ನಾಪೋಕ್ಲು: ಬಿಲ್ಲವ ಸಮಾಜ, ನಾಪೋಕ್ಲು (ರಿ.) ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮವನ್ನು ಸಂಘದ ನಿವೇಶನದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಪೂಜಾ ಕಾರ್ಯಕ್ರಮವನ್ನು ಶ್ರೀ ಭಗವತಿ ದೇವಾಲಯದ ಅರ್ಚಕರಾದ ಹರೀಶ್ ಭಟ್ ಅವರು ಶಾಸ್ತ್ರೋಕ್ತವಾಗಿ ನೆರವೇರಿಸಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಿ ನಾಡಿನ ಸಮಸ್ತ ಜನರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಬಿರ್ವಾಸ್ ಗೋಣಿಕೊಪ್ಪದ ವತಿಯಿಂದ ಆಯೋಜಿಸಲಾಗಿದ್ದ 3 ನೇ ವರ್ಷದ 'ಪೂಜಾರಿ ಪ್ರೀಮಿಯರ್ ಲೀಗ್ (PPL) –2026' ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಲ್ಲವ ಸಮಾಜ ನಾಪೋಕ್ಲು ಪರವಾಗಿ ಭಾಗವಹಿಸಿ ಮಹಿಳೆಯರ ಥ್ರೋಬಾಲ್: ಪ್ರಥಮ ಹಾಗೂ ದ್ವಿತೀಯ ಸ್ಥಾನ, ಪುರುಷರ ಹಗ್ಗಜಗ್ಗಾಟ: ದ್ವಿತೀಯ ಸ್ಥಾನ, ಮಹಿಳೆಯರ ನೃತ್ಯ ಸ್ಪರ್ಧೆ: ದ್ವಿತೀಯ ಸ್ಥಾನ, ಏಕ ನೃತ್ಯ ಸ್ಪರ್ಧೆ: ಕುಮಾರ ಕೃತನ್ ಅವರಿಗೆ ಪ್ರಥಮ ಸ್ಥಾನ. ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಬಿಲ್ಲವ ಸಮಾಜ, ನಾಪೋಕ್ಲು (ರಿ.) ಅಧ್ಯಕ್ಷರಾದ ಬಿ.ಎಂ. ಪ್ರತೀಪ್ ಅವರು ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, "ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಒಗ್ಗಟ್ಟು ಹಾಗೂ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆಯಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಯುವ ಜನತೆ ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು" ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜ, ನಾಪೋಕ್ಲು (ರಿ.) ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಬಂಧುಗಳು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ✍️ವರದಿ ದುಗ್ಗಳ ಸದಾನಂದ.



ಕಾಮೆಂಟ್ಗಳು (0)