ಕುಶಾಲನಗರ, ಜೂ. 24 : ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ 167 ವರ್ಷಗಳ ಸುದೀರ್ಘ ಇತಿಹಾಸವಿರುವ, 1848ರಲ್ಲಿ ಮೈಸೂರು ಕಮಿಷನರ್ ಮೇಜರ್ ಜನರಲ್ ಮಾರ್ಕ್ ಕಬ್ಬನ್ ಅವಧಿಯಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ‘ಪಾಳು ಬಿದ್ದ ಸೇತುವೆ ಈಗ ರೋಟರಿ ಕ್ಲಬ್ ಆಫ್ ಕುಶಾಲನಗರದ ದೃಢ ಸಂಕಲ್ಪದಿಂದ ಸುಂದರ ‘ಕಾವೇರಿ ರೋಟರಿ ಪಾರ್ಕ್’ ಆಗಿ ಮರುಜನ್ಮ ಪಡೆದಿದು ನಿನ್ನೆ ಸಂಜೆ (ಜೂನ್ 23) ಭವ್ಯವಾಗಿ ಲೋಕಾರ್ಪಣೆಗೊಂಡಿದೆ.

ರೋಟರಿ ಸಂಸ್ಥೆಯು 50 ವರ್ಷಗಳನ್ನು ಪೂರೈಸಿದ ಸುವರ್ಣ ಮಹೋತ್ಸವದ ನೆನಪಿಗಾಗಿ ಸಾರ್ವಜನಿಕರಿಗೆ ಈ ಅಪೂರ್ವ ಉಡುಗೊರೆಯನ್ನು ನೀಡಿದೆ. ಒಂದು ಕಾಲದಲ್ಲಿ ಕಸದ ರಾಶಿ, ಅನೈತಿಕ ಚಟುವಟಿಕೆಗಳು ಹಾಗೂ ಕುಡುಕರ ಅಡ್ಡೆಯಾಗಿ ಸಾರ್ವಜನಿಕರ ಓಡಾಟಕ್ಕೆ ಅಯೋಗ್ಯವಾಗಿದ್ದ ಈ ತಾಣವನ್ನು ಪುನಶ್ಚೇತನಗೊಳಿಸಲು ರೋಟರಿ ಕ್ಲಬ್ ಅಧ್ಯಕ್ಷರಾದ ಮಾಳೆಯಂಡ ಮನು ಪೆಮ್ಮಯ್ಯ ಅವರ ನೇತೃತ್ವದಲ್ಲಿ ಎಲ್ಲಾ ರೋಟರಿ ಸದಸ್ಯರುಗಳು ಕಳೆದ ಆರು ತಿಂಗಳ ಕಾಲ ಹಗಲಿರುಳು ಶ್ರಮಿಸಿದ್ದರು.
ಪ್ರಸ್ತುತ ಸುಮಾರು 8000 ಚದರ ಅಡಿ ಪ್ರದೇಶದಲ್ಲಿ ಅತ್ಯಾಧುನಿಕ ಟೈಲ್ಸ್, 800 ಅಡಿ ಉದ್ದದ ಸುರಕ್ಷತಾ ಗ್ರಿಲ್, ಹಸಿರು ಬಳ್ಳಿಗಳ 8 ಸುಂದರ ಕಮಾನುಗಳು, 150ಕ್ಕೂ ಹೆಚ್ಚು ಅಲಂಕಾರಿಕ ಸಸ್ಯಗಳು, 20ಕ್ಕೂ ಹೆಚ್ಚು ಸೋಲಾರ್ ದೀಪಗಳು ಹಾಗೂ ಸುರಕ್ಷತೆಗಾಗಿ ಇಡೀ ಪಾರ್ಕ್‌ಗೆ ಸಿಸಿಟಿವಿ (CCTV) ಕಣ್ಗಾವಲನ್ನು ಅಳವಡಿಸಲಾಗಿದೆ.

ಕಾವೇರಿ ಮಡಿಲಿಗೆ ಕಸ ಎಸೆಯುತ್ತಿದ್ದ ಜಾಗದಲ್ಲೇ ಇಂದು ಹೂವುಗಳು ಅರಳುವಂತೆ ಮಾಡಿರುವ ಈ ಬೃಹತ್ ಯೋಜನೆಗೆ ಸ್ಥಳೀಯ ಶಾಸಕರಾದ ಡಾ. ಮಂತರ್ ಗೌಡ, ತಾಲೂಕು ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ವಿ.ಪಿ.ಶಶಿಧರ್, ಅಧ್ಯಕ್ಷರಾದ ಪ್ರಮೋದ್ ಮುತ್ತಪ್ಪ, ಮುಖ್ಯಾಧಿಕಾರಿ ಗಿರೀಶ್ ಹಾಗೂ ಸ್ಥಳೀಯ ದಾನಿಗಳು ಮತ್ತು ಉದ್ದಿಮೆದಾರರು ಆರ್ಥಿಕ ಹಾಗೂ ಸಾಮಾಜಿಕ ಬೆಂಬಲ ನೀಡಿದ್ದಾರೆ.

ಇತಿಹಾಸವನ್ನು ಸಮಾಧಿ ಮಾಡದೆ ಅದನ್ನು ಭವಿಷ್ಯದ ಸುಂದರ ಪ್ರವಾಸಿ ತಾಣವನ್ನಾಗಿ ಮಾರ್ಪಡಿಸಬಹುದು ಎಂಬುದಕ್ಕೆ ಇಡೀ ರಾಜ್ಯಕ್ಕೇ ಮಾದರಿಯಾಗಿರುವ ಈ ಪಾರ್ಕ್, ಕೊಡಗಿನ ಪ್ರವಾಸೋದ್ಯಮದ ಮುಕುಟಕ್ಕೆ ಮತ್ತೊಂದು ರತ್ನಪ್ರಾಯ ಗರಿಯಾಗಿದೆ.
ವರದಿ: ನವೀನ ಚಿಣ್ಣಪ್ಪ, ಚಿಕ್ಕಬೆಟ್ಟಗೇರಿ




