ಗುಡ್ಡೆಹೊಸೂರು, ಅ. 21: ಕೊಣನೂರು–ಮಾಕುಟ್ಟ ರಾಜ್ಯ ಹೆದ್ದಾರಿ ವ್ಯಾಪ್ತಿಗೆ ಒಳಪಡುವ ಗುಡ್ಡೆಹೊಸೂರು ಗ್ರಾಮ ಪಂಚಾಯತ್ನ ಬಾಳುಗೋಡು–ರಸಲ್ಪುರ ಗ್ರಾಮದ ಬಳಿ ₹2.50 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಚಿಕ್ಲಿಹೊಳೆ ಎಡದಂಡೆ ನಾಲೆಗಳ ನೀರು ರಸ್ತೆಗೆ ಹರಿದು ಬರುತ್ತಿರುವುದೇ ವಿಳಂಬಕ್ಕೆ ಕಾರಣ ಎಂದು ತಿಳಿಸಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಅವರ ಪ್ರಯತ್ನದಿಂದ ಈ ಅನುದಾನ ಮಂಜೂರಾಗಿದ್ದು, ಸೆಪ್ಟೆಂಬರ್ 8ರಂದು ಶಾಸಕರ ಉಪಸ್ಥಿತಿಯಲ್ಲಿ ಗುದ್ದಲಿ ಪೂಜೆ ನೆರವೇರಿಸಲಾಗಿತ್ತು. ಸೆಪ್ಟೆಂಬರ್ 19ರಂದು ಕೆಲಸ ಆರಂಭವಾಗಬೇಕಿತ್ತಾದರೂ, ಆರಂಭವಾಗದ ಕಾರಣ ಸುತ್ತಮುತ್ತಲಿನ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗುಡ್ಡೆಹೊಸೂರು ವಲಯ ಕಾಂಗ್ರೆಸ್ ಅಧ್ಯಕ್ಷ ನಂಗಾರು ಜಗ ಅವರು ಶಾಸಕರು ಹಾಗೂ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರೊಂದಿಗೆ ಚರ್ಚೆ ನಡೆಸಿದ್ದಾರೆ. ಚಿಕ್ಲಿಹೊಳೆ ಎಡದಂಡೆಯ ಎರಡು ನಾಲೆಗಳಲ್ಲಿ ಅತ್ಯಧಿಕ ನೀರು ಹರಿಯುತ್ತಿದ್ದು, ಅದು ಸೋರಿಕೆಯಾಗಿ ರಸ್ತೆಗೆ ಬರುತ್ತಿದೆ. ಇದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ತಾತ್ಕಾಲಿಕವಾಗಿ ರಸ್ತೆಗೆ ಹರಿಯುವ ನೀರನ್ನು ರಸ್ತೆಯ ಬದಿಯ ಚರಂಡಿಯಲ್ಲಿ ಹರಿಯುವಂತೆ ಕಾಮಗಾರಿ ಮಾಡಲಾಗಿದ್ದು, ಸಾರ್ವಜನಿಕರಿಗೆ ಮೊದಲು ಇದ್ದಂತಹ ತೊಂದರೆಯು ಕಡಿಮೆಯಾಗಿರುತ್ತದೆ, ಇದೇ ಸಮಯದಲ್ಲಿ ಈ ವ್ಯಾಪ್ತಿಯ ರೈತರ ಭತ್ತದ ಬೆಳೆಗೆ ನೀರಿನ ಅವಶ್ಯಕತೆ ಇರುವುದರಿಂದ ನಾಲೆಗೆ ನೀರು ಹರಿ ಬಿಡುವುದನ್ನು ನಿಲ್ಲಿಸುವುದು ಸಾಧ್ಯವಿಲ್ಲ. ರೈತರ ಭತ್ತದ ಬೆಳೆ ಕಟಾವಾಗಿ ನಾಲೆಗಳ ನೀರನ್ನು ನಿಲ್ಲಿಸಿದ ತಕ್ಷಣದಿಂದಲೇ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ತಿಳಿಸಲಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕೆಂದು ವಲಯ ಕಾಂಗ್ರೆಸ್ ಅಧ್ಯಕ್ಷರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.





ಕಾಮೆಂಟ್ಗಳು (0)