ನಾಪೋಕ್ಲು: ಇಲ್ಲಿಯ ಮಾರುಕಟ್ಟೆ ಆವರಣದಲ್ಲಿ 'ನಾಲ್ಕು ನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ' ಹಾಗೂ 'ವಾಹನ ಚಾಲಕರ ಸಂಘ, ನಾಪೋಕ್ಲು' ಇದರ ವತಿಯಿಂದ ೩೪ನೇ ವರ್ಷದ ಆಯುಧ ಪೂಜಾ ಸಭಾ ಕಾರ್ಯಕ್ರಮ ವಿಜ್ರಂಭಣೆಯಿಂದ ಜರುಗಿತು. ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ವೇದಿಕೆಯಲ್ಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೂರ್ನಾಡಿನ ನಕ್ಷತ್ರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ ಮಾತನಾಡಿ, "ಇಲ್ಲಿಯ ಆಟೋ ಚಾಲಕರ ಸಂಘವು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ. ಉತ್ತಮ ನಾಯಕತ್ವ ಇರುವಲ್ಲಿ ಸಂಘ ಸಂಸ್ಥೆಗಳು ಬೆಳೆಯುತ್ತವೆ. ಅಧ್ಯಕ್ಷ ಸುಕುಮಾರ್ ಅವರ ಮಾರ್ಗದರ್ಶನದಲ್ಲಿ ಆಯುಧ ಪೂಜೆ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು, ಇದಕ್ಕೆ ಅವರ ನಾಯಕತ್ವ ಗುಣವೇ ಕಾರಣ," ಎಂದರು. ಇದೇ ವೇಳೆ ಆಟೋ ನಿಲ್ದಾಣದಲ್ಲಿ ಮೇಲ್ಚಾವಣಿ ನಿರ್ಮಿಸುವ ಅಗತ್ಯವಿದ್ದು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಾಯಕರು ಸಂಘಟಿತ ಪ್ರಯತ್ನ ನಡೆಸಬೇಕು ಎಂದು ಮನವಿ ಮಾಡಿದರು. ಹೊದ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಂಸ ಮಾತನಾಡಿ, ಆಟೋ ಚಾಲಕರ ಸಂಘಟನೆಯು ಯುವಕರಿಗೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು. ಇಂತಹ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ಕಲ್ಪಿಸಲು ಶಾಸಕರ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್ ಮಾತನಾಡಿ, ಸಂಘ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಸಂತಸದ ವಿಚಾರವಾಗಿದೆ. ಊರಿನಲ್ಲಿ ಯಾವುದೇ ಸಂಘಟನೆಗಳು ಕಾರ್ಯಕ್ರಮ ಆಯೋಜಿಸಿದರೂ ಶಾಸಕರು ಹಾಗೂ ತಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ಸ್ಥಳೀಯ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರದೀಪ ಮಾತನಾಡಿ, ನಾಡಿನ ಜನರ ಜೀವ ರಕ್ಷಕರಾಗಿರುವ ಡಾ. ಎಚ್.ವಿ. ದೇವದಾಸ್ ಅವರನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಸಂಘದ ಉತ್ತಮ ಕಾರ್ಯ ಎಂದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾ ಪ್ರಭು ಸಂಘದ ಕಾರ್ಯವೈಖರಿಗೆ ಶುಭ ಹಾರೈಸಿದರು. ದಾನಿ ಡಾ. ಎಚ್.ವಿ. ದೇವದಾಸ್ ಅವರಿಗೆ ಸನ್ಮಾನ: ಆಯುಧ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡವರಿಗೆ ರಾತ್ರಿಯ ಭೋಜನದ ವ್ಯವಸ್ಥೆ ಕಲ್ಪಿಸಿದ ನಾಪೋಕ್ಲುವಿನ ದಾನಿ ಹಾಗೂ ವೈದ್ಯರಾದ ಡಾ. ಎಚ್.ವಿ. ದೇವದಾಸ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, "ನಾಪೋಕ್ಲು ಪಟ್ಟಣದಲ್ಲಿ ಎರಡನೇ ಬಾರಿಗೆ ಸನ್ಮಾನ ದೊರಕಿರುವುದು ಸಂತಸ ತಂದಿದೆ. ಆಟೋ ಚಾಲಕರ ಸಂಘದಿಂದ ಇಂತಹ ಇನ್ನಷ್ಟು ಸಮಾಜಮುಖಿ ಸೇವೆಗಳು ಮೂಡಿಬರಲಿ," ಎಂದು ಶುಭ ಹಾರೈಸಿದರು. ಇದಕ್ಕೂ ಮೊದಲು ನಡೆದ ಮೆರವಣಿಗೆಯಲ್ಲಿ ಅಲಂಕೃತ ವಾಹನಗಳ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಣ್ಯರು ಟ್ರೋಫಿ ವಿತರಿಸಿದರು. ಕಾರ್ಯಕ್ರಮದ ನಂತರ ಜರುಗಿದ 'ಸಂಗೀತ ರಸಮಂಜರಿ' ಜನಮನ ರಂಜಿಸಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು: ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಶೌಕತ್ ಆಲಿ, ಅಂಕುರ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕೆಟೋಳಿರ ರತ್ನ ಚರ್ಮಣ, ಕೊಣಂಜಗೇರಿ ಪಂಚಾಯತಿ ಮಾಜಿ ಸದಸ್ಯ ನಾಯಕಂಡ ಮುತ್ತಣ್ಣ, ಗುತ್ತಿಗೆದಾರ ಜಲೇಂದ್ರ , ತೀರೋಡಿರ ನಿರುಪ್, ಗೂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಕೆ. ಅನಿಲ್, ಪಂಚಾಯತಿ ಮಾಜಿ ಸದಸ್ಯ ಪಿ.ಎ. ಹನೀಫ್, ಸಂಘದ ಮಾಜಿ ಅಧ್ಯಕ್ಷ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಹಿರಿಯ ಪತ್ರಕರ್ತ ದುಗ್ಗಳ ಸದಾನಂದ, ಸಂಘದ ಗೌರವ ಅಧ್ಯಕ್ಷ ಅಬ್ದುಲ್ ರಜಾಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅಮ್ಮಂಡ ಪಲ್ಲವಿ ಸನ್ಮಾನಿತರನ್ನು ಪರಿಚಯಿಸಿ ಸಿ.ಎಂ. ಉಸ್ಮಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ✍️ವರದಿ ದುಗ್ಗಳ ಸದಾನಂದ


ಕಾಮೆಂಟ್ಗಳು (0)