ಮಡಿಕೇರಿ, ಅ.24: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಪತ್ರಕರ್ತರ ಸಂಘ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರು ಹಾಗೂ ಸಾಹಿತಿಗಳಾಗಿದ್ದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಇಂದು ನಗರದ ಕೊಡಗು ಪತ್ರಿಕಾ ಭವನದಲ್ಲಿ ನಡೆಯಿತು. ಈ ವರ್ಷದ ದತ್ತಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಹಾಗೂ ವಕೀಲರಾದ ಬಾಳೆಯಡ ಕಿಶನ್ ಪೂವಯ್ಯ ಅವರಿಗೆ ಪ್ರದಾನ ಮಾಡಲಾಯಿತು. ಹಾಗೂ ಅವರು ರಚಿಸಿರುವ "ರಾಜಕೀಯ ಮತ್ತು ಪ್ರಕೃತಿ" ಕೃತಿಗೆ ಈ ಗೌರವ ಲಭಿಸಿದೆ. ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಎಂ .ಪಿ. ಕೇಶವ ಕಾಮತ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದುವರೆಗೆ 45 ದತ್ತಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ, ಪ್ರಸ್ತುತ ಪರಿಷತ್ತಿನಲ್ಲಿ 3500 ಸದಸ್ಯರಿದ್ದಾರೆ ಎಂದು ತಿಳಿಸಿದರು. ಈ ಬಾರಿಯ ಪ್ರಶಸ್ತಿಗಾಗಿ ನಾಲ್ಕು ಪುಸ್ತಕಗಳು ಸ್ಪರ್ಧೆಯಲ್ಲಿದ್ದು, ಅವುಗಳಲ್ಲಿ ಬಾಳೆಯಡ ಕಿಶನ್ ಪೂವಯ್ಯ ಅವರ ಕೃತಿಗೆ ದಿ. ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ದೊರೆತಿದೆ ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಮಾತನಾಡಿ , ದಿ. ಬಿ.ಎಸ್. ಗೋಪಾಲಕೃಷ್ಣ ಅವರ ವ್ಯಕ್ತಿತ್ವವನ್ನು ನೆನಪಿಸಿಕೊಂಡರು, ಪತ್ರಿಕೆಯ ಸಂಪಾದಕರಾಗಿ ಗಂಭೀರ ಜವಾಬ್ದಾರಿ ಹೊತ್ತಿದ್ದರೂ ಮಕ್ಕಳೊಂದಿಗೆ ಅಪಾರ ವಾತ್ಸಲ್ಯದಿಂದ ಬೆರೆಯುತ್ತಿದ್ದರು. ಅವರನ್ನು ಕಂಡ ಮಕ್ಕಳು "ಚಾಕ್ಲೇಟ್ ತಾತ" ಎಂದು ಕರೆಯುತ್ತಿದ್ದುದು ಅವರ ಸರಳತೆ, ಮಮತೆ ಮತ್ತು ಮಕ್ಕಳ ಮೇಲಿನ ಪ್ರೀತಿಗೆ ಸಾಕ್ಷಿ ಎಂದರು. ಶಕ್ತಿ ಪತ್ರಿಕೆ ಆರಂಭವಾದ ರೀತಿಯನ್ನು ಅವರು ವಿವರವಾಗಿ ಸ್ಮರಿಸಿದರು. ಪತ್ರಿಕೆಯನ್ನು ಕಟ್ಟಿ ಬೆಳೆಸುವಲ್ಲಿ ಗೋಪಾಲಕೃಷ್ಣ ಅವರು ಇಟ್ಟಿದ್ದ ನಂಬಿಕೆ, ತೋರಿದ ಸಹಿಷ್ಣುತೆ ಹಾಗೂ ಸಹೋದ್ಯೋಗಿಗಳು ಮತ್ತು ಸಿಬ್ಬಂದಿಯೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧವೇ ಪತ್ರಿಕೆಯ ಬೆಳವಣಿಗೆಗೆ ಅಡಿಪಾಯವಾಯಿತು ಎಂದು ಹೇಳಿದರು. ತಮ್ಮೊಂದಿಗೆ ದುಡಿಯುವವರನ್ನು ಕುಟುಂಬದ ಸದಸ್ಯರಂತೆ ಕಾಣುವ ಗುಣ ಅವರದ್ದಾಗಿತ್ತು ಎಂದರು. ಕಾರ್ಯಕ್ರಮದಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದ ಬಾಳೆಯಡ ಕಿಶನ್ ಪೂವಯ್ಯ ಅವರನ್ನು ಹಿರಿಯ ಪತ್ರಕರ್ತರಾದ ಎಸ್ ಜಿ ಉಮೇಶ್ ಪರಿಚಯಿಸಿದರು. ಅವರ "ರಾಜಕೀಯ ಮತ್ತು ಪ್ರಕೃತಿ" ಕೃತಿಯ ಕಿರುಪರಿಚಯವನ್ನು ಗಡಿನಾಡ ಸಂಚಾರಿ ಪತ್ರಿಕೆಯ ಸಂಪಾದಕರಾದ ಟಿ.ಪಿ. ರಮೇಶ್ ಅವರು ಮಾಡಿಕೊಟ್ಟರು. ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಚ್.ಟಿ. ಅನಿಲ್ ಅವರು ಮಾತನಾಡಿ, "ಇಂದಿನ ಪ್ರಶಸ್ತಿ ಪುರಸ್ಕೃತ ಲೇಖಕರು ಸೀಜನ್ ಬರಹಗಾರರಲ್ಲ. ಯಾವುದೋ ಒಂದು ಸಂದರ್ಭ ಅಥವಾ ಸಮಯಕ್ಕೆ ಸೀಮಿತವಾಗಿ ಬರೆಯುವವರಲ್ಲ; ವರ್ಷವಿಡೀ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಾ ನಿರಂತರವಾಗಿ ಬರೆಯುತ್ತಿರುವವರು. ಅವರ ಬರವಣಿಗೆ ಸದಾ ಸಮಾಜ ಸುಧಾರಣೆಯ ದೃಷ್ಟಿಕೋನದಿಂದ ಕೂಡಿರುತ್ತದೆ. ಸಮಾಜದಲ್ಲಿನ ಓರೆಕೋರೆಗಳನ್ನು ತಿದ್ದುವ, ಜನರಲ್ಲಿ ಅರಿವು ಮೂಡಿಸುವ ಉದ್ದೇಶ ಅವರ ಬರಹಗಳಲ್ಲಿ ಎದ್ದು ಕಾಣುತ್ತದೆ" ಎಂದು ಶ್ಲಾಘಿಸಿದರು. ಮುಂದುವರಿದು ಮಾತನಾಡಿದ ಅವರು, "ಲೇಖಕರ ಬರವಣಿಗೆ ಹಾಗೂ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಅವರ ಕುಟುಂಬದವರ ಪಾತ್ರ ಬಹಳ ದೊಡ್ಡದು. ಕುಟುಂಬದವರು ನೀಡಿದ ಪ್ರೋತ್ಸಾಹ, ಸಹಕಾರ ಹಾಗೂ ನಿರಂತರ ಬೆಂಬಲವೇ ಅವರನ್ನು ಈ ಮಟ್ಟಕ್ಕೆ ಬೆಳೆಸಿದೆ" ಎಂದು ತಿಳಿಸಿದರು. ಇದೇ ಸಂದರ್ಭ ಪುಸ್ತಕವನ್ನು ಪ್ರಕಟಿಸಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಅವರನ್ನು ಸನ್ಮಾನಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿದರು. ದತ್ತಿದಾನಿ ಹಾಗೂ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷ ಬಿ.ಜಿ. ಅನಂತಶಯನ, ಆಶಾ ಹೆಗಡೆ , ಬಾಳೆಯಡ ಸವಿತಾ ಕಿಶನ್, ಮತ್ತಿತರ ಸಾಹಿತಿಗಳು ಮತ್ತು ಕೊಡಗು ಪತ್ರಕರ್ತರ ಸಂಘದ ಸದಸ್ಯರು ಉಪಸಿತರಿದ್ದರು.




ಕಾಮೆಂಟ್ಗಳು (0)