ನಾಪೋಕ್ಲು: ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಈ ಬಾರಿಯ ಕಾವೇರಿ ತೀರ್ಥೋದ್ಭವಕ್ಕೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದೆ. ಬಿಗಿ ಭದ್ರತೆ ಮತ್ತು ಬ್ಯಾರಿಕೇಡ್ ವ್ಯವಸ್ಥೆ ತೀರ್ಥೋದ್ಭವದ ಸಂದರ್ಭದಲ್ಲಿ ಜನದಟ್ಟಣೆಯನ್ನು ನಿಯಂತ್ರಿಸಲು ಕಾವೇರಿ ಕುಂಡಿಕೆಯ ಸುತ್ತ ಸುಮಾರು ಆರು ಅಡಿ ಎತ್ತರದ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ಭಕ್ತರು ಸರಾಗವಾಗಿ ಸಂಚರಿಸಲು ನಾಲ್ಕು ಬಾಕ್ಸ್ ರೀತಿಯಲ್ಲಿ ಬ್ಯಾರಿಕೇಡ್ಗಳನ್ನು ನಿರ್ಮಿಸಲಾಗಿದ್ದು, ಏಕಮಾರ್ಗ (ಒನ್ವೇ) ವ್ಯವಸ್ಥೆ ಕಲ್ಪಿಸಲಾಗಿದೆ. ಸಂಚಾರ ಹಾಗೂ ಸುರಕ್ಷತೆಗಾಗಿ ಕುಂಡಿಕೆಯ ಸುತ್ತ ಹೈ ಮಾಸ್ಟ್ ಲ್ಯಾಂಪ್ಗಳನ್ನು ಅಳವಡಿಸಲಾಗುತ್ತಿದೆ. ವಿವಿಐಪಿಗಳಿಗೆ ಪ್ರತ್ಯೇಕ ಮಾರ್ಗ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ಪಂಡಾಲ್/ಷಾವಣೆ ವ್ಯವಸ್ಥೆ ಮಾಡಲಾಗಿದ್ದು, ಮಳೆ ಬಂದರೂ ಯಾವುದೇ ಅಡಚಣೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಿಸಿ ಕ್ಯಾಮೆರಾ ಕಣ್ಗಾವಲು ಹಾಗೂ ಎಲ್ಇಡಿ ಪರದೆ ಎರಡೂ ಕ್ಷೇತ್ರಗಳಲ್ಲಿ ನೈರ್ಮಲ್ಯ ಹಾಗೂ ನಿಕಟ ಕಣ್ಗಾವಲಿಗಾಗಿ ಹೈಟೆಕ್ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿಯಲ್ಲಿ 49 ಹಾಗೂ ಭಾಗಮಂಡಲದಲ್ಲಿ 28 ಸೇರಿದಂತೆ ಒಟ್ಟು 53ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಭದ್ರತೆಗಾಗಿ ಅಳವಡಿಸಲಾಗಿದೆ. ತೀರ್ಥೋದ್ಭವದ ನೇರ ಪ್ರಸಾರವನ್ನು ವೀಕ್ಷಿಸಲು ತಲಕಾವೇರಿಯಲ್ಲಿ 4 ಹಾಗೂ ಭಾಗಮಂಡಲದಲ್ಲಿ 1 ಸೇರಿದಂತೆ ಒಟ್ಟು 5 ಎಲ್ಇಡಿ ವಾಲ್ಗಳನ್ನು ನಿರ್ಮಿಸಲಾಗಿದೆ. ಭಕ್ತರು ನೇರವಾಗಿ ಭಾಗಮಂಡಲದಲ್ಲೇ ತೀರ್ಥೋದ್ಭವವನ್ನು ವೀಕ್ಷಿಸಬಹುದಾಗಿದೆ. ಮೂಲಸೌಕರ್ಯ ಮತ್ತು ಸುಸಜ್ಜಿತ ರಸ್ತೆ ದೀಪಗಳು ಭಾಗಮಂಡಲ ಪ್ರವಾಸಿ ಮಂದಿರದಿಂದ ತಲಕಾವೇರಿಯವರೆಗೆ ಸುಮಾರು 10 ಕಿಲೋಮೀಟರ್ ವ್ಯಾಪ್ತಿಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಭಾಗಮಂಡಲದಿಂದ ತಲಕಾವೇರಿವರೆಗೆ 