ನಾಪೋಕ್ಲು: ಸಾಂಪ್ರದಾಯಿಕ ಹಬ್ಬ ಹರಿ ದಿನಗಳ ಆಚರಣೆಯಿಂದ ಸಂಸ್ಕೃತಿ,ಪದ್ಧತಿ, ಪರಂಪರೆ ಗಳನ್ನು ಉಳಿಸಿ ಬೆಳೆಸುವುದರೊಂದಿಗೆ ಸಾಮಾಜಿಕ ಸಾಮರಸ್ಯಕ್ಕೆ ಕಾರಣವಾಗಲಿದೆ ಎಂದು ಶಾಸಕ , ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್.ಪೊನ್ನಣ್ಣ ಹೇಳಿದರು ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ನಾಪೋಕಳುವಿನಲ್ಲಿ ಆಯೋಜಿಸಲಾಗಿದ್ದ 34ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಅಲಂಕೃತ ವಾಹನಗಳ ಮೆರವಣಿಗೆಗೆ ಹಳೆ ತಾಲೂಕಿನಲ್ಲಿ ಈಡುಗಾಯಿ ಒಡೆದು ಚಾಲನೆ ನೀಡಿ ಅವರು ಮಾತನಾಡಿದರು. ನಾಲ್ಕು ನಾಡು ವ್ಯಾಪ್ತಿಯ ಆಟೋ ಚಾಲಕರು ಆಟೋ ಚಾಲನೆಯಿಂದ ದಿನನಿತ್ಯದ ಬದುಕನ್ನು ಸಾಗಿಸುತ್ತಿದ್ದು ವರ್ಷದಲ್ಲಿ ಇಂತಹ ಅದ್ದೂರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಸಂತಸದ ವಿಷಯ. ಮುಂದಿನ ವರ್ಷಗಳಲ್ಲಿ ಮತ್ತಷ್ಟು ವೈಭವ ಪೂರ್ಣವಾಗಿ ಕಾರ್ಯಕ್ರಮ ಆಚರಿಸುವಂತಾಗಲಿ ಎಂದರು. 1984ರಲ್ಲಿ ತಮ್ಮ ತಂದೆ ಬೆಂಗಳೂರಿನಲ್ಲಿ ಬಹುಜನ ಸಮಾಜ ಪಾರ್ಟಿಯಿಂದ ಚುನಾವಣೆಗೆ ನಿಂತಿದ್ದ ನೆನಪನ್ನು ಹಂಚಿಕೊಂಡರು. ಆ ಸಮಯದಲ್ಲಿ ಕಾರ್ಯಕರ್ತರ ಕೊರತೆಯಿದ್ದ ಕಾರಣ, ತಾವೇ ಸ್ವತಃ 20-25 ದಿನಗಳ ಕಾಲ ಬೆಳಿಗ್ಗೆ ಎದ್ದು ಆಟೋ ಓಡಿಸಿ, ಮೈಕ್ನಲ್ಲಿ ಭಾಷಣ ಮಾಡಿ, ಕರಪತ್ರಗಳನ್ನು ಹಂಚಿ ಪ್ರಚಾರ ಮಾಡಿದ ತಮ್ಮ ಗತಕಾಲವನ್ನು ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಚಾಲನೆ ಮಾಡುವುದರ ಮೂಲಕ ಅಲಂಕೃತ ವಾಹನಗಳ ಮೆರವಣಿಗೆಗೆ ಅವರು ಚಾಲನೆ ನೀಡಿದರು. ಈ ಸಂದರ್ಭ ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘದ ವತಿಯಿಂದ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಅಲಂಕೃತ ವಾಹನಗಳ ಅದ್ದೂರಿ ಮೆರವಣಿಗೆ ಹಳೆ ತಾಲೂಕಿನಿಂದ ಮಾರುಕಟ್ಟೆ ಆವರಣದವರೆಗೆ ಸಾಗಿತು. ಬಳಿಕ ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜೆ ನೆರವೇರಿಸಲಾಯಿತು . ✍️ವರದಿ ದುಗ್ಗಳ ಸದಾನಂದ


ಕಾಮೆಂಟ್ಗಳು (0)