಅಧ್ಯಕ್ಷರ ಈ ಕ್ಷಿಪ್ರ ಕಾರ್ಯವೈಖರಿಗೆ ಈ ಭಾಗದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.




