ಕುಶಾಲನಗರ ಜೂ.24: ಇಲ್ಲಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆ ತೀವ್ರ ಅವ್ಯವಸ್ಥೆಯಿಂದ ಕೂಡಿದ್ದು, ಬಡ ರೋಗಿಗಳು ಪರದಾಡುತ್ತಿದ್ದಾರೆ. ಇದನ್ನು ಖಂಡಿಸಿ ಕರವೇ ಸ್ವಾಭಿಮಾನಿ ಬಣ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿ ಮುಖಂಡರು ಕೊಡಗು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ (DHO) ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಡಿಎಚ್‌ಒ ಅವರು ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂಘಟನೆಯ ಮುಖಂಡರು ಅಧಿಕಾರಿಗಳನ್ನು ವಾರ್ಡ್‌ಗಳಿಗೆ ಕರೆದೊಯ್ದು ರೋಗಿಗಳ ತೊಂದರೆಯನ್ನು ಖುದ್ದಾಗಿ ತೋರಿಸಿದರು.
ಆಸ್ಪತ್ರೆಯ ಫಾರ್ಮಸಿಯಲ್ಲಿ ಅಗತ್ಯ ಮಾತ್ರೆಗಳು ಸಿಗುತ್ತಿಲ್ಲ ಮತ್ತು ಸಿಬ್ಬಂದಿ ಹೊರಗಡೆ ಕೊಳ್ಳುವಂತೆ ಉಡಾಫೆಯಾಗಿ ಉತ್ತರಿಸುತ್ತಿದ್ದಾರೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್‌ಗಳಲ್ಲಿನ ಹಾಸಿಗೆಗಳು ಹದಗೆಟ್ಟಿದ್ದು, ಬೆಡ್‌ಶೀಟ್‌ಗಳು ಹರಿದು ಹೋಗಿವೆ. ಕೊಠಡಿ ಹಾಗೂ ಶೌಚಾಲಯಗಳು ಸ್ವಚ್ಛವಾಗಿಲ್ಲದೆ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಈ ಎಲ್ಲ ಸಮಸ್ಯೆಗಳನ್ನು ಕಂಡು ಅಧಿಕಾರಿಗಳೇ ಆಶ್ಚರ್ಯ ವ್ಯಕ್ತಪಡಿಸಿದರು.

ಸಮಸ್ಯೆಗಳ ತೀವ್ರತೆಯನ್ನು ಒಪ್ಪಿಕೊಂಡ ಜಿಲ್ಲಾ ಆರೋಗ್ಯ ಅಧಿಕಾರಿಗಳು, ತಕ್ಷಣವೇ ಹೊಸ ಹಾಸಿಗೆ ಹಾಗೂ ಹೊದಿಕೆಗಳನ್ನು ವಿತರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಆಸ್ಪತ್ರೆಯ ಸ್ವಚ್ಛತೆ ಹಾಗೂ ಮಾತ್ರೆಗಳ ಕೊರತೆಯನ್ನು ತುರ್ತಾಗಿ ಸರಿಪಡಿಸಿ ಬಡ ರೋಗಿಗಳಿಗೆ ತೊಂದರೆಯಾಗದಂತೆ ಸುಧಾರಣೆ ತರುವುದಾಗಿ ಸ್ಥಳದಲ್ಲೇ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಫ್ರಾನ್ಸಿಸ್ ಡಿಸೋಜ, ರಾಜಶೇಖರ್ ಗೌಡ, ಚಂದ್ರು, ಜಯಶ್ರೀ ಮುರುಗೇಶ್ ಹಾಗೂ ಕೊಡಗು ಜನ ಅಭಿವೃದ್ಧಿ ಸಮಿತಿಯ ದಾವೂದ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಆಸ್ಪತ್ರೆಯ ಸ್ಥಿತಿ ಶೀಘ್ರದಲ್ಲಿ ಸುಧಾರಿಸದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಇದೆ ಸಂದರ್ಭ ಸಂಘಟನೆಗಳು ಎಚ್ಚರಿಸಿವೆ.




