ಸುಂಟಿಕೊಪ್ಪ ಅ.16: ಮಲಯಾಳಿ ಸಮಾಜದವರಿಗೆ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ನಿವೇಶನ ಒದಗಿಸಲು ಶಾಸಕರ ಅನುದಾನ ನೀಡಲಾಗುವುದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಭರವಸೆ ನೀಡಿದರು. ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ ನಿನ್ನೆ ದಿನ ಗುರುವಾರ ನಡೆದ 19ನೇ ವರ್ಷದ ಓಣಂ ಆಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಲಯಾಳಿ ಸಮಾಜದವರಿಗೆ ನಿವೇಶನ ಒದಗಿಸಬೇಕೆಂಬ ಬೇಡಿಕೆ ಇದೆ. ಜಿಲ್ಲಾ ಮಟ್ಟದಲ್ಲಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದ್ದು, ಇದಕ್ಕೆ ಶಾಸಕರ ಅನುದಾನ ನೀಡಲಾಗುವುದು ಎಂದರು. ಸುಂಟಿಕೊಪ್ಪ ಮಲಯಾಳಿ ಸಮಾಜದವರು ಸೂಕ್ತ ಜಾಗ ಗುರುತಿಸಿದಲ್ಲಿ ಕಟ್ಟಡ ನಿರ್ಮಾಣಕ್ಕೂ ಸಹಕಾರ ನೀಡುವುದಾಗಿ ಅವರು ತಿಳಿಸಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಸಂಭ್ರಮದ ಘೋಷಯಾತ್ರೆ ನಡೆಯಿತು. ಕೇರಳದ ಸಾಂಪ್ರದಾಯಿಕ ಚಂಡೆ ವಾದ್ಯ ಹಾಗೂ ಮಾವೇಲಿ ವೇಷಧಾರಿಯೊಂದಿಗೆ ಮಲಯಾಳಿ ಬಾಂಧವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಸಮಾಜದ ಅಧ್ಯಕ್ಷ ವಾಸುದೇವ ಕೆ.ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಡಿಕೆರಿ ಪ್ರಸನ್ನ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್, ಕೊಡಗು ಮಲಯಾಳಿ ಸಮಾಜದ ಅಧ್ಯಕ್ಷ ಎ.ಎಂ. ವಿಜಯನ್ ಹಾಗೂ ಎಸ್‌ಎನ್‌ಡಿಪಿ ಕೊಡಗು ಅಧ್ಯಕ್ಷ ಎ.ಕೆ. ಲೋಕೇಶ್ ಪಾಲ್ಗೊಂಡಿದ್ದರು. ಜಿಲ್ಲಾ ಮಲಯಾಳಿ ಸಮಾಜದ ಉಪಾಧ್ಯಕ್ಷ ಸುಧೀರ್ ಟಿ.ಕೆ., ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ಬಿ. ಭಾರತೀಶ್, ಸುಂಟಿಕೊಪ್ಪ ಪಿಡಿಒ ವಿ.ಜಿ. ಲೋಕೇಶ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಸ್ಥಾಪಕ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್, ಮಾಜಿ ಅಧ್ಯಕ್ಷರಾದ ಪಿ.ಸಿ. ಮೋಹನ್ ಮತ್ತು ಶಶಿಕುಮಾರ್, ಮುರ್ನಾಡು ಮಲಯಾಳಿ ಸಮಾಜದ ಅಧ್ಯಕ್ಷ ಬಾಬು ಹಾಗೂ ಸುಂಟಿಕೊಪ್ಪ ಮಲಯಾಳಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಸೈಜಾ ವಿ. ಉಪಸ್ಥಿತರಿದ್ದರು.




ಕಾಮೆಂಟ್‌ಗಳು (0)