7 ಮೊಬೈಲ್ ಶೌಚಾಲಯಗಳು, ಗ್ರಾಮ ಪಂಚಾಯಿತಿಯಿಂದ ಪ್ರತ್ಯೇಕ ಶೌಚಾಲಯ ಹಾಗೂ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಲಾಗಿದೆ. ಅನ್ನದಾನ: ಭಾಗಮಂಡಲದಲ್ಲಿ ಪ್ರತಿದಿನ ಮಧ್ಯಾಹ್ನ ನಿರಂತರ ಅನ್ನದಾನ ಹಾಗೂ ತಲಕಾವೇರಿಯಲ್ಲಿ ಏಕೀಕರಣ ರಂಗದ ವತಿಯಿಂದ ಅನ್ನದಾನ ವ್ಯವಸ್ಥೆ ಇರಲಿದೆ. ತ್ರಿವೇಣಿ ಸಂಗಮದಲ್ಲಿ ಪಿಂಡಪ್ರದಾನ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹೂಳು ತೆಗೆಯುವ ಕಾರ್ಯ ಪ್ರಗತಿಯಲ್ಲಿದ್ದು, ಅಕ್ಟೋಬರ್ 17 ಮತ್ತು 18ರಂದು ಸೂರ್ಯೋದಯದಿಂದ ಸಂಜೆ 4 ಗಂಟೆಯವರೆಗೆ ಭಕ್ತರಿಗೆ ಪಿಂಡಪ್ರದಾನಕ್ಕೆ ಅವಕಾಶ ನೀಡಲಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸೂಚಿಸಲಾಗಿದೆ. ಡಿವೈಎಸ್ಪಿ ಮೇದಪ್ಪ ಹಾಗೂ ಭಾಗಮಂಡಲ ಠಾಣಾಧಿಕಾರಿ ದಿನೇಶ್ ರೆಡ್ಡಿ ಅವರು ಸ್ಥಳಕ್ಕೆ ಭೇಟಿ ನೀಡಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ. ವಿಶೇಷ ಬಸ್ ವ್ಯವಸ್ಥೆ ಹಾಗೂ ಪೂಜೆ ಸಂಚಾರ ದಟ್ಟಣೆ ಹಾಗೂ ವಾಹನ ನಿಲುಗಡೆ ಸಮಸ್ಯೆಯನ್ನು ತಪ್ಪಿಸಲು ಭಕ್ತರು ಸರಕಾರಿ ಬಸ್ಗಳನ್ನು ಬಳಸುವಂತೆ ಆಡಳಿತಾಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ. ಭಾಗಮಂಡಲದಿಂದ ತಲಕಾವೇರಿಗೆ ವಿಶೇಷ ಕೆಎಸ್ಆರ್ಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ತೀರ್ಥೋದ್ಭವ ಮುಹೂರ್ತ: ಅಕ್ಟೋಬರ್ 17ರ ಶನಿವಾರ ರಾತ್ರಿ 7.50ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತುಲಾಸಂಕ್ರಮಣದ ಪವಿತ್ರ ತೀರ್ಥೋದ್ಭವ ಜರುಗಲಿದೆ. ಈ ವೇಳೆ ಕುಂಡಿಕೆಯ ಬಳಿ ಗುರುರಾಜ್ ಮತ್ತು ಪ್ರಶಾಂತ್ ಆಚಾರ್ ತಂಡದಿಂದ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ವರದಿ ✍️ದುಗ್ಗಳ ಸದಾನಂದ.
ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಭರಪೂರ ಸಿದ್ಧತೆ: ಮೂಲಸೌಕರ್ಯ , ಹೈಟೆಕ್ ಭದ್ರತೆ, ಎಲ್ಇಡಿ ವಾಲ್ ವ್ಯವಸ್ಥೆ
by Kodagu Varadi•ಅಕ್ಟೋಬರ್ 17, 2026BREAKING

ಕಾಮೆಂಟ್ಗಳು (0